ಕನ್ನಡಕ್ಕೆ ಆದ್ಯತೆ ನೀಡುವ ಹೋರಾಟಕ್ಕೆ ಕಾನೂನು ತೊಡಕು: ಡಾ. ಮಹೇಶ್ ಜೋಷಿ

KannadaprabhaNewsNetwork | Published : Oct 19, 2024 12:28 AM

ಸಾರಾಂಶ

ಪರಿಷತ್ತು ಕನ್ನಡ ಭಾಷೆ ಉಳಿಸಿ ಬೆಳೆಸಲು ಸಾಹಿತ್ಯ ಸಮ್ಮೇಳನಗಳ ಮೂಲಕ ಜನಜಾಗೃತಿ ಮೂಡಿಸುತ್ತಿದೆ. ಕನ್ನಡ ಭಾಷೆಯನ್ನು ಅನ್ನದ ಭಾಷೆಯನ್ನಾಗಿಸಬೇಕು, ಕನ್ನಡಿಗರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಮೊದಲ ಅವಕಾಶ, ಪ್ರಾಥಮಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲಿಯೇ ಇರಬೇಕು. ಸರ್ಕಾರಿ ಕನ್ನಡ ಶಾಲೆಗಳು ಉಳಿಯಬೇಕು. ಅನುದಾನಿತ ಸರ್ಕಾರಿ ಶಾಲೆಗಳಿಗೆ ಅನುದಾನ ನೀಡಬೇಕೆಂದು ಹೋರಾಟ ನಡೆಸುತ್ತಾ ಬಂದಿದೆ .

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕನ್ನಡ ಭಾಷೆಯನ್ನು ಅನ್ನದ ಭಾಷೆಯನ್ನಾಗಿ ಮಾಡಿ ಎಲ್ಲಾ ವಲಯಗಳಲ್ಲೂ ಕನ್ನಡಕ್ಕೆ ಆದ್ಯತೆ ಸಿಗುವಂತೆ ಮಾಡಲು ನಡೆಯುತ್ತಿರುವ ಹೋರಾಟಕ್ಕೆ ಕಾನೂನು ತೊಡಕುಗಳು ಸವಾಲಾಗಿ ಪರಿಣಮಿಸಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಹೇಳಿದರು.

ಪಟ್ಟಣದ ಸಾಹುಕಾರ್ ಎಸ್.ಕೆ.ಚಿಕ್ಕಣ್ಣಗೌಡ ಸಮುದಾಯ ಭವನದಲ್ಲಿ ಡಿಸೆಂಬರ್ ನಲ್ಲಿ ಮಂಡ್ಯ ನಗರದಲ್ಲಿ ನಡೆಯಲಿರುವ ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ್ ಜೋಶಿ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ಪರಿಷತ್ತು ಕನ್ನಡ ಭಾಷೆ ಉಳಿಸಿ ಬೆಳೆಸಲು ಸಾಹಿತ್ಯ ಸಮ್ಮೇಳನಗಳ ಮೂಲಕ ಜನಜಾಗೃತಿ ಮೂಡಿಸುತ್ತಿದೆ. ಕನ್ನಡ ಭಾಷೆಯನ್ನು ಅನ್ನದ ಭಾಷೆಯನ್ನಾಗಿಸಬೇಕು, ಕನ್ನಡಿಗರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಮೊದಲ ಅವಕಾಶ, ಪ್ರಾಥಮಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲಿಯೇ ಇರಬೇಕು. ಸರ್ಕಾರಿ ಕನ್ನಡ ಶಾಲೆಗಳು ಉಳಿಯಬೇಕು. ಅನುದಾನಿತ ಸರ್ಕಾರಿ ಶಾಲೆಗಳಿಗೆ ಅನುದಾನ ನೀಡಬೇಕೆಂದು ಹೋರಾಟ ನಡೆಸುತ್ತಾ ಬಂದಿದೆ ಎಂದರು.

ನಮ್ಮ ಬೇಡಿಕೆಯ ಪ್ರತಿಯೊಂದಕ್ಕೂ ಕೆಲವರು ನ್ಯಾಯಾಲಯದ ಮೊರೆ ಹೋಗುವ ಮೂಲಕ ಕನ್ನಡದ ಅನುಷ್ಠಾನಕ್ಕೆ ಕಾನೂನಿನ ತೊಡಕು ತರುತ್ತಿದ್ದಾರೆ. ನಮ್ಮ ನೆಲದಲ್ಲಿ ನಮ್ಮ ಭಾಷೆ, ನಮ್ಮ ಜನರ ಆಶೋತ್ತರ ಈಡೇರಿಸಲು ಹೋರಾಟ ನಡೆಸುವ ಅನಿವಾರ್‍ಯತೆ ಎದುರಾಗಿರುವದು ನಿಜ. ಈ ಹಿನ್ನೆಲೆಯಲ್ಲಿ ಸಮಗ್ರ ಕನ್ನಡ ಭಾಷಾ ವಿಧೇಯಕ ತಯಾರಾಗುತ್ತಿದೆ. ಅದು ಜಾರಿಯಾದರೆ ಪರಿಹಾರಗಳು ದೊರೆಯಲಿವೆ ಎಂದು ಹೇಳಿದರು.

ಮಂಡ್ಯದಲ್ಲಿ ನಡೆಯುವ ಮೂರು ದಿನಗಳ ಸಾಹಿತ್ಯ ಸಮ್ಮೇಳನಕ್ಕೆ ಕೃಷ್ಣರಾಜಪೇಟೆ ತಾಲೂಕಿನ ಪ್ರತಿಯೊಬ್ಬರು ಮನೆಯ ಹಬ್ಬದ ರೀತಿ ಸ್ವಯಂ ಪ್ರೇರಿತವಾಗಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಅಪರ ಜಿಲ್ಲಾಧಿಕಾರಿ ಡಾ. ಎಚ್.ಎಲ್.ನಾಗರಾಜು ಮಾತನಾಡಿದರು.

ಇದೇ ವೇಳೆ ಸಾಹಿತ್ಯ ಸಮ್ಮೆಳನದ ಸಂಚಾಲಕಿ ಮೀರಾ ಶಿವಲಿಂಗಯ್ಯ, ತಹಸೀಲ್ದಾರ್ ಎಸ್.ಯು ಅಶೋಕ್, ಬಿಇಒ ಚಂದ್ರಶೇಖರ್, ತಾಲೂಕು ಕಸಾಪ ಅಧ್ಯಕ್ಷ ಎಚ್.ಆರ್.ಪೂರ್ಣಚಂದ್ರ ತೇಜಸ್ವಿ, ಜಿಲ್ಲಾ ಕಸಾಪ ಸಂಚಾಲಕರಾದ ಹುಸ್ಕೂರು ಕೃಷ್ಣೇಗೌಡ, ಹರ್ಷ ರಾಮಲಿಂಗಶೆಟ್ಟಿ, ಅಂಜನಾ ಶ್ರೀಕಾಂತ್, ಪಣ್ಣೆದೊಡ್ಡಿ ಹರ್ಷ, ಬಿ.ಎಂ.ಅಪ್ಪಾಜಪ್ಪ, ಪಟೇಲ್ ಪಾಂಡು, ಶ್ರೀನಿವಾಸ ಮೂರ್ತಿ, ಮಾಜಿ ಅಧ್ಯಕ್ಷರಾದ ಕೆ.ಕಾಳೇಗೌಡ, ಕೆ.ಎಸ್.ಸೋಮಶೇಖರ್, ಎಂ.ಕೆ.ಹರಿಚರಣತಿಲಕ್, ಕೆ.ಆರ್.ನೀಲಕಂಠ, ಬಳ್ಳೇಕೆರೆ ಮಂಜುನಾಥ್ , ಪ್ರಾಂಶುಪಾಲ ಡಾ.ಕೆ.ಆರ್.ದಿನೇಶ್, ಹಿರಿಯ ಕಸಾಪ ಸದಸ್ಯರಾದ ಅಂ.ಚಿ.ಸಣ್ಣಸ್ವಾಮೀಗೌಡ, ಕತ್ತರ ಘಟ್ಟ ವಾಸು, ಮರುವಿನಹಳ್ಳಿ ಶಂಕರ್, ಬಲ್ಲೇನಹಳ್ಳಿ ಮಂಜುನಾಥ್, ಕಟ್ಟೆಮಹೇಶ್, ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರಿದ್ದರು.

Share this article