ಥೇಮ್ಸ್‌ ನದಿ ದಂಡೆ ಮೇಲೆ ಪುಸ್ತಕ ಬಿಡುಗಡೆ ಆಗುವುದು ಸಾರ್ಥಕ ದಿನ

KannadaprabhaNewsNetwork | Updated : Jul 15 2024, 01:51 AM IST

ಸಾರಾಂಶ

ನನ್ನ ಜೀವನದ ಕೊನೆಯ ಉಸಿರು ಇರುವ ತನಕ ರಾಜಕಾರಣ ಮತ್ತು ಸಮಾಜದ ಆಗೂ ಹೋಗುಗಳ ಬಗ್ಗೆ ನಿರಂತರವಾಗಿ ಬರೆಯುತ್ತೇನೆ

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ಅನುಭವ ಮಂಟಪದ ಮೂಲಕ ಜಗತ್ತಿನ ಮೊದಲ ಸಂಸತ್ ಆರಂಭಿಸಿ ಸಮಾನತೆಯ ಸಮಾಜಕ್ಕೆ ನಾಂದಿ ಹಾಡಿದ ಜಗಜ್ಯೋತಿ ಬಸವೇಶ್ವರರ ಪ್ರತಿಮೆ ಇರುವ ಲಂಡನ್ ನಗರದ ಥೇಮ್ಸ್ ನದಿಯ ದಂಡೆಯಲ್ಲಿ ಪಾರ್ಲಿಮೆಂಟಿನ ಪ್ರದಕ್ಷಿಣೆಗಳು ಪುಸ್ತಕ ಬಿಡುಗಡೆಯಾಗುತ್ತಿರುವುದು ನನ್ನ ಜೀವನದ ಸಾರ್ಥಕ ಕ್ಷಣ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದರು.

ಜುಲೈ, 20 ರಂದು ಪಾರ್ಲಿಮೆಂಟ್ ಪ್ರದಕ್ಷಿಣೆಗಳು ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಲಂಡನ್ ನಗರಕ್ಕೆ ತೆರಳುತ್ತಿರುವ ತಮಗೆ ಪಟ್ಟಣದ ಕೃಷ್ಣ ಮಂದಿರದಲ್ಲಿ ಅಭಿಮಾನಿಗಳು ಮತ್ತು ಸ್ನೇಹಿತರು ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು ನನ್ನ ಜೀವನದ ಕೊನೆಯ ಉಸಿರು ಇರುವ ತನಕ ರಾಜಕಾರಣ ಮತ್ತು ಸಮಾಜದ ಆಗೂ ಹೋಗುಗಳ ಬಗ್ಗೆ ನಿರಂತರವಾಗಿ ಬರೆಯುತ್ತೇನೆ ಎಂದರು.

ಓದುವ ಸಂಸ್ಕೃತಿ ಮತ್ತು ಜನರ ಪರವಾಗಿ ಮಾತನಾಡುವ ಚಾತಿ ಇದ್ದರೆ ರಾಜಕಾರಣಿ ಅಭಿವೃದ್ಧಿ ಕೆಲಸ ಮಾಡಿ ಜನರ ನಾಡಿ ಮಿಡಿತವನ್ನು ಅರಿಯಬಹುದು. ಇಂದಿನ ಬಹುತೇಕ ರಾಜಕೀಯ ನಾಯಕರು ಓದುವ ಹವ್ಯಾಸ ಬೆಳೆಸಿಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕೆ. ಆರ್. ನಗರ ತಾಲೂಕಿನ ಅಡಗೂರು ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ನನ್ನನ್ನು ಗುರುತಿಸಿದ ಹಿಂದುಳಿದ ವರ್ಗದ ನೇತಾರ ಡಿ. ದೇವರಾಜ ಅರಸರು ಶಾಸನ ಸಭೆಗೆ ಪ್ರವೇಶ ಪಡೆಯುವ ಅವಕಾಶ ನೀಡಿದರು. ಇದರ ಜೊತೆಗೆ ಕ್ಷೇತ್ರದ ಮತದಾರರು ನಿರಂತರವಾಗಿ ನನ್ನನ್ನು ಆಶೀರ್ವಾದ ಮಾಡುತ್ತಿದ್ದಾರೆ ಎಂದು ಅವರು ಭಾವುಕರಾಗಿ ನುಡಿದರು.

ದೇಶಕ್ಕೆ ಸಾರ್ವಕಾಲಿಕ ಸಂವಿಧಾನವನ್ನು ರಚಿಸಿ ಕೊಟ್ಟ ಅಂಬೇಡ್ಕರ್ ನಮಗೆ ದೇವರಾಗಿದ್ದು ಸಂಸತ್ತು ದೇವಸ್ಥಾನವಾಗಿದೆ. ಹಾಗಾಗಿ ನಾವು ಇದನ್ನು ಅರಿತು ಗೌರವದಿಂದ ನಡೆದುಕೊಳ್ಳಬೇಕು. ನನ್ನ ರಾಜಕೀಯ ಏಳಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಪಾತ್ರವು ಮಹತ್ವದ್ದಾಗಿದೆ ಎಂದು ಅವರು ತಿಳಿಸಿದರು.

ನಮ್ಮ ಸಂಸತ್ತು ಹಳೆಯ ಕಟ್ಟಡದಲ್ಲಿ ಇದ್ದರೆ ತುಂಬಾ ಚೆನ್ನಾಗಿತ್ತು ಎಂದು ತಮ್ಮ ಅಭಿಪ್ರಾಯ ತಿಳಿಸಿದ ಅವರು, ಪಾರ್ಲಿಮೆಂಟ್ ಪ್ರದರ್ಶನಗಳು ನನ್ನ ಒಂಬತ್ತನೆಯ ಪುಸ್ತಕವಾಗಿದ್ದು ಇದು ಮನಸ್ಸಿಗೆ ಅಪಾರ ಖುಷಿ ನೀಡಿದ ಪುಸ್ತಕ ಎಂದು

ಸಂತಸ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಭಾಗವಹಿಸಿದ್ದ ನೂರಾರು ಮಂದಿ ಅಭಿಮಾನಿಗಳು ಮತ್ತು ಹಿತೈಷಿಗಳು ಎಚ್. ವಿಶ್ವನಾಥ್ ಮತ್ತು ಶಾಂತಮ್ಮ ವಿಶ್ವನಾಥ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಬಿಳ್ಕೊಟ್ಟರು.

Share this article