ಜನರ ಜೀವನದ ನೋವಿಗಾಗಿ ವಕೀಲ ವೃತ್ತಿ ಸ್ಪಂದನೆ

KannadaprabhaNewsNetwork |  
Published : Dec 14, 2024, 12:47 AM IST
ಪೊಟೋ: 13ಎಸ್‌ಎಂಜಿಕೆಪಿ07ಶಿವಮೊಗ್ಗದಲ್ಲಿ ಶುಕ್ರವಾರ ರಾಷ್ಟ್ರೀಯ ಶಿಕ್ಷಣ ಸಮಿತಿ ಹಾಗೂ ಸಿ.ಬಿ.ಆರ್. ಕಾನೂನು ಮಹಾವಿದ್ಯಾಲಯದ ವತಿಯಿಂದ ಚಂದನ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ `ಸಾರ್ವಜನಿಕ ಆಡಳಿತದಲ್ಲಿ ಲೋಕಾಯುಕ್ತರ ಪಾತ್ರ' ಕುರಿತು ಕರ್ನಾಟಕ ರಾಜ್ಯ ಉಪಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ಮಾತನಾಡಿದರು. | Kannada Prabha

ಸಾರಾಂಶ

ವಕೀಲ ವೃತ್ತಿ ಎಂಬುದು ಜನರಿಗೆ ಹತ್ತಿರವಾಗಿರುವ ವೃತ್ತಿ. ಹೇಗೆ ತಮ್ಮ ದೈಹಿಕ ನೋವಿಗೆ ವೈದ್ಯರನ್ನು ಸಂಪರ್ಕಿಸುತ್ತಾರೋ ಅದೇ ರೀತಿಯಲ್ಲಿ ಜನರ ಸಾಮಾಜಿಕ ಜೀವನ ನೋವಿಗೆ ಸ್ಪಂದಿಸುವವರು ವಕೀಲರು ಎಂದು ಕರ್ನಾಟಕ ರಾಜ್ಯ ಉಪಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ವಕೀಲ ವೃತ್ತಿ ಎಂಬುದು ಜನರಿಗೆ ಹತ್ತಿರವಾಗಿರುವ ವೃತ್ತಿ. ಹೇಗೆ ತಮ್ಮ ದೈಹಿಕ ನೋವಿಗೆ ವೈದ್ಯರನ್ನು ಸಂಪರ್ಕಿಸುತ್ತಾರೋ ಅದೇ ರೀತಿಯಲ್ಲಿ ಜನರ ಸಾಮಾಜಿಕ ಜೀವನ ನೋವಿಗೆ ಸ್ಪಂದಿಸುವವರು ವಕೀಲರು ಎಂದು ಕರ್ನಾಟಕ ರಾಜ್ಯ ಉಪಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ಹೇಳಿದರು.

ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿ ಹಾಗೂ ಸಿ.ಬಿ.ಆರ್. ಕಾನೂನು ಮಹಾವಿದ್ಯಾಲಯದ ವತಿಯಿಂದ ಶುಕ್ರವಾರ ಚಂದನ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ `ಸಾರ್ವಜನಿಕ ಆಡಳಿತದಲ್ಲಿ ಲೋಕಾಯುಕ್ತರ ಪಾತ್ರ ಕುರಿತು ಮಾತನಾಡಿ, ವಕೀಲಿ ವೃತ್ತಿಯನ್ನು ನೊಬಲ್ ಪ್ರೊಫೆಷನ್ ಎಂದು ಬಣ್ಣಿಸಲಾಗಿದೆ. ದೇಶವನ್ನು ಸುಭದ್ರವಾಗಿ ಕಟ್ಟುವ ಕಾರ್ಯದಲ್ಲಿ ವಕೀಲರ ಪಾತ್ರ ಮಹತ್ವದ್ದು ಎಂದರು.

ಸಾರ್ವಜನಿಕ ಆಡಳಿತದಲ್ಲಿ ಉಂಟಾಗುತ್ತಿರುವ ತೊಡಕುಗಳನ್ನು ನಿವಾರಿಸಲು ಲೋಕಾಯುಕ್ತ ಕಾಯ್ದೆ ಉತ್ತಮವಾದ ಕಾನೂನು. ಪ್ರತಿಯೊಬ್ಬ ಮಾನವನಿಗೆ ಬದುಕುವ ಹಕ್ಕಿದೆ. ಅಂತಹ ಬದುಕಿಗೆ ಬೇಕಾದ ಮೂಲಭೂತ ಅಗತ್ಯತೆಗಳನ್ನು ಒದಗಿಸುವುದು ಆಡಳಿತದ ಕರ್ತವ್ಯ. ಅದರೆ ಭ್ರಷ್ಟಾಚಾರ ವ್ಯವಸ್ಥೆಯಿಂದ, ದುರಾಡಳಿತದಿಂದ ಮನುಷ್ಯನಿಗೆ ಬದುಕಲು ಬೇಕಾದ ಅನಿವಾರ್ಯತೆಗಳನ್ನು ನೀಡುವಲ್ಲಿ ವಿಫಲವಾದಾಗ, ಲೋಕಾಯುಕ್ತ ವ್ಯವಸ್ಥೆ ಸಾಮಾನ್ಯ ಜನರ ಪರವಾಗಿ ನಿಲ್ಲುತ್ತದೆ ಎಂದು ತಿಳಿಸಿದರು.

ಸಮಯೋಚಿತವಾಗಿ ಕಾನೂನನ್ನು ಬಳಕೆ ಮಾಡಿಕೊಳ್ಳಬೇಕು. ಕರ್ತವ್ಯ ಮತ್ತು ಹಕ್ಕು ಒಂದು ನಾಣ್ಯದ ಎರಡು ಮುಖಗಳು. ಸತ್ತ ನಂತರವೂ ವ್ಯಕ್ತಿಯ ಮೃತದೇಹವನ್ನು ಕಾನೂನು ಕಾಪಾಡುತ್ತದೆ. ಅಷ್ಟರ ಮಟ್ಟಿಗೆ ಕಾನೂನು ಮಾನವ ಹಕ್ಕುಗಳನ್ನು ಎತ್ತಿ ಹಿಡಿಯುತ್ತಿದೆ. ಮೌಢ್ಯತೆ ಹೆಚ್ಚು ಪ್ರಾಬಲ್ಯಗೊಂಡಾಗ ಕಾನೂನು ಮಧ್ಯೆ ಪ್ರವೇಶಿಸುತ್ತದೆ. ಅದಕ್ಕೆ ಲಿಂಗ ತಾರತಮ್ಯ ಹೋಗಲಾಡಿಸಿ, ಎಲ್ಲರಿಗೂ ಬದುಕುವ ಹಕ್ಕಿದೆ ಎಂದು ಸಾರಿ ಹೇಳುವ ಕಾಯ್ದೆಗಳು ತೀರ್ಪುಗಳು ಉದಾಹರಣೆಯಾಗಿದೆ. ಒಬ್ಬರ ಹಕ್ಕುಗಳನ್ನು ಇನ್ನೊಬ್ಬರು ಕಾಪಾಡುವುದು ಕೂಡ ಮೂಲಭೂತವಾಗಿ ಕರ್ತವ್ಯವೇ ಆಗಿದೆ ಎಂದರು. ಲಂಚಕ್ಕೆ ಹೆಚ್ಚು ಪ್ರಾಮುಖ್ಯತೆ ಸಿಗುತ್ತಿದೆ. ಹಣವಿಲ್ಲದೆ ಏನು ಆಗುವುದಿಲ್ಲ ಎಂಬ ಪರಿಸ್ಥಿತಿ ಸಾರ್ವಜನಿಕ ಆಡಳಿತದಲ್ಲಿದೆ. ಇಂತಹ ವ್ಯವಸ್ಥೆಯನ್ನು ಸರಿಪಡಿಸುವಲ್ಲಿ ಸಾಮಾನ್ಯ ಜನರು ಕೂಡ ಲೋಕಾಯುಕ್ತದೊಂದಿಗೆ ಕೈಜೋಡಿಸಿ ಎಂದು ಹೇಳಿದರು.

ಕಲಿಕೆಗೆ ಯಾವುದೇ ಸೀಮಿತತೆ ಇಲ್ಲ. ಯಾವುದೇ ವಿಷಯಗಳ ಪರಿಣಿತಿಗೆ ಭಾಷೆಯ ಗೊಂದಲಬೇಡ. ಮಾತೃಭಾಷೆಗೆ ಪ್ರಾಮುಖ್ಯತೆ ನೀಡುವ ಜೊತೆಯಲ್ಲಿ, ಯಾವ ಸಂದರ್ಭದಲ್ಲಿ ಯಾವ ಭಾಷೆಯ ಮೂಲಕ ಮಾತನಾಡಿದರೆ ಅದು ಜನರ ಮನಸ್ಸಿಗೆ ತಲುಪುತ್ತದೆ ಎಂಬ ಅರಿವು ಬೇಕಿದೆ. ವಿದ್ಯಾರ್ಥಿ ಜೀವನ ಎಂಬುದು ಆಶೀರ್ವಾದ ಪಡೆದ ಜೀವನ. ನಾವು ಕಲಿತ ವಿಷಯಗಳೇ ವೃತ್ತಿ ಜೀವನದ ತಳಹದಿ ಎಂದರು.ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್. ನಾರಾಯಣರಾವ್ ಮಾತನಾಡಿ, ಆಧುನಿಕತೆ ಬೆಳೆದಂತೆಲ್ಲ ಭ್ರಷ್ಟಾಚಾರವು ತನ್ನ ಪ್ರಾಬಲ್ಯವನ್ನು ಬೆಳೆಸಿದೆ. ಈ ನಿಟ್ಟಿನಲ್ಲಿ ಲೋಕಾಯುಕ್ತ ವ್ಯವಸ್ಥೆ ನೊಂದವರ ದನಿಯಾಗಲಿ ಎಂದು ಆಶಿಸಿದರು.

ಎನ್‍ಇಎಸ್ ಕಾರ್ಯದರ್ಶಿ ಎಸ್.ಎನ್. ನಾಗರಾಜ, ನಿರ್ದೇಶಕರಾದ ಎಂ.ಆರ್. ಸೀತಾಲಕ್ಷ್ಮೀ, ಅನಂತದತ್ತ, ಅಶ್ವತ್ಥನಾರಾಯಣ ಶ್ರೇಷ್ಟಿ, ಶಿವಕುಮಾರ್, ಕುಲಸಚಿವ ಪ್ರೊ. ಎನ್.ಕೆ. ಹರಿಯಪ್ಪ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಸ್ವಾಮಿ, ಪ್ರಾಚಾರ್ಯೆ ಡಾ. ಎ. ಅನಲಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ