ವಿಧಾನ ಪರಿಷತ್ ಚುನಾವಣೆ; ಮತದಾರರ ವಿವರ ಪ್ರಕಟ

KannadaprabhaNewsNetwork |  
Published : May 05, 2024, 02:03 AM IST
ಚುನಾವಣೆ | Kannada Prabha

ಸಾರಾಂಶ

ಮತದಾನ ಪ್ರಕ್ರಿಯೆ ಜೂ. 3ರಂದು ಹಾಗೂ ಮತ ಎಣಿಕೆ ಕಾರ್ಯ ಜೂ. 6ರಂದು ನಡೆಯಲಿದೆ. ಮತದಾರರ ಪಟ್ಟಿ 2023 ಡಿ. 30ರಂದು ಪ್ರಕಟಿಸಲಾಗಿತ್ತು.

ಮಡಿಕೇರಿ : ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ ಹಾಗೂ ನೈರುತ್ಯ ಪದವೀಧರರ ಕ್ಷೇತ್ರಗಳಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ಚುನಾವಣೆ ನಡೆಸಲು ಭಾರತ ಚುನಾವಣಾ ಆಯೋಗವು ಮೇ 2 ರಂದು ಚುನಾವಣಾ ವೇಳಾಪಟ್ಟಿಯನ್ನು ಹೊರಡಿಸಿರುತ್ತದೆ. ಅದರಂತೆ ಮತದಾನ ಪ್ರಕ್ರಿಯೆ ಜೂ. 3 ರಂದು ಹಾಗೂ ಮತ ಎಣಿಕೆ ಕಾರ್ಯ ಜೂ. 6 ರಂದು ನಡೆಯಲಿದೆ.

ಈ ಮೂರು ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಈಗಾಗಲೇ 2023ರ ಡಿ. 30 ರಂದು ಪ್ರಕಟಿಸಲಾಗಿದ್ದು, ಈ ವರೆಗೆ ಮತದಾರರ ಪಟ್ಟಿಗಳಿಗೆ ನೋಂದಾಯಿಸಿರುವ ಮತದಾರರ ಸಂಖ್ಯಾ ವಿವರಗಳು ಇಂತಿವೆ.

ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳ ವ್ಯಾಪ್ತಿಯನ್ನು ಒಳಗೊಂಡಿರುವ ‘ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರ’ ವ್ಯಾಪ್ತಿಯಲ್ಲಿ ಒಟ್ಟು 18,379 ಮಂದಿ ನೋಂದಾಯಿಸಿಕೊಂಡಿದ್ದಾರೆ. ಅದರಲ್ಲಿ 10,355 ಪುರುಷರು ಮತ್ತು 8,022 ಮಹಿಳೆಯರು ಹಾಗೂ 2 ಇತರೆ ಮತದಾರರು ಇದ್ದಾರೆ.

ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆ, ದಾವಣಗೆರೆ ಜಿಲ್ಲೆಗಳನ್ನು ಒಳಗೊಂಡ ‘ಕರ್ನಾಟಕ ನೈರುತ್ಯ ಶಿಕ್ಷಕರ ಕ್ಷೇತ್ರ’ ದಲ್ಲಿ ಒಟ್ಟು 19,380 ಮಂದಿ ಮತದಾರರು ನೋಂದಾಯಿಸಿದ್ದಾರೆ. ಅದರಲ್ಲಿ 8,943 ಪುರುಷರು ಮತ್ತು 10437 ಮಹಿಳಾ ಮತದಾರರು ಇದ್ದಾರೆ.

ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳನ್ನು ಒಳಗೊಂಡ ‘ಕರ್ನಾಟಕ ನೈರುತ್ಯ ಪದವೀಧರರ ಕ್ಷೇತ್ರ’ ದಲ್ಲಿ ಒಟ್ಟು 74,218 ಮಂದಿ ಮತದಾರರು ನೋಂದಾಯಿಸಿದ್ದಾರೆ. ಅದರಲ್ಲಿ 38,051 ಪುರುಷರು ಮತ್ತು 36,162 ಮಹಿಳಾ ಮತದಾರರು ಹಾಗೂ 5 ಇತರೆ ಮತದಾರರು ಇದ್ದಾರೆ.

ಈವರೆಗೂ ನೋಂದಾಯಿಸದೇ ಇರುವ ಅರ್ಹ ಮತದಾರರಿಂದ ನಿಗದಿತ ನಮೂನೆಗಳಲ್ಲಿ ಅರ್ಜಿ ಸಲ್ಲಿಸಲು ಅಂತಿಮ ಅವಕಾಶವನ್ನು ಕಲ್ಪಿಸಲಾಗಿದ್ದು, ಸೇರ್ಪಡೆ ಅರ್ಜಿಗಳನ್ನು ಮೇ 6 ರ ಸಂಜೆ 5 ಗಂಟೆಯೊಳಗೆ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿ, ತಹಸೀಲ್ದಾರ್ ಕಚೇರಿಗಳಲ್ಲಿ, ಮಹಾನಗರ ಪಾಲಿಕೆ ಕಚೇರಿಯಲ್ಲಿ ಸಲ್ಲಿಸಬಹುದು. ಆದ್ದರಿಂದ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಎಲ್ಲಾ ಕ್ಷೇತ್ರಗಳ ಚುನಾವಣಾಧಿಕಾರಿಗಳು ಹಾಗೂ ಮತದಾರರ ನೋಂದಣಾಧಿಕಾರಿ ಆಗಿರುವ ಮೈಸೂರು ಪ್ರಾದೇಶಿಕ ಆಯುಕ್ತರಾದ ಡಾ.ಜಿ.ಸಿ.ಪ್ರಕಾಶ್ ಕೋರಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ