ಬೆಂಗಳೂರು ಯುನೈಟೆಡ್‌ ತಂಡದ ಪಾಲಾದ ಲೆಜೆಂಡ್ಸ್ ಟ್ರೋಫಿ

KannadaprabhaNewsNetwork |  
Published : Dec 23, 2025, 01:15 AM IST
ರಾಜ್ಯಮಟ್ಟದ ಲೆಜೆಂಡ್ಸ್ ಟೆನ್ನಿಸ್ ಬಾಲ್ ಕ್ರಿಕೆಟ್:ಬೆಂಗಳೂರು ಯುನೈಟೆಡ್‌ಗೆ ಪ್ರತಿಷ್ಠಿತ ಟ್ರೋಫಿ | Kannada Prabha

ಸಾರಾಂಶ

ಮೊಬೈಲ್ ಲೋಕದಲ್ಲಿ ಮುಳುಗುತ್ತಿರುವ ಇಂದಿನ ಮಕ್ಕಳಿಗೆ ಕ್ರೀಡೆಗಳ ಮೂಲಕ ಸಕಾರಾತ್ಮಕ ದಿಕ್ಕು ನೀಡಬೇಕಿದೆ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ನಗರದ ಜೇನುಕಲ್ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಿರಿಯ ಕ್ರೀಡಾಪಟು, ದಿವಂಗತ ಎಚ್.ಟಿ. ಮಾದೇವ್ ಅವರ ಸ್ಮರಣಾರ್ಥವಾಗಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಹಿರಿಯರ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಪ್ರತಿಷ್ಠಿತ ಲೆಜೆಂಡ್ಸ್ ಟ್ರೋಫಿ ಬೆಂಗಳೂರಿನ ಯುನೈಟೆಡ್ ತಂಡದ ಪಾಲಾಯಿತು. ಫ್ರೆಂಡ್ಸ್ ಅರಸೀಕೆರೆ ತಂಡ ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಇದರೊಂದಿಗೆ ಮೂರು ದಿನಗಳ ಕಾಲ ನಡೆದ ಕ್ರಿಕೆಟ್ ಜಾತ್ರೆ ಸಮಾರೋಪಗೊಂಡಿತು.

ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ಮೊದಲ ಬಾರಿಗೆ 40 ವರ್ಷ ಮೇಲ್ಪಟ್ಟ ಹಿರಿಯ ಆಟಗಾರರಿಗೆ ರಾಜ್ಯಮಟ್ಟದ ವೇದಿಕೆ ಕಲ್ಪಿಸುವ ಉದ್ದೇಶದಿಂದ ಈ ಟೂರ್ನಮೆಂಟ್ ಆಯೋಜಿಸಿತ್ತು. ಬೆಂಗಳೂರು, ಮೈಸೂರು, ಮಂಗಳೂರು, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಪ್ರತಿಷ್ಠಿತ 16 ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಮೂರು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಬ್ಯಾಟಿಂಗ್, ಬೌಲಿಂಗ್ ಹಾಗೂ ಕ್ಷೇತ್ರರಕ್ಷಣೆಯಲ್ಲಿ ಉತ್ಕೃಷ್ಟ ಪ್ರದರ್ಶನ ಕಂಡುಬಂದಿದ್ದು, ಅಭಿಮಾನಿಗಳಲ್ಲಿ ಕ್ರೀಡಾಸ್ಫೂರ್ತಿ ಮೂಡಿಸಿತು.

ಅಂತಿಮ ಪಂದ್ಯದಲ್ಲಿ ಸಮತೋಲಿತ ಪ್ರದರ್ಶನ ನೀಡಿದ ಬೆಂಗಳೂರು ಯುನೈಟೆಡ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು. ವಿಜೇತ ತಂಡಕ್ಕೆ ಆಕರ್ಷಕ ಟ್ರೋಫಿಯೊಂದಿಗೆ 1 ಲಕ್ಷ ರು. ನಗದು ಬಹುಮಾನ ನೀಡಲಾಗಿದ್ದು, ರನ್ನರ್‌ ಅಪ್ ಫ್ರೆಂಡ್ಸ್ ಅರಸೀಕೆರೆ ತಂಡಕ್ಕೆ 50 ಸಾವಿರ ರು. ನಗದು ಬಹುಮಾನ ಮತ್ತು ಟ್ರೋಫಿ ಲಭಿಸಿತು. ಮೂರನೇ ಸ್ಥಾನವನ್ನು ಮಲ್ಪೆ ಫಿಶ್‌ಮನ್ ತಂಡ ಪಡೆದುಕೊಂಡರೆ, ನಾಲ್ಕನೇ ಸ್ಥಾನಕ್ಕೆ ಅಟ್ಯಾಕರ್ಸ್ ಅರಸೀಕೆರೆ ತಂಡ ತೃಪ್ತಿಪಟ್ಟಿತು. ಸರಣಿಯುದ್ದಕ್ಕೂ ಉತ್ತಮ ಬೌಲಿಂಗ್ ಹಾಗೂ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಇಮ್ರಾನ್ ‘ಸರಣಿ ಶ್ರೇಷ್ಠ ಆಟಗಾರ’ ಪ್ರಶಸ್ತಿಗೆ ಭಾಜನರಾದರು.

ಟ್ರೋಫಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಶಾಸಕ ಹಾಗೂ ರಾಜ್ಯ ಗೃಹ ನಿರ್ಮಾಣ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ, ವ್ಯವಸ್ಥಿತವಾಗಿ ಕ್ರೀಡಾಕೂಟ ಆಯೋಜಿಸಿದ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್‌ನ್ನು ಅಭಿನಂದಿಸಿದರು. ಮುಂದಿನ ದಿನಗಳಲ್ಲಿ ಹೊನಲು ಬೆಳಕಿನಡಿ ರಾಜ್ಯಮಟ್ಟದ ಕ್ರಿಕೆಟ್, ವಾಲಿಬಾಲ್ ಮತ್ತು ಕಬಡ್ಡಿ ಪಂದ್ಯಾವಳಿಗಳನ್ನು ಆಯೋಜಿಸುವಲ್ಲಿ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದರು.

ಖ್ಯಾತ ವಕೀಲ ಹಾಗೂ ಜೆಡಿಎಸ್ ಮುಖಂಡ ವಿವೇಕ್ ಮಾತನಾಡಿ, ಐಪಿಎಲ್ ಮಾದರಿಯಲ್ಲಿ ನಡೆದ ಈ ಲೆಜೆಂಡ್ಸ್ ಪಂದ್ಯಾವಳಿ ಅತ್ಯಂತ ರೋಚಕವಾಗಿದ್ದು, ಹಿರಿಯ ಆಟಗಾರರು ತೋರಿದ ಆಟ ಯುವ ಕ್ರಿಕೆಟರ್‌ಗಳಿಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅನಂತ ಸಮೂಹ ಶಿಕ್ಷಣ ಸಂಸ್ಥೆಗಳ ಚೇರ್ಮನ್ ಆರ್. ಅನಂತಕುಮಾರ್ ಮಾತನಾಡಿ, ಮೊಬೈಲ್ ಲೋಕದಲ್ಲಿ ಮುಳುಗುತ್ತಿರುವ ಇಂದಿನ ಮಕ್ಕಳಿಗೆ ಕ್ರೀಡೆಗಳ ಮೂಲಕ ಸಕಾರಾತ್ಮಕ ದಿಕ್ಕು ನೀಡಬೇಕಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ನಗರಸಭೆಯ ನಿಕಟಪೂರ್ವ ಅಧ್ಯಕ್ಷ ಎಂ. ಸಮಿವುಲ್ಲಾ ಬ್ಯಾಟ್ ಬೀಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಕ್ರೀಡಾಕೂಟದ ಪ್ರೋತ್ಸಾಹಕರಾದ ಡಾ. ಶಿವಕುಮಾರ್, ಕೆ.ವಿ.ಎನ್. ಶಿವು, ರಮೇಶ್ ನಾಯ್ಡು, ಜಿಲ್ಲಾ ಕರವೇ ಉಪಾಧ್ಯಕ್ಷ ಹೇಮಂತ್ ಕುಮಾರ್, ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಸಂದೀಪ್ ಮಂಡೇಲಾ, ಕಾರ್ಯದರ್ಶಿ ವಿಜಯಕುಮಾರ್ ಸೇರಿದಂತೆ ಅನೇಕ ಗಣ್ಯರು ಹಾಗೂ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎರಡು ಪೋಲಿಯೊ ಹನಿ ಮಕ್ಕಳಿಗೆ ಜೀವಾಮೃತ: ಶಾಸಕ ಪ್ರಸಾದ್ ಅಬ್ಬಯ್ಯ
₹22267 ಕೋಟಿ ವೆಚ್ಚದಲ್ಲಿ 16.75 ಕಿ.ಮೀ ಸುರಂಗ ರಸ್ತೆ ನಿರ್ಮಿಸಲು ಅದಾನಿ ಗ್ರೂಪ್ ಬಿಡ್‌ ಸಲ್ಲಿಕೆ