ಇ-ಖಾತಾ ಸಂಯೋಜನೆಗೆ ಕಾನೂನು ಮಾನ್ಯತೆ: ಮುನೀಶ್ ಮೌದ್ಗಿಲ್

KannadaprabhaNewsNetwork |  
Published : May 28, 2026, 03:45 AM IST
ಆಯುಕ್ತ  | Kannada Prabha

ಸಾರಾಂಶ

ಇ-ಖಾತಾ ಮತ್ತು ಅದರ ನೋಂದಣಿ ವ್ಯವಸ್ಥೆ ಸಂಯೋಜನೆ ಕುರಿತು ಕೆಲ ಗುಂಪುಗಳು ತಪ್ಪುಮಾಹಿತಿ ಹರಡುತ್ತಿದ್ದು ಸಾರ್ವಜನಿಕರು ಕಿವಿಗೊಡದೆ ಈ ವ್ಯವಸ್ಥೆ ಕಾನೂನಾತ್ಮಕವಾಗಿದೆ ಎಂದು ಜಿಬಿಎ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇ-ಖಾತಾ ಮತ್ತು ಅದರ ನೋಂದಣಿ ವ್ಯವಸ್ಥೆ ಸಂಯೋಜನೆ ಕುರಿತು ಕೆಲ ಗುಂಪುಗಳು ತಪ್ಪುಮಾಹಿತಿ ಹರಡುತ್ತಿದ್ದು ಸಾರ್ವಜನಿಕರು ಕಿವಿಗೊಡದೆ ಈ ವ್ಯವಸ್ಥೆ ಕಾನೂನಾತ್ಮಕವಾಗಿದೆ ಎಂದು ಜಿಬಿಎ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.

ಈ ಸಂಬಂಧ ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಇ-ಖಾತೆ ಸಂಯೋಜನೆಗೂ ಮುನ್ನ, ಬೆಂಗಳೂರಿನ ಆಸ್ತಿ ಆಡಳಿತ ವ್ಯವಸ್ಥೆ ಗಂಭೀರ ಅವ್ಯವಸ್ಥೆಯಿಂದ ಕೂಡಿತ್ತು. ಕಾವೇರಿ ವ್ಯವಸ್ಥೆಗೆ ಸೇರುತ್ತಿದ್ದ ವಹಿವಾಟುಗಳಲ್ಲಿ ಸುಮಾರು ಶೇ.85 ರಷ್ಟು ಅನಧಿಕೃತ ಬಡಾವಣೆಗಳು, ಅಕ್ರಮ ಕಂದಾಯ ನಿವೇಶನಗಳು, ಅನುಮೋದಿಸದ ಉಪವಿಭಾಗಗಳು ಅಥವಾ ದೋಷಪೂರಿತ ಮಾಲೀಕತ್ವ ದಾಖಲೆಗಳಿಗೆ ಸಂಬಂಧಿಸಿದ್ದಾಗಿದ್ದವು. 2024ರಿಂದ ಇ-ಖಾತಾ ಜಾರಿಯಾದ ನಂತರ ಇಂತಹ ವಹಿವಾಟುಗಳು ಬಹುತೇಕ ಇಲ್ಲವಾಗಿವೆ ಎಂದು ಅವರು ತಿಳಿಸಿದ್ದಾರೆ.

ಇ-ಖಾತಾ ಮತ್ತು ಉಪ-ನೋಂದಣಾಧಿಕಾರಿ ವ್ಯವಸ್ಥೆಯೊಂದಿಗಿನ ಸಂಯೋಜನೆ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ, 2024, ನೋಂದಣಿ ಕಾಯ್ದೆ ಹಾಗೂ ಸಂಬಂಧಿತ ನಗರ ಯೋಜನಾ ಕಾನೂನುಗಳನ್ನು ಒಳಗೊಂಡಂತೆ ಸಂಪೂರ್ಣ ಕಾನೂನುಬದ್ಧ ಬೆಂಬಲ ಹೊಂದಿದೆ. ಸರಿಯಾಗಿ ನೋಂದಾಯಿತ ಮಾರಾಟ ಪತ್ರಗಳು, ಉಡುಗೊರೆ ಪತ್ರಗಳು, ಬಿಡುಗಡೆ ಪತ್ರಗಳು, ಪಾರಂಪರಿಕ ಹಕ್ಕು ದಾಖಲೆಗಳು ಹಾಗೂ ಇತರೆ ಕಾನೂನುಬದ್ಧ ಹಸ್ತಾಂತರ ದಾಖಲೆಗಳಿಗೆ ಸಂಪೂರ್ಣ ಮಾನ್ಯತೆ ಹೊಂದಿವೆ. ನೋಂದಾಯಿತ ದಾಖಲೆಗಳ ಆಧಾರದ ಮೇಲಿನ ಖಾತೆ ವರ್ಗಾವಣೆ ಪ್ರಕ್ರಿಯೆಗಳು ಸ್ವಯಂಚಾಲಿತವಾಗುತ್ತಿದ್ದು, ವಿಳಂಬ, ಅಧಿಕಾರಿಗಳ ವಿವೇಚನಾ ಅಧಿಕಾರ ಹಾಗೂ ಭ್ರಷ್ಟಾಚಾರವನ್ನು ಕಡಿಮೆ ಮಾಡುತ್ತಿವೆ ಎಂದು ವಿವರಿಸಿದ್ದಾರೆ.

ಇಂದು ಆಸ್ತಿ ದಾಖಲೆಗಳು ಡಿಜಿಟಲೀಕರಣಗೊಂಡಿದ್ದು, ಅಧಿಕೃತ ಬಿಬಿಎಂಪಿ ಇ-ಆಸ್ತಿ ಪೋರ್ಟಲ್ ಮೂಲಕ ಸಾರ್ವಜನಿಕರಿಗೆ ಮುಕ್ತವಾಗಿ ಲಭ್ಯವಿವೆ https://bbmpeaasthi.karnataka.gov.in/ ಪಡೆಯಬಹುದು. ಇ-ಖಾತಾಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರ ಮತ್ತು ನಾಗರಿಕರಿಗೆ ನೆರವು ನೀಡುವ ಉದ್ದೇಶದಿಂದ ಪ್ರತಿ ಶನಿವಾರ 50 ಸ್ಥಳಗಳಲ್ಲಿ ಬಹಿರಂಗ ಸಭೆಗಳನ್ನು ಆಯೋಜಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನನಿಬಿಡ ಸ್ಥಳದಲ್ಲಿ ಬೀದಿನಾಯಿಗೆ ಆಹಾರವನ್ನು ನೀಡುವಂತಿಲ್ಲ: ಉತ್ತರ ಪಾಲಿಕೆ ಆಯುಕ್ತ
ಒಂದೇ ದಿನದಲ್ಲಿ 67 ಮರ, 104 ರೆಂಬೆ-ಕೊಂಬೆ ತೆರವು