- ಬಿಜೆಪಿ ಪ್ರೇರಿತ ಹೋರಾಟ ನಡೆಸಿ ಸಮಾಜವನ್ನು ದಿಕ್ಕು ತಪ್ಪಿಸುವ ಹುನ್ನಾರ
ಕನ್ನಡಪ್ರಭ ವಾರ್ತೆ ಮೈಸೂರು
ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಸಮುದಾಯಗಳಿಗೆ ಒಳ ಮೀಸಲಾತಿ ಕೊಡಲು ನ್ಯಾ.ಎಚ್.ಎನ್. ನಾಗಮೋಹನ್ ದಾಸ್ ವರದಿಗಾಗಿ ಕಾಯುತ್ತಿದ್ದರೂ, ಬಿಜೆಪಿ ಬೆಂಬಲಿತ ರಾಜಕೀಯ ಪ್ರೇರಿತ ಹೋರಾಟ ನಡೆಸಿ ಸಮಾಜವನ್ನು ದಿಕ್ಕು ತಪ್ಪಿಸುವ ಹುನ್ನಾರ ಮಾಡಲಾಗುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಆರೋಪಿಸಿದರು.ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.1 ಮತ್ತು 16 ರಂದು ಬಿಜೆಪಿ ಬೆಂಬಲಿತ ನಾಯಕರು ನಡೆಸುತ್ತಿರುವ ಹೋರಾಟ ಸಮುದಾಯದ್ದಲ್ಲ. ಅದೊಂದು ರಾಜಕೀಯ ಪ್ರೇರಿತ ಹಾಗೂ ರಾಜಕೀಯ ಲಾಭಗಳಿಸಲು ಕುತಂತ್ರ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ಕೇಂದ್ರ ಸರ್ಕಾರದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿದ್ದ ಎ. ನಾರಾಯಣಸ್ವಾಮಿ ಅವರು ಒಳ ಮೀಸಲಾತಿ ಕಲ್ಪಿಸಲು ಸಂವಿಧಾನದಲ್ಲಿ ಅವಕಾಶ ಇಲ್ಲ ಎಂದಿದ್ದರು. ಈಗ ಯಾವ ಮುಖ ಹೊತ್ತುಕೊಂಡು ಕಾಂಗ್ರೆಸ್ ಸರ್ಕಾರಕ್ಕೆ ಒಳ ಮೀಸಲಾತಿ ಜಾರಿ ಮಾಡಿ ಎನ್ನುತ್ತಾರೆ. ಉಪಮುಖ್ಯಮಂತ್ರಿಯಾಗಿದ್ದ ಗೋವಿಂದ ಎಂ. ಕಾರಜೋಳ ಅವರು ಬಿಜೆಪಿ ಸರ್ಕಾರ ಇದ್ದಾಗ ಒತ್ತಾಯ ಮಾಡಲೇ ಇಲ್ಲ. ಒಂದು ಹೇಳಿಕೆಯನ್ನು ಕೊಡಲಿಲ್ಲ. ಪ್ರಚಾರದ ಗೀಳಿಗೆ ಮತ್ತು ಅದನ್ನೇ ಕಸುಬನ್ನಾಗಿಸಿಕೊಂಡಿರುವ ಈ ಇಬ್ಬರೂ ನಾಯಕರು ಆ.1 ರಂದು ಪ್ರತಿಭಟನೆ ಮಾಡುತ್ತೇವೆಂದು ನೀಡಿರುವ ಹೇಳಿಕೆ ನಾಚಿಕೆಗೇಡು. ಹೋರಾಟ ಮಾಡಲು ಇವರಿಗೆ ಯಾವ ನೈತಿಕತೆ ಇದೆ ಎಂದು ಅವರು ಪ್ರಶ್ನಿಸಿದರು.
ಭಾಸ್ಕರ್ ಪ್ರಸಾದ್ ಯಾರೆಂಬುದು ಗೊತ್ತಿಲ್ಲ. ಈತನಕ ಎಲ್ಲಿದ್ದರು? ಏನಾಗಿದ್ದರು? ಸಮಾಜದ ಬಗ್ಗೆ ಅವರು ಏನು ಮಾಡಿದ್ದಾರೆ. ಬಿಜೆಪಿ ನಾಯಕರ ಕುಮ್ಮಕ್ಕಿನಿಂದ ನಡೆಯುತ್ತಿರುವ ಹೋರಾಟಕ್ಕೆ ಸಮುದಾಯದ ಜನರು ಮನ್ನಣೆ ನೀಡಬಾರದು ಎಂದು ಅವರು ಮನವಿ ಮಾಡಿದರು.