ಕಾನೂನು ಬದ್ಧವಾಗಿ ಜನರಿಗೆ ಹಕ್ಕುಪತ್ರ: ರಾಜೇಗೌಡ

KannadaprabhaNewsNetwork | Published : Nov 12, 2023 1:00 AM

ಸಾರಾಂಶ

ಕಾನೂನು ಬದ್ಧವಾಗಿ ಜನರಿಗೆ ಹಕ್ಕುಪತ್ರ: ರಾಜೇಗೌಡ

ವಿಳಂಬವಾದರೂ ಪರವಾಗಿಲ್ಲ । ಬಿಜೆಪಿ ಪಕ್ಷದವರು ತಾಳ್ಮೆಯಿಂದ ಕಾಯಬೇಕು

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಫಾರಂ ನಂ 50, 53, 57 ಹಾಗೂ 94 ಸಿ ಹಕ್ಕು ಪತ್ರಕ್ಕಾಗಿ ಅರಣ್ಯ ಇಲಾಖೆ ಒಪ್ಪಿಗೆ ಪಡೆಯಬೇಕು ಎಂಬ ಜಿಲ್ಲಾಧಿಕಾರಿಗಳ ಆದೇಶ ಇರುವುದರಿಂದ ಈಗಿರುವ ಕಾನೂನನ್ನು ಸರಿಪಡಿಸಿ ಕಾನೂನು ಬದ್ಧವಾಗಿ ಎಲ್ಲರಿಗೂ ಹಕ್ಕು ಪತ್ರ ನೀಡುತ್ತೇವೆ ಎಂದು ಶಾಸಕ ಟಿ.ಡಿ.ರಾಜೇಗೌಡ ಭರವಸೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ಬಿ.ಎಚ್.ಕೈಮರದಲ್ಲಿ ನಡೆದ ಜಿಲ್ಲಾ ಮಟ್ಟದ ಜನತಾ ದರ್ಶನದಲ್ಲಿ ಶೇ 75 ರಷ್ಟು ಅರ್ಜಿಗಳು ಅರಣ್ಯ ಇಲಾಖೆಗೆ ಸಂಬಂಧ ಪಟ್ಟದ್ದಾಗಿತ್ತು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ 5 ಶಾಸಕರು, ಅರಣ್ಯಾಧಿಕಾರಿಗಳ ಸಭೆ ಕರೆದು ಚರ್ಚಿಸಿದ್ದಾರೆ. ನಾನು ಶೃಂಗೇರಿ ಕ್ಷೇತ್ರ ಮಟ್ಟದಲ್ಲಿ ಅರಣ್ಯಾಧಿಕಾರಿಗಳ ಸಭೆ ನಡೆಸಿದ್ದು ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಡೀಮ್ಡ್‌ ಫಾರೆಸ್ಟ್‌, ಗೋಮಾಳ- ಅರಣ್ಯದ ಗಡಿ ಭಾಗ ಗುರುತಿಸ ಬೇಕಾಗಿದೆ. ಸರ್ವೆ ಮಾಡಿ ಗಡಿ ಗುರುತು ಮಾಡಿದ ನಂತರ ಕಂದಾಯ ಭೂಮಿಯಾಗಿದ್ದರೆ ಹಕ್ಕುಪತ್ರ ನೀಡಲಾಗುತ್ತದೆ ಎಂದರು. ಜನತಾ ದರ್ಶನದಲ್ಲಿ ನಾನು 48 ಜನರಿಗೆ ಹಕ್ಕು ಪತ್ರ ನೀಡಿದ್ದೇನೆ. ನರಸಿಂಹರಾಜಪುರ ಪಪಂ ನಿಂದ ಈಗಾಗಲೇ 158 ಹಕ್ಕು ಪತ್ರ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು. ಗೋಪಾಲಕೃಷ್ಣ ಗೌಡರು ಜಿಲ್ಲಾಧಿಕಾರಿಯಾಗಿದ್ದಾಗ 1 ಲಕ್ಷ ಹೆಕ್ಟೇರ್‌ ಗೂ ಹೆಚ್ಚು ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾವಣೆ ಮಾಡಿದ್ದರು. ಇದರಲ್ಲಿ 16 ಸಾವಿರ ಎಕರೆ ನೋಟಿಫೈ ಆಗಿದೆ. 10 ಸಾವಿರ ಎಕರೆಯನ್ನು ಅರಣ್ಯ ಇಲಾಖೆಯವರು ಕಂದಾಯ ಇಲಾಖೆಗೆ ವಾಪಾಸ್‌ ನೀಡಿದ್ದಾರೆ. 4 (1) ನೋಟಿಫಿ ಕೇಶನ್‌ ಆಗುತ್ತಿರುವ ಅರಣ್ಯ ಭೂಮಿಯಲ್ಲಿ ಈಗಾಗಲೇ ಒತ್ತುವರಿ ಆದ ಭೂಮಿಯನ್ನು ಬಿಡುವ ಸಂಬಂಧ ಹೆಚ್ಚುವರಿ ಸೆಟ್ಲಮೆಂಟ್ ಆಫೀಸರ್‌ ಒಬ್ಬರನ್ನು ಕೊಪ್ಪಕ್ಕೆ ಹಾಕಿಸಿದ್ದೇನೆ. ಇದು ರೈತರಿಗೆ ಅನುಕೂಲಕರ ಎಂದರು.ಗ್ಯಾರಂಟಿ ಈಡೇರಿಕೆ: ಕಾಂಗ್ರೆಸ್‌ ಭರವಸೆಯಂತೆ 5 ಗ್ಯಾರಂಟಿಯಲ್ಲಿ 4ನ್ನು ಈಡೇರಿಸಿದ್ದೇವೆ. ರಾಜ್ಯದಲ್ಲಿ ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ನಾನು ಶಾಸಕನಾಗಿದ್ದೆ. ಆಗ ನನಗೆ ಅಭಿವೃದ್ದಿಯಲ್ಲಿ ತಡೆ ಒಡ್ಡಲಾಗಿತ್ತು. ಈಗ ಕಾಂಗ್ರೆಸ್‌ನ ಸುಭದ್ರ ಸರ್ಕಾರ ಬಂದಿದೆ. ಎಲ್ಲಾ ಅಭಿವೃದ್ದಿ ಕಾರ್ಯ ಮಾಡುತ್ತೇನೆ. ಈಗಾಗಲೇ ಜಿಪಂ, ತಾಪಂ, ಲೋಕೋಪಯೋಗಿ ರಸ್ತೆ,ರಾಜ್ಯ ಹಾಗೂ ರಾಷ್ಟ್ರ ಹೆದ್ದಾರಿಗಳ ಗುಂಡಿ ಮುಚ್ಚುವ, ರಸ್ತೆ ದುರಸ್ಥಿಗೆ ಹಣ ಮಂಜೂರಾಗಿದ್ದು ಟೆಂಡರ್‌ ಸಹ ಮುಕ್ತಾಯವಾಗಿದೆ. ಮಳೆ ಸಂಪೂರ್ಣ ನಿಂತ ನಂತರ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು. ಹೊಸ ಯುಗ: ರಾಜ್ಯದಲ್ಲಿ ಹೊಸ ಯುಗ ಪ್ರಾರಂಭವಾಗಿದೆ. ಎಲ್ಲಾ ಕಾಮಗಾರಿಗಳನ್ನು ಗುಣ ಮಟ್ಟದಲ್ಲಿ ಮಾಡುತ್ತೇವೆ. ಜಿಪಂ 14 ರಸ್ತೆಯನ್ನು ಲೋಕೋಪಯೋಗಿ ಇಲಾಖೆಗೆ ಅಪ್‌ ಗ್ರೇಡ್‌ ಮಾಡಿಸಿದ್ದು, ರಸ್ತೆಗಳ ಅಭಿವೃದ್ಧಿಗೆ ದೊಡ್ಡ ಮೊತ್ತದ ಹಣ ಇಟ್ಟಿದ್ದೇವೆ. ಆದರೆ, ಮಾಜಿ ಸಚಿವರು ಹಾಗೂ ಬಿಜೆಪಿ ಮುಖಂಡರು ಟೀಕೆ ಶುರು ಮಾಡಿದ್ದಾರೆ. ನೀವು 15 ವರ್ಷ ಶೃಂಗೇರಿ ಶಾಸಕ ರಾಗಿದ್ದೀರಿ. ನಾನು ಕೇವಲ 5 ವರ್ಷ ಮಾತ್ರ ಶಾಸಕನಾಗಿದ್ದೇನೆ. ಅಭಿವೃದ್ಧಿಗೆ ಸ್ವಲ್ಫ ಕಾಯಿರಿ ಎಂದು ಟಾಂಗ್‌ ನೀಡಿದರು. ಸರ್ಕಾರಿ ಶಾಲೆಗೆ ವಿದ್ಯುತ್‌ ಫ್ರೀ: ಸರ್ಕಾರಿ ಶಾಲೆಗಳಿಗೆ ನಮ್ಮ ಸರ್ಕಾರ ವಿದ್ಯುತ್, ನೀರನ್ನು ಉಚಿತವಾಗಿ ನೀಡುತ್ತೇವೆ. ಮುಜರಾಯಿ ಇಲಾಖೆಗೆ ಸಂಬಂಧಿಸಿದ ದೇವಸ್ಥಾನಗಳಿಗೂ ವಿದ್ಯುತ್‌ ಫ್ರೀ ಎಂದರು. ರಾಜ್ಯದ ವಿಶೇಷವಾದ 14 ಪಲ್ಲಕ್ಕಿ ಬಸ್ಸುಗಳ ಪೈಕಿ 1 ಪಲ್ಲಕ್ಕಿ ಬಸ್ಸನ್ನು ಶೃಂಗೇರಿ ಕ್ಷೇತ್ರಕ್ಕೆ ತಂದಿದ್ದೇನೆ ಎಂದರು. ಪರಿಹಾರ: ಕಾಡಾನೆಗಳು ನುಗ್ಗಿ ಫಸಲು ಹಾಳು ಮಾಡಿದರೆ ರೈತರಿಗೆ ಪರಿಹಾರ ಹಾಗೂ ಆಲ್ದೂರಿನಲ್ಲಿ ಕಾಡಾನೆಯಿಂದ ಮಹಿಳೆ ಮೃತರಾದ ಪ್ರಕರಣದಲ್ಲಿ ಸಿಎಂ ಅರಣ್ಯ ಇಲಾಖೆಗೆ ಹಲವು ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ. ಕಾಡಾನೆ ಗ್ರಾಮ, ತೋಟಗಳಿಗೆ ನುಗ್ಗಿದರೆ ಅದನ್ನು ಮತ್ತೆ ಕಾಡಿಗೆ ಅಟ್ಟಬೇಕು. ರೇಲ್ವೆ ಹಳಿಯ ಬೇಲಿ ಮಾಡಬೇಕು. ಮುಂದಿನ ಬಜೆಟ್ ನಲ್ಲೂ ಸಹ ಪರಿಹಾರಕ್ಕೆ ಹಣ ಇಡುತ್ತೇವೆ ಎಂದು ಸಿಎಂ ಭರವಸೆ ನೀಡಿದ್ದಾರೆ ಎಂದರು. ---ಬಾಕ್ಸ್‌ --- ಮಂತ್ರಿ ಸ್ಥಾನದ ಆಶಾಭಾವನೆ

ನಾನು ಕಾಂಗ್ರೆಸ್‌ ಪಕ್ಷದ ಶಿಸ್ತಿನ ಶಿಪಾಯಿ. ನನಗೆ ಮಂತ್ರಿ ಸ್ಥಾನ ಸಿಗಬಹುದು ಎಂಬ ಆಶಾ ಭಾವನೆ ಹೊಂದಿದ್ದೇನೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು. ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಕಾಂಗ್ರೆಸ್‌ನಲ್ಲಿ ಹೈಕಮಂಡ್‌ ತೀರ್ಮಾನ ಮಾಡುತ್ತದೆ. ಹಿಂದಿನ ಅವಧಿ ಯಲ್ಲಿ ಬಿಜೆಪಿ ನನಗೆ ಮಂತ್ರಿಗಿರಿ ಸೇರಿದಂತೆ ಹಲವು ಆಮಿಷ ಒಡ್ಡಿದ್ದರೂ ನಾನು ಪಕ್ಷ ನಿಷ್ಠನಾಗಿ ಗಟ್ಟಿಯಾಗಿ ನಿಂತು ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಜಿಲ್ಲೆಯಲ್ಲಿ ಕಾಂಗ್ರೆಸ್‌ನಿಂದ 5 ಶಾಸಕರು ಗೆದ್ದಿದ್ದೇವೆ. ಪಕ್ಷ, ಸರ್ಕಾರ ನನ್ನನ್ನು ಗುರುತಿಸುತ್ತದೆ ಎಂದು ನಂಬಿದ್ದೇನೆ ಎಂದರು. ಸುದ್ದಿ ಗೋಷ್ಠಿಯಲ್ಲಿ ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ, ಕಾಂಗ್ರೆಸ್‌ ನಗರ ಅಧ್ಯಕ್ಷ ಬಿಳಾಲುಮನೆ ಉಪೇಂದ್ರ, ಪಪಂ ಸದಸ್ಯರಾದ ಜುಬೇದ, ಮಹಮ್ಮದ್ ವಸೀಂ, ಮುನೋಹರ್ ಪಾಷ, ಕಾಂಗ್ರೆಸ್‌ ಮುಖಂಡರಾದ ಇ.ಸಿ.ಜೋಯಿ,ಬಿನು, ಬೆನ್ನಿ,ಶಿವಣ್ಣ ಮುತ್ತಿತರರು ಇದ್ದರು.

Share this article