ಕನ್ನಡಪ್ರಭ ವಾರ್ತೆ ಉಡುಪಿ
ಜಿಲ್ಲೆಯಲ್ಲಿ ಗ್ರಾಪಂ, ಪುರಸಭೆ, ನಗರಸಭೆ ಮತ್ತು ಪಟ್ಟಣ ಪಂಚಾಯಿತಿಗಳ, ವಿಧಾನಸಭೆ ಮತ್ತು ಲೋಕಸಭೆಯ ಒಟ್ಟು 2480 ಮಂದಿ ಸದಸ್ಯರು ಈ ಚುನಾವಣೆಯ ಮತದಾರರಾಗಿದ್ದರು. ಅವರಲ್ಲಿ 2395 ಮಂದಿ ಅತ್ಯುತ್ಸಾಹದಿಂದ ಮತದಾನದಲ್ಲಿ ಭಾಗವಹಿಸಿದ್ದರು.
ಅವರಲ್ಲಿ 1195 ಪುರುಷ ಮತದಾರರಲ್ಲಿ 1154 (ಶೇ 96.56) ಮತ್ತು 1285 ಮಹಿಳಾ ಮತದಾರರಲ್ಲಿ 1241 (ಶೇ96.57) ಮಂದಿ ವಿದಾನಪರಿಷತ್ ನಲ್ಲಿ ಪ್ರತಿನಿಧಿಗೆ ಮತ ಚಲಾಯಿಸಿದ್ದಾರೆ.ಬೆಳಗ್ಗೆ 8 ಗಂಟೆಗೆ ಮತದಾನ ಆರಂಭವಾಗಿ 2 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸುಮಾರು ಶೇ 40.56 ರಷ್ಟು ಮತದಾನವಾಗಿತ್ತು, 11 ಗಂಟೆಗೆ ಶೇ 89.90ರಷ್ಟು, 2 ಗಂಟೆಗೆ ಶೇ 94.31 ಮತ್ತು, 4 ಗಂಟೆಗೆ 96.57ರಷ್ಟು ಗಣನೀಯ ಪ್ರಮಾಣದಲ್ಲಿ ಮತದಾನವಾಗಿತ್ತು.
ಕಾರ್ಕಳದಲ್ಲಿ ಶೇ 99.28:
ಉಳಿದಂತೆ ಕುಂದಾಪುರ ಶೇ 93.59, ಬ್ರಹ್ಮಾವರ ಶೇ 98.83, ಉಡುಪಿ ಶೇ 99.18, ಕಾಪು ಶೇ 97.77 ಮತ್ತು ಹೆಬ್ರಿ ತಾಲೂಕಿನಲ್ಲಿ 99.18ರಷ್ಟು ಮತದಾನವಾಗಿದೆ.
ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ನಗರಸಭೆಯ ಬಿಜೆಪಿ ಸದಸ್ಯರೊಡಗೂಡಿ ನಗರಸಭೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಕಾಪು ಶಾಸಕ ಸುರೇಶ್ ಶೆಟ್ಟಿ ಕಾಪು ಪುರಸಭೆಯ ಬಿಜೆಪಿ ಸದಸ್ಯರೊಂದಿಗೆ ತೆರಳಿ ಪುರಸಭೆಯಲ್ಲಿ ಮತ ಚಲಾಯಿಸಿದರು.
ಬೈಂದೂರು,ಕುಂದಾಪುರ ಕಡಿಮೆ ಮತದಾನ: ಬಹಿಷ್ಕಾರ ಕಾರಣ?
ಆದರೂ ಜಿಲ್ಲೆಯ ಇತರ 5 ಕ್ಷೇತ್ರಗಳಿಗೆ ಹೋಲಿಸಿದರೆ ಕುಂದಾಪುರ ಮತ್ತು ಬೈಂದೂರಿನಲ್ಲಿ ಗಣನೀಯ ಮತದಾನ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಸರಾಸರಿ 96.57ರಷ್ಟು ಮತದಾನವಾಗಿದ್ದರೂ, ಕಸ್ತೂರಿರಂಗನ್ ವರದಿಗೆ ಹೆಚ್ಚು ಪ್ರತಿರೋಧ ವ್ಯಕ್ತವಾಗಿರುವ ಬೈಂದೂರು ಕ್ಷೇತ್ರದಲ್ಲಿ ಶೇ 88.80 ರಷ್ಟು ಮತದಾನವಾಗಿದೆ. ಕುಂದಾಪುರದಲ್ಲಿ 93.59ರಷ್ಟು ಮತದಾನವಾಗಿದೆ. ಇದಕ್ಕೆ ಕೆಲವು ಗ್ರಾಪಂ ಸದಸ್ಯರು ಮತದಾನ ಬಹಿಷ್ಕರಿಸಿದ್ದು ಕಾರಣ ಎನ್ನಲಾಗುತ್ತಿದೆ.