ಜನಪ್ರತಿನಿಧಿಗಳಿಂದ ಶಾಸನ ಸಭೆ ಮಹತ್ವ ಹಾಳು

KannadaprabhaNewsNetwork | Published : Dec 23, 2024 1:02 AM

ಸಾರಾಂಶ

ಜನರಿಂದ ಜನರಿಗಾಗಿ ಆಯ್ಮೆಯಾದ ಜನಪ್ರತಿನಿಧಿಗಳು ಪವಿತ್ರವಾದ ಶಾಸನ ಸಭೆಯಲ್ಲಿ ಮೂರನೇ ದರ್ಜೆಯ ಭಾಷೆ ಬಳಸಿ ಕಚ್ಚಾಡುವ ಮೂಲಕ ಶಾಸನ ಸಭೆಯ ಮಹತ್ವವನ್ನು ಹಾಳು ಮಾಡಿರುವುದು ಅತ್ಯಂತ ನಾಚಿಗೇಡಿನ ಸಂಗತಿ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜನರಿಂದ ಜನರಿಗಾಗಿ ಆಯ್ಮೆಯಾದ ಜನಪ್ರತಿನಿಧಿಗಳು ಪವಿತ್ರವಾದ ಶಾಸನ ಸಭೆಯಲ್ಲಿ ಮೂರನೇ ದರ್ಜೆಯ ಭಾಷೆ ಬಳಸಿ ಕಚ್ಚಾಡುವ ಮೂಲಕ ಶಾಸನ ಸಭೆಯ ಮಹತ್ವವನ್ನು ಹಾಳು ಮಾಡಿರುವುದು ಅತ್ಯಂತ ನಾಚಿಗೇಡಿನ ಸಂಗತಿ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಕಿಡಿಕಾರಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶಾಸನ ಸಭೆಯಲ್ಲಿ ನಾಡಿನ ಸಮಸ್ಯೆಗಳನ್ನು ಚರ್ಚೆ ಮಾಡಬೇಕಾಗಿತ್ತು. ಜನಪ್ರತಿನಿಧಿಗಳು ಅದನ್ನು ಮರೆತು ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪಿಸಿ ಮೂರನೇ ದರ್ಜೆಯ ಪದಬಳಸಿ ಕಚ್ಚಾಡಿಕೊಂಡಿರುವುದು ಈ ನಾಡಿನ ಜನರಿಗೆ ಮಾಡಿದ ಅವಮಾನ ಎಂದು ಹರಿಹಾಯ್ದರು.ಇವರಾರಿಗೂ ಜನರ ಬಗ್ಗೆ ಕಾಳಜಿ ಇಲ್ಲ ಎನ್ನುವುದು ಇದರಿಂದ ಸಾಬೀತಾಗಿದೆ. ಕಾಂಗ್ರೆಸ್ ಸರ್ಕಾರವು ಬೆಳಗಾವಿಯಲ್ಲಿ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸಮಾರಂಭ ಆಯೋಜಿಸಿದ್ದಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಆವರು, ಗಾಂಧೀಜಿಯವರ ಬಗ್ಗೆ ಮಾತನಾಡುವ ನೈತಿಕತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ ಯಾವುದೇ ನಾಯಕರಿಗೂ ಇಲ್ಲ ಎಂದರು.ರೈತರ ಸಮಸ್ಯೆ ಇಟ್ಡುಕೊಂಡು ರಾಜ್ಯ ರೈತ ಸಂಘವು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿತು. ಬಹುಮುಖ್ಯವಾಗಿ ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ವಾಪಾಸ್ ಪಡೆಯಬೇಕೆಂದು ನಾವು ಪ್ರತಿಭಟನೆ ನಡೆಸಿದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಕಾಯ್ದೆಯನ್ನು ಜನವರಿ ಅಂತ್ಯದೊಳಗೆ ವಾಪಾಸ್ ಪಡೆಯವುದಾಗಿ ಭರವಸೆ ನೀಡಿದ್ದಾರೆ ಎಂದು ಭರವಸೆ ನೀಡಿದ್ದಾರೆಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಚುನಾವಣೆ ವೇಳೆ ಎಂ.ಎಸ್‌.ಪಿ ಜಾರಿಗೆ ಭರವಸೆ ನೀಡಿದ್ದರು. ಅವರು ಅಧಿಕಾರಕ್ಕೆ ಬಂದು ಇಷ್ಟು ದಿನವಾದರೂ ಎಂಎಸ್‌ಪಿ ಜಾರಿ ಆಗಿಲ್ಲ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಇದರ ಜತೆಗೆ ನಾವು ಯಾವ ರೀತಿಯ ಹೋರಾಟ ನಡೆಸಬೇಕೆನ್ನುವುದನ್ನು ಎನ್. ಡಿ. ಸುಂದರೇಶ್ ನೆನಪಿನ ಸಭೆಯಲ್ಲಿ ಚರ್ಚೆ ಮಾಡಲಿದ್ದೇವೆ ಎಂದು ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ರೈತ ಮುಖಂಡರಾದ ಉಮೇಶ್ ಪಾಟೀಲ್, ಮಂಜುನಾಥ್ ಗೌಡ, ಚನ್ನಬಸಪ್ಪ ಮಲ್ಲಶೆಟ್ಟಿಹಳ್ಳಿ, ಭಕ್ತರ ಹಳ್ಳಿ ಭೈರೇಗೌಡ, ಸೊರಬದ ಈಶ್ವರಪ್ಪ ಸೇರಿದಂತೆ ಮತ್ತಿತರರು ಇದ್ದರು.

Share this article