ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಸರ್ಕಾರಿ ವೀಕ್ಷಣಾಲಯದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗಾಗಿ ಭೇಟಿ ಬಚಾವೋ.. ಭೇಟಿ ಪಡಾವೋ.. ಯೋಜನೆಯಡಿ ಬಾಲ್ಯವಿವಾಹ, ಫೋಕ್ಸೋ, ಪಿಸಿಪಿಎನ್ಡಿಟಿ ಕಾಯ್ದೆ ಮತ್ತು ಮಿಷನ್ ಸುರಕ್ಷಾ ಕುರಿತು ಏರ್ಪಡಿಸಲಾಗಿದ್ದ ಸಾಮರ್ಥ್ಯಾಭಿವೃದ್ಧಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯೊಳಗಿನ ಮಹಿಳೆ ಮತ್ತು ಮಕ್ಕಳಿಗೆ ಸರ್ಕಾರದ ರಾಯಭಾರಿಗಳಂತಿದ್ದು, ಮಾಹಿತಿ ಒದಗಿಸಿ, ಸರ್ಕಾರದ ಸೌಲಭ್ಯಗಳನ್ನು ತಲುಪಿಸುವಂತೆ ಮನವಿ ಮಾಡಿದ ಅವರು, ಜನಸಾಮಾನ್ಯರ ನೆಮ್ಮದಿಯ ಬದುಕಿಗೆ ಆಸರೆಯಾಗಬೇಕು. ಮಾತ್ರವಲ್ಲ ಸರ್ಕಾರದ ಜನಮುಖಿ ಕಾರ್ಯಕ್ರಮಗಳ ಯಶಸ್ಸಿನ ರೂವಾರಿಗಳು ತಾವಾಗಬೇಕು ಎಂದು ಹೇಳಿದರು.ವಿಶೇಷವಾಗಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮಾತೃಸ್ವರೂಪರು. ನಾಗರಿಕ ಸಮಾಜದ ಜನರ ಸ್ವಾಸ್ಥ್ಯ ಕಾಪಾಡುವ, ಆರೋಗ್ಯವಂತ ಸಮಾಜ ನಿರ್ಮಿಸುವ ಸೈನಿಕರು ತಾವಾಗಬೇಕು ಎಂದ ಅವರು, ಮಹಿಳೆ ಮತ್ತು ಮಕ್ಕಳು ಬಹುಸುಲಭವಾಗಿ ಸಮಾಜದಲ್ಲಿ ಶೋಷಣೆಗೆ ಒಳಗಾಗುತ್ತಿದ್ದಾರೆ. ಹೆಣ್ಣು ಎಂದರೆ ಭೋಗದ ವಸ್ತು ಎಂದುಕೊಂಡವರು ಅನೇಕ ಮಂದಿ ಇದೇ ಸಮಾಜದಲ್ಲಿದ್ದಾರೆ ಎಂಬುದು ನೋವಿನ ಸಂಗತಿಯಾದರೂ ಸತ್ಯ. ಬಾಲ್ಯವಿವಾಹ ಮತ್ತಿತರ ಕಾರಣಗಳಿಗಾಗಿ ಮಹಿಳೆಯರ ಜೀವನ ನಿರೀಕ್ಷೆಯಂತಿರದೇ ಅಸಹನೀಯವಾಗಿದೆ. ಸತಿಸಹಗಮನದಂತಹ ಅನಿಷ್ಟಗಳು ಇದೇ ಸಮಾಜದಲ್ಲಿ ಇದ್ದವು. ವಿಧವಾ ವಿವಾಹ, ಮಾನವ ಕಳ್ಳಸಾಗಾಣೆ, ಭ್ರೂಣಹತ್ಯೆ ಇಂತಹ ಹಲವು ಕಳಂಕಗಳನ್ನು ನಿರ್ಮೂಲನೆಗೊಳಿಸಲು ಕಠಿಣ ಕಾನೂನುಗಳು ಅನುಷ್ಟಾನಕ್ಕೆ ಬಂದಿವೆ ಎಂದರು.
ಪಿ.ಸಿ.ಪಿ.ಎನ್.ಡಿ.ಟಿ., ವರದಕ್ಷಿಣೆ, ಕೌಟುಂಬಿಕ ದೌರ್ಜನ್ಯ, ಫೋಕ್ಸೊ ಮತ್ತಿತರ ಕಾನೂನುಗಳು ಮಹಿಳೆ ಮತ್ತು ಮಕ್ಕಳ ರಕ್ಷಣೆಗಾಗಿಯೇ ಜಾರಿಗೊಳಿಸಲಾಗಿದೆ. ಇವುಗಳ ಅನುಷ್ಟಾನದಲ್ಲಿ ವಿವಿಧ ಇಲಾಖೆಗಳ ಅಧಿಕಾರಿ-ಸಿಬ್ಬಂದಿಗೆ ಹೊಣೆಗಾರಿಕೆ ನೀಡಲಾಗಿದೆ. ಈ ಕಾನೂನುಗಳು ಸಧ್ಬಳಕೆಗಿಂತ ದುರ್ಬಳಕೆಯೇ ಹೆಚ್ಚು ಎಂದರು.ಕಾರ್ಯಾಗಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್, ರಾಜಯೋಗಿನಿ ಸ್ನೇಹಕ್ಕ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಶಶಿರೇಖಾ ಅವರು ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಡಿ.ರಷ್ಮಿ , ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ತಾಜುದ್ದೀನ್ ಖಾನ್ ಅವರು ಆಗಮಿಸಿದ್ದರು.