ಕನ್ನಡಪ್ರಭ ವಾರ್ತೆ ಜಮಖಂಡಿ
ಗುರುವಾರ ಸಂಜೆ ಗೃಹ ಕಚೇರಿ ಸಾಕ್ಷಾತ್ಕಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ವಾಯುಮಾಲಿನ್ಯ ನಿಯಂತ್ರಣ, ಇಂಧನ ಉಳಿತಾಯ, ಆರೋಗ್ಯ ಜಾಗೃತಿ, ಪರಿಸರ ಸ್ನೇಹಿ, ಇಂಧನ ಮುಕ್ತ, ಆರೋಗ್ಯದ ಕಡೆ ನಮ್ಮ ನಿರಂತರ ಸೈಕಲ್ ನಡೆ ಎಂಬ ಅಭಿಯಾನ ಗುಡಗುಂಟಿ ಪರಿವಾರದಿಂದ ಹಮ್ಮಿಕೊಳ್ಳಲಾಗಿದೆ. ಶನಿವಾರ ಬೆಳಗ್ಗೆ 7ಗಂಟೆಯಿಂದ ನಗರದಲ್ಲಿ ಎಲ್ಲ ಕಾರ್ಯಕ್ರಮಗಳಿಗೆ ಸೈಕಲ್ ನೊಂದಿಗೆ ಸಂಚರಿಸಲಾಗುವುದು. ಈ ಕಾರ್ಯಕ್ರಮ ಜೀವನಪರ್ಯಂತ ಮುಂದುವರಿಸುವ ಸಂಕಲ್ಪ ಮಾಡಲಾಗಿದೆ ಎಂದರು. ಸೈಕಲ್ ಬಳಕೆಯಿಂದ ಇಂಧನ ಉಳಿತಾಯ, ಮಾಲಿನ್ಯ ರಕ್ಷಣೆ, ಹಣ ಉಳಿತಾಯ, ಆರೋಗ್ಯದ ರಕ್ಷಣೆಗೆ ಸಹಾಯಕವಾಗಿದೆ ಎಂದು ವಿವರಿಸಿದರು.
ನಗರದ ವ್ಯಾಪ್ತಿಯಲ್ಲಿ ನಡೆಯುವ ಸಾರ್ವಜನಿಕ ಕಾರ್ಯಕ್ರಮಗಳು, ಸಭೆಗಳು ಹಾಗೂ ಕಚೇರಿ ಕೆಲಸಗಳಿಗೆ ಸಾಧ್ಯವಾದಷ್ಟು ಸೈಕಲ್‌ನಲ್ಲಿಯೇ ತೆರಳಿ ಬರುವ ಸಂಕಲ್ಪ ಮಾಡಿದ್ದೇನೆ. ಕ್ಷೇತ್ರದ ನಿವಾಸಿಗಳೆಲ್ಲರೂ ಸೈಕಲ್ ಅಭಿಯಾನಕ್ಕೆ ಕೈಜೋಡಿಸುವ ಮೂಲಕ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಅಭಿಯಾನದ ಯಶಸ್ಸಿಗೆ ಸಾಥ್ ನೀಡಬೇಕು ಎಂದರು.ಕ್ಷೇತ್ರದಲ್ಲಿ ಸುಮಾರು 78 ಸಾವಿರ ಲೀಟರ್ ನಷ್ಟು ಪೆಟ್ರೋಲ್ ಬಳಕೆಯಾಗುತ್ತದೆ, ಸೈಕಲ್ ಬಳಕೆಯ ಅಭಿಯಾನದಿಂದ ಇದರಲ್ಲಿ ಅರ್ಧದಷ್ಟಾದರೂ ಇಂಧನ ಉಳಿಸಬಹುದು ಎಂಬುದು ನನ್ನ ಹೆಬ್ಬಯಕೆ ಆಗಿದೆ ಎಂದರು.