- ನೇತ್ರ, ಕೀಲು ಮೂಳೆ, ಪ್ರಸೂತಿ, ಚರ್ಮ, ಮಕ್ಕಳ ತಜ್ಞರು ಸಹಿತ ಸಿಬ್ಬಂದಿ ಹುದ್ದೆ ಖಾಲಿ । 86 ಹುದ್ದೆಗಳ ನೇಮಕ ವಾಗಬೇಕು
ನೆಮ್ಮಾರ್ ಅಬೂಬಕರ್ಕನ್ನಡಪ್ರಭ ವಾರ್ತೆ, ಶೃಂಗೇರಿ
ಆಸ್ಪತ್ರೆಗೆ ಸುಸಜ್ಜಿತ ಕಟ್ಟಡವಿದೆ. ಸುಣ್ಣಬಣ್ಣ ಸಹಿತ ಸುತ್ತಮುತ್ತಲು ಉತ್ತಮ ಸ್ವಚ್ಛ ವಾತಾವರಣವಿದೆ. ಇಂಟರ್ ಲಾಕ್ ಅಳವಡಿಸಲಾಗಿದೆ. ಸುಮಾರು 30 ಬೆಡ್ ಗಳಿದ್ದು ಎಲ್ಲಾರೀತಿಯ ಮೂಲಭೂತ ಸೌಕರ್ಯಗಳಿವೆ. ಎಕ್ಸರೆ, ಆಕ್ಸಿಜನ್ ಘಟಕ, ಔಷದಿ ಸಾಮಗ್ರಿಗಳು, ಸಹಿತ ಎಲ್ಲಾ ಮೂಲ ಸೌಕರ್ಯಗಳಿದ್ದರೂ ಅಗತ್ಯ ವೈದ್ಯ, ಸಿಬ್ಬಂದಿಯೇ ಇಲ್ಲದೇ ಹಲವು ವರ್ಷಗಳಿಂದ ಆಸ್ಪತ್ರೆಯಲ್ಲಿ ಬೃಹತ್ ಸಮಸ್ಯೆ ಕಾಡುತ್ತಿದೆ. ಇದು ವೈದ್ಯ, ಸಿಬ್ಬಂದಿ ಕೊರತೆ ಎದುರಿಸುತ್ತಿರುವ ತಾಲೂಕಿನ ಕೇಂದ್ರ ಬಿಂದುವಾದ ತಾಲೂಕು ಸಾರ್ವಜನಿಕ ಆಸ್ಪತ್ರೆ ದುಸ್ಥಿತಿ.ಕಳೆದೆರೆಡು ವರ್ಷಗಳಿಂದ ಆಸ್ಪತ್ರೆಯಲ್ಲಿ ಸಾಕಷ್ಟು ಪ್ರಗತಿ ಕಾಮಗಾರಿ ನಡೆದಿದೆ. ಆದರೆ ವೈದ್ಯ ಹಾಗೂ ಸಿಬ್ಬಂದಿ ಹುದ್ದೆ ಭರ್ತಿಯಾಗದೇ ಅವ್ಯವಸ್ಥೆ ಮಾತ್ರ ಮುಂದುವರಿದಿದೆ. ಆಸ್ಪತ್ರೆಯಲ್ಲಿ ವೈದ್ಯರ ಹುದ್ದೆ ಸಹಿತ ಒಟ್ಟು 96 ಹುದ್ದೆಗಳು ಇದ್ದು, ಅದರಲ್ಲಿ 86 ಹುದ್ದೆಗಳು ಖಾಲಿ ಇವೆ. ಒಟ್ಟು 13 ವೈದ್ಯರು ಹುದ್ದೆಗಳಲ್ಲಿ ಈಗಿರುವ ಕೇವಲ 1 ಹುದ್ದೆ ಮಾತ್ರ ಭರ್ತಿಯಾಗಿ ಒಬ್ಬರೇ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ನೇತ್ರ ತಜ್ಞ, ಕೀಲು ಮೂಳೆ ತಜ್ಞ, ಪ್ರಸೂತಿ, ಚರ್ಮ, ಮಕ್ಕಳ ತಜ್ಞರ ಹುದ್ದೆ ಖಾಲಿ ಖಾಲಿಯಾಗಿ ಹಲವು ವರ್ಷಗಳೇ ಕಳೆದಿವೆ. ಸುಸಜ್ಜಿತ ಆಸ್ಪತ್ರೆಯಿದ್ದರೂ ವೈದ್ಯರಿಲ್ಲದೇ ಜನರು ಮಕ್ಕಳನ್ನು ಹೊತ್ತು ಶಿವಮೊಗ್ಗ ಮಂಗಳೂರು, ಉಡುಪಿ, ಮಣಿಪಾಲ ಬೇರೆ ಬೇರೆ ಊರುಗಳಿಗೆ ಹೋಗಬೇಕಾದ ದಯನೀಯ ಸ್ಥಿತಿ ಇಲ್ಲಿಯದು.
ಎಕ್ಸರೆ ಸೌಲಭ್ಯವಿದ್ದರೂ ಸ್ಕಾನಿಂಗ್ ವ್ಯವಸ್ಥೆಯಿಲ್ಲ. ಪ್ರತಿನಿತ್ಯ 200 ಕ್ಕೂ ಹೆಚ್ಚು ರೋಗಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ. ಒಳ- ಹೋರರೋಗಿಗಳು ಸಂಖ್ಯೆ ಹೆಚ್ಚಾಗಿದ್ದು ಅಗತ್ಯ ವೈದ್ಯರ ಕೊರತೆ ಇರುವುದರಿಂದ ಇಲ್ಲಿಗೆ ಬರುವ ರೋಗಿಗಳು ಪರದಾಡುವ ಪರಿಸ್ಥಿತಿ ನಿರಂತರವಾಗಿದೆ.ಶೃಂಗೇರಿ ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು ಇಲ್ಲಿ ಪ್ರತೀ ವರ್ಷ 70 ರಿಂದ 80 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಾರೆ. ಅಗತ್ಯ ಚಿಕಿತ್ಸೆ,ತುರ್ತು ಸಂದರ್ಭಗಳಲ್ಲಿ ತುರ್ತು ಚಿಕಿತ್ಸೆಗೂ ಅಗತ್ಯ ವೈದ್ಯರ ಸೌಲಭ್ಯಗಳಿಲ್ಲದೇ ಪರದಾಟ ನಡೆಸುವ ಪರಿಸ್ಥಿತಿ. ಅಲ್ಲದೇ ಮಂಗಳೂರು ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿರುವುದರಿಂದ ಇಲ್ಲಿ ಆಗಾಗ ಅಪಘಾತಗಳು ಸಂಭವಿಸುತ್ತಿದ್ದು ಇಲ್ಲಿ ತುರ್ತು ಚಿಕಿತ್ಸೆ ಸೌಲಭ್ಯವಿಲ್ಲದೆ ಬೇರೆ ಆಸ್ಪತ್ರೆಗಳನ್ನೆ ಅವಲಂಬಿಸಬೇಕಾದ ಪರಿಸ್ಥಿತಿ ಇಲ್ಲಿಯದು.
ತಾಲೂಕಿನ 9 ಗ್ರಾಮ ಪಂಚಾಯಿತಿ ವ್ಯಾಪ್ತಿಗಳನ್ನೊಳಗೊಂಡ ಈ ಆಸ್ಪತ್ರೆ ತಾಲೂಕಿನ ಕೇಂದ್ರ ಬಿಂದು. ತಾಲೂಕಿನ ಜನರು ಸಹಿತ, ಸುತ್ತುತ್ತಲ ಗ್ರಾಮಗಳ ಜನರು ಈ ಆಸ್ಪತ್ರೆಯನ್ನೆ ಅವಲಂಬಿತರಾಗಿದ್ದಾರೆ. ಆದರೂ ಕಳೆದ ಹಲವು ವರ್ಷಗಳಿಂದ ವೈದ್ಯರು, ಸಿಬ್ಬಂದಿ ಕೊರತೆ ಎದುರಿಸು ತ್ತಿದ್ದರೂ ಈವರೆಗೂ ಶಾಶ್ವತ ಪರಿಹಾರ ಸಿಗದೇ ರೋಗಿಗಳು ನಿರಂತರವಾಗಿ ಪರದಾಡುತ್ತಿರುವುದು ಈ ಆಸ್ಪತ್ರೆ ದೌರ್ಬಾಗ್ಯವೇ ಸರಿ ಎನ್ನಬಹುದಾಗಿದೆ.ತಾಲೂಕಿನ ಕೇಂದ್ರ ಸ್ಥಾನವಾಗಿದ್ದರೂ ಜನರಿಗೆ ಅಗತ್ಯ ಸೇವೆ ಸಿಗದೇ ಇರುವುದರಿಂದ ಸುಸಜ್ಜಿತ ಆಸ್ಪತ್ರೆಯಿದ್ದರೂ ಪ್ರಯೋಜನಕ್ಕೆ ಬಾರದಂತಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ. ಇನ್ನಾದರೂ ಜನಪ್ರತಿನಿದಿಗಳು, ಸಂಬಂಧಪಟ್ಟ ಇಲಾಖೆ, ಸರ್ಕಾರ ಇಲ್ಲಿಗೆ ಅಗತ್ಯ ವೈದ್ಯರು, ಸಿಬ್ಬಂದಿ ನೇಮಕಮಾಡಿ ಆಸ್ಪತ್ರೆಯನ್ನು ಇನ್ನಷ್ಟು ಪ್ರಗತಿಯತ್ತ ಕೊಂಡೊಯ್ಯಬೇಕಿದೆ ಎಂಬುದು ಸ್ಥಳೀಯರ ಒತ್ತಾಸೆ.
-- ಬಾಕ್ಸ್--ವೈದ್ಯರ ಕೊರತೆಯೇ ಮೂಲ ಸಮಸ್ಯೆ
ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಮೂಲ ಸೌಕರ್ಯವಿದೆ. ವೈದ್ಯರ ಕೊರತೆಯೇ ಮೂಲ ಸಮಸ್ಯೆಯಾಗಿದೆ. ಕೊಠಡಿಗಳಲ್ಲಿ ಟೈಲ್ಸ್, ಇಂಟರ್ ಲಾಕ್ ಅಳವಡಿಸಲಾಗಿದೆ. ಕುಡಿಯುವ ನೀರು, ವಿದ್ಯುತ್ ಗೆ ಕೊರತೆ ಇಲ್ಲ. ಆಸ್ಪತ್ರೆ ಕ್ಯಾಂಟೀನ್ ಆರಂಭಿಸಲಾಗಿದೆ. ಸುಣ್ಣ ಬಣ್ಣ ಸಹಿತ ಆಸ್ಪತ್ರೆ ಸ್ವಚ್ಚತೆ ಮಾಡಲಾಗಿದೆ. ರೋಗಿಗಳಿಗೆ ಅನುಕೂಲವಾಗುವ ಪೂರಕ ವಾತಾವರಣ ನಿರ್ಮಿಸಲಾಗಿದೆ. ಆಸ್ಪತ್ರೆ ಪ್ರಗತಿ ಹೊಂದಿದೆ. ಆದರೆ ವೈದ್ಯರ ಕೊರತೆ ಮೂಲ ಸಮಸ್ಯೆಯಾಗಿದ್ದು, ಅಗತ್ಯ ವೈದ್ಯರ ನೇಮಕವಾಗಬೇಕು ಎಂದು ಆಡಳಿತ ವೈದ್ಯಾಧಿಕಾರಿ. ಡಾ.ಶ್ರೀನಿವಾಸ್ ಹೇಳಿದ್ದಾರೆ. -- ಕೋಟ್--ಶೃಂಗೇರಿ ಪ್ರಮುಖ ತಾಲೂಕು ಕೇಂದ್ರವಾಗಿದ್ದು ಇಲ್ಲಿನ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ತುರ್ತಾಗಿ ನೇತ್ರ, ಪ್ರಸೂತಿ, ಮೂಳೆ, ಮಕ್ಕಳ ತಜ್ಞರ ನೇಮಕ ಮಾಡಬೇಕು. ಇನ್ನಷ್ಟು ಮೂಲಭೂತ ಸೌಲಭ್ಯ ನೀಡಬೇಕು .ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು
....ಟಿ.ಕೆ.ಗೋಪಾಲ್ ನಾಯಕ್ಅಧ್ಯಕ್ಷ, ತಾಲೂಕು ಕಿಸಾನ್ ಸೆಲ್
--22 ಶ್ರೀ ಚಿತ್ರ 1-ಶೃಂಗೇ್ರಿ ಪಟ್ಟಣದಲ್ಲಿರುವ ವೈದ್ಯ,ಸಿಬ್ಬಂದಿಗಳ ಕೊರತೆಯಲ್ಲಿರುವ ಸಾರ್ವಜನಿಕ ಆಸ್ಪತ್ರೆ.
22 ಶ್ರೀ ಚಿತ್ರ 2-ಸುಸಜ್ಜಿತ ಆಸ್ಪತ್ರೆ ಕಟ್ಟಡದ ಒಳನೋಟ,22 ಶ್ರೀ ಚಿತ್ರ 3-ಡಾ.ಶ್ರೀನಿವಾಸ್ .ತಾಲೂಕು ಆರೋಗ್ಯಾಧಿಕಾರಿ.