ಕನ್ನಡಪ್ರಭ ವಾರ್ತೆ ಪಾಂಡವಪುರ
ಗ್ರಾಮದ ಚಿಕ್ಕಬೋರೇಗೌಡರ ಪುತ್ರ ನಿತಿನ್ ಅವರಿಗೆ ಸೇರಿದ ಮೇಕೆಗಳು ಸಾವನ್ನಪ್ಪಿದ್ದು, ರೈತನಿಗೆ ಲಕ್ಷಾಂತರ ರು. ನಷ್ಟವಾಗಿದೆ.
ಬುಧವಾರ ಮಧ್ಯರಾತ್ರಿ ಮನೆ ಪಕ್ಕದಲ್ಲಿರುವ ಮೇಕೆಗಳ ಕೊಟ್ಟಿಗೆಗೆ ಚಿರತೆಗಳು ದಾಳಿ ನಡೆಸಿ ಮೇಕೆಗಳ ಕುತ್ತಿಗೆ ಭಾಗವನ್ನು ಹಿಡಿದು ಸಾಯಿಸಿ ರಕ್ತಕುಡಿದು ಪರಾರಿಯಾಗಿವೆ. ಘಟನೆಯಲ್ಲಿ ಸುಮಾರು 10 ಮೇಕೆಗಳು ಸಾವನ್ನಪ್ಪಿವೆ.ಮೇಕೆಗಳನ್ನು ಕೊಂದಿರುವ ಚಿರತೆಗಳು ಎರಡು ಮೇಕೆಯನ್ನು ಹೊತ್ತೊಯ್ದಿವೆ. ಉಳಿದ ಎಂಟು ಮೇಕೆಗಳನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿವೆ. ಗುರುವಾರ ಬೆಳಗ್ಗೆ ಎದ್ದ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಘಟನಾಸ್ಥಳಕ್ಕೆ ಅರಣ್ಯಾಧಿಕಾರಿಗಳು, ಪಶುಸಂಗೋಪಾನ ಇಲಾಖೆಯ ಅಧಿಕಾರಿಗಳು ಭೇಟಿಕೊಟ್ಟು ಪರಿಶೀಲಿಸಿ, ಮೃತಪಟ್ಟ ಮೇಕೆಗಳ ಪಂಚನಾಮೆ ನಡೆಸಿದರು. ಅರಣ್ಯಾಧಿಕಾರಿಗಳು ಇಲಾಖೆಯಿಂದ ಸೂಕ್ತಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.
ಚಿಕ್ಕಮರಳಿ ಗ್ರಾಮದಲ್ಲಿ ಪದೇ ಪದೇ ಕುರಿ, ಮೇಕೆ, ಹಸುಗಳ ಮೇಲೆ ಚಿರತೆ ದಾಳಿ ನಡೆಯುತ್ತಲೇ ಇದ್ದು, ರೈತರಿಗೆ ಸಾಕಷ್ಟು ನಷ್ಟವಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ. ದೂರು ಕೊಟ್ಟಾಗ ಬೋನ್ ಹಾಕುತ್ತಾರೆ. ಬಳಿಕ ಬೋನ್ ತೆಗೆದುಕೊಂಡು ಹೋಗುತ್ತಾರೆ. ಈ ಭಾಗದಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿರುವುದರಿಂದ ಮೂರ್ನಾಲ್ಕು ಬೋನ್ ಗಳನ್ನು ಹಾಕಿ ಚಿರತೆ ಸೇರೆಗೆ ಮುಂದಾಗಬೇಕು ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.