ಕೆ.ಎಂ. ಮಂಜುನಾಥ್
ಲೋಕಸಭಾ ಚುನಾವಣೆ ಸನಿಹಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವೀರಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡ ಹಾಗೂ ಸರಳ ಸಜ್ಜನಿಕೆಯಿಂದ ಎಲ್ಲ ಕಾರ್ಯಕರ್ತರಿಗೂ ಹೆಚ್ಚು ಸ್ನೇಹಮಯಿಯಾಗಿರುವ ವೈ.ಎಂ. ಸತೀಶ್ ಅವರನ್ನೇ ಪಕ್ಷದ ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ಅನೇಕ ಪ್ರಮುಖ ಕಾರ್ಯಕರ್ತರು ಹಾಗೂ ಪಕ್ಷದ ಎರಡನೇ ಹಂತಹದ ಜಿಲ್ಲಾ ಪ್ರಮುಖರು ರಾಜ್ಯ ನಾಯಕರಿಗೆ ಮನವಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ವೈ.ಎಂ. ಸತೀಶ್ ಅವರಿಗೆ ಕಮಲ ಪಕ್ಷಕ್ಕೆ ಜಿಲ್ಲಾ ಸಾರಥ್ಯ ವಹಿಸುವ ಸಾಧ್ಯತೆಯಿದೆ.
ಪಕ್ಷದ ಮೂಲಗಳ ಪ್ರಕಾರ ಈಗಾಗಲೇ ಜಿಲ್ಲಾಧ್ಯಕ್ಷರ ಅಂತಿಮ ಪಟ್ಟಿ ಸಿದ್ಧಗೊಂಡಿದೆ. ಶನಿವಾರ ಅಥವಾ ಭಾನುವಾರ ಪ್ರಕಟಗೊಳ್ಳುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.ತೀವ್ರ ಪೈಪೋಟಿಯಿತ್ತು: ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ, ಪಕ್ಷದ ಜಿಲ್ಲಾ ಕಾರ್ಯದರ್ಶಿ ಅನಿಲ್‌ನಾಯ್ಡು ಮೋಕಾ, ಬಿಜೆಪಿ ರೈತ ಮೋರ್ಚಾದ ಮಾಜಿ ಜಿಲ್ಲಾಧ್ಯಕ್ಷ ಗಣಪಾಲ್ ಐನಾಥ ರೆಡ್ಡಿ, ಪಾಲಿಕೆ ಸದಸ್ಯ ಎಸ್. ಮಲ್ಲನಗೌಡ, ಸಿರುಗುಪ್ಪ ತಾಲೂಕಿನ ಆರ್.ಸಿ. ಪಂಪನಗೌಡ, ಕೊಂಚಗೇರಿ ನಾಗರಾಜಗೌಡ, ಸಂಡೂರಿನ ಜಿ.ಟಿ. ಪಂಪಾಪತಿ ಅವರು ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಇವರಲ್ಲದೆ ಕೆಲವರು ನೇರವಾಗಿ ರಾಜ್ಯ ಮುಖಂಡರನ್ನು ಭೇಟಿ ಮಾಡಿ ತಮಗೆ ಪಕ್ಷದ ಜಿಲ್ಲಾಧ್ಯಕ್ಷ ಪಟ್ಟ ಕಟ್ಟುವಂತೆ ಕೋರಿಕೊಂಡಿದ್ದರು.
ಇನ್ನೆರಡು ದಿನಗಳಲ್ಲಿ ಪಕ್ಷದ ಜಿಲ್ಲಾಧ್ಯಕ್ಷರ ನೇಮಕವಾಗಲಿದ್ದು, ಯಾರನ್ನು ನೇಮಕ ಮಾಡಿದರೂ ಅವರ ಜತೆಗೂಡಿ ಪಕ್ಷದ ಸಂಘಟನೆ ಮಾಡುತ್ತೇವೆ. ಪಕ್ಷದ ರಾಜ್ಯ ನಾಯಕರ ತೀರ್ಮಾನಕ್ಕೆ ನಾವು ಬದ್ಧ ಎಂದು ಬಳ್ಳಾರಿ ಬಿಜೆಪಿ ಜಿಲ್ಲಾಧ್ಯಕ್ಷ ಮುರಹರಗೌಡ ಗೋನಾಳ್ ಹೇಳುತ್ತಾರೆ.