ಬ್ಯಾಡಗಿ:ಚಿರತೆಯೊಂದು ನಾಟಿ ಕೋಳಿ ಸಾಕಾಣಿಕೆ ಘಟಕ (ಫಾರಂ) ಮೇಲೆ ದಾಳಿ ನಡೆಸಿದ ಪರಿಣಾಮ ಸುಮಾರು 200 ಕ್ಕೂ ಕೋಳಿಗಳು ಸಾವನ್ನಪ್ಪಿದ್ದು 150ಕ್ಕೂ ಹೆಚ್ಚು ಕೋಳಿಗಳು ನಾಪತ್ತೆಯಾದ ಘಟನೆ ಶುಕ್ರವಾರ ತಡರಾತ್ರಿ ತಾಲೂಕಿನ ಬುಡಪನಹಳ್ಳಿ ಗ್ರಾಮದ ಕರಿಯಪ್ಪ ನಿಂಗಪ್ಪ ಮೆಡ್ಲೇರಿ ಎಂಬುವರಿಗೆ ಸೇರಿದ ಹೊಲದಲ್ಲಿ ನಡೆದಿದ್ದು ಸುಮಾರು 3 ಲಕ್ಷ ಮೌಲ್ಯ ನಷ್ಟವಾಗಿದೆ.
ಚಿರತೆ ಇಲ್ಲಿಯವರೆಗೂ ಕೇವಲ ಕುರಿ, ನಾಯಿ, ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದವು. ಇದೀಗ ಕೋಳಿಫಾರಂಗಳ ಗುರಿಯಾಗಿಸಿಕೊಂಡು ತಾಲೂಕಿನಲ್ಲಿ ಮೊದಲಬಾರಿ ಕೋಳಿಫಾರಂ ಮೇಲೆದಾಳಿ ನಡೆಸಿದ್ದು ಕೋಳಿಫಾರಂಗಳ ಮಾಲೀಕರು ಸೇರಿದಂತೆ ರೈತರು ಬೆಚ್ಚಿ ಬೀಳಿಸುವಂತೆ ಮಾಡಿದೆ,ಮೆಸ್ ಹರಿದು ನುಗ್ಗಿರುವ ಶಂಕೆ:ಕೋಳಿಫಾರಂನ ಸುತ್ತಲೂ 2 ಲೇಯರ್ ಮೆಸ್ ಹಾಕಿ ಭದ್ರಗೊಳಿಸಲಾಗಿತ್ತು, ಆದರೆ ಕೋಳಿಗಳಿಗೆ ಆಹಾರ ಸರಬರಾಜು ಮಾಡುವ ಜಾಗದಲ್ಲಿಯೇ ಚಿರತೆ ತನ್ನ ಕೈಯಲ್ಲಿರುವ ಪಂಜಗಳಿಂದ ಮೆಸ್ ಹರಿದು ಒಳಗೆ ಪ್ರವೇಶಿಸಿದೆ, ಬಳಿಕ ಅಲ್ಲಿರುವ ಕೋಳಿಗಳಿಗೆ ಹಿಗ್ಗಾಮುಗ್ಗಾ ಹೊಡೆದಿದ್ದು ಇದರ ರಭಸಕ್ಕೆ ಸುಮಾರು 200 ಕ್ಕೂ ಕೋಳಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು ತನಗೆ ಬೇಕಾದ್ದಷ್ಟನ್ನು ತಿಂದು ಉಳಿದವನ್ನು ಬಿಟ್ಟು ಹೋಗಿದೆ.
ಮದುವೆ ನಿಶ್ಚಯಕ್ಕೆ ತೆರಳಿದ್ದ ಕೋಳಿಫಾರಂ ಮಾಲೀಕ: ಸದಾಕಾಲವು ಕೋಳಿಫಾರಂನಲ್ಲಿರುತ್ತಿದ್ದ ಮಾಲೀಕ ಕರಿಯಪ್ಪ ಅಂದಿನ ದಿನವೇ ಮಗನ ಮದುವೆ ನಿಶ್ಚಯಕ್ಕೆ ತೆರಳಿದ್ದು ಕೋಳಿಫಾರಂನತ್ತ ಸುಳಿದಿರಲಿಲ್ಲ, ತಾಂತ್ರಿಕ ಕಾರಣಗಳಿಂದ ಒಳಭಾಗದಲ್ಲಿರುವ ವಿದ್ಯುತ್ ಕೂಡ ಸ್ಥಗಿತಗೊಂಡಿತ್ತು ಹೀಗಾಗಿ ಚಿರತೆ ದಾಳಿ ನಡೆಸಿದರೂ ಯಾರೊಬ್ಬರ ಗಮನಕ್ಕೆ ಬಂದಿಲ್ಲ, ಆದರೆ ಅಂದಿನ ದಿನವೇ ಚಿರತೆ ದಾಳಿ ನಡೆಸಿದ್ದು ಆಶ್ಚರ್ಯ ಮೂಡಿಸಿದೆ.ಒಂದಲ್ಲ ಮೂರು ಚಿರತೆ:ಈ ಭಾಗದಲ್ಲಿ ಒಂದು ದೊಡ್ಡ ಚಿರತೆ ಹಾಗೂ 2 ಮರಿಗಳು ಸುಳಿದಾಡುತ್ತಿರುವ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ಲಭ್ಯವಾಗಿತ್ತು. ಹೀಗಾಗಿ ಇಲಾಖೆ ವತಿಯಿಂದ ಬೋನ್ ಅಳವಡಿಸಿದ್ದರಾದರೂ ಬೋನ್‌ಗೆ ಬೀಳದ ಚಿರತೆ ಕೋಳಿಫಾರಂ ಮೇಲೆ ಮೂರು ಚಿರತೆಗಳು ದಾಳಿ ನಡೆಸಿದ್ದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ದೃಢಪಡಿಸಿದ್ದಾರೆ.
ನಾಟಿಕೋಳಿ ಸಾಕಾಣಿಕೆ ಲಾಭದಾಯಕವೆಂದು ಬ್ಯಾಂಕ್‌ನಲ್ಲಿ ರು. 5 ಲಕ್ಷ ಸಾಲಪಡೆದು ಶೆಡ್ ನಿರ್ಮಿಸಿದ್ದ ಕರಿಯಪ್ಪ 750ಕ್ಕೂ ಕೋಳಿಗಳನ್ನು ಸಾಕಿದ್ದ. ಆದರೆ ಚಿರತೆ ನಡೆಸಿದ ದಾಳಿಯಿಂದ 200 ಕ್ಕೂ ಸಾವನ್ನಪ್ಪಿದ್ದು 150 ಕ್ಕೂ ಹೆಚ್ಚು ನಾಪತ್ತೆಯಾಗಿವೆ. ಸುಮಾರು 2 ಲಕ್ಷಕ್ಕೂ ಅಧಿಕ ಮೊತ್ತದ ಕೋಳಿ ಸಾವನ್ನಪ್ಪಿವೆ ಇನ್ನೇನು ಲಾಭವಾಗಿದ್ದ ಕೋಳಿಗಳು ಸಾವನ್ನಪ್ಪಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಚಿರತೆಗಳನ್ನು ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರ ಮಾಡಬೇಕು. ಸರ್ಕಾರ ಪರಿಹಾರ ನೀಡುವಂತೆ ಸಂತ್ರಸ್ತ ರೈತ ಕರಿಯಪ್ಪ ಆಗ್ರಹಿಸಿದರು.ಸ್ಥಳ ಪರಿಶೀಲನೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ದಾಳಿಯನ್ನು ದೃಢೀ ಕರಿಸಿದ್ದು ರೈತರು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು ಮತ್ತು ಇಬ್ಬರು ಮೂವರು ಕೂಡಿಕೊಂಡು ಹೊಲಕ್ಕೆ ತೆರಳಬೇಕು. ಸಂಜೆ ವೇಳೆ ಆದಷ್ಟು ಬೇಗನೆ ಮನೆಯನ್ನು ಸೇರುವಂತೆ ಸಲಹೆ ನೀಡಿದ್ದಾರೆ.ಕೃಷಿ ಜೊತೆಗೆ ಹೈನುಗಾರಿಕೆ ಕೋಳಿ, ಕುರಿ ಸಾಕಾಣಿಕೆಗೆ ಉತ್ತೇಜನ ನೀಡುತ್ತಿರುವ ಸರ್ಕಾರ ಸಾಲ ಸೌಲಭ್ಯ ಸಹಾಯಧನ ನೀಡುತ್ತಿದೆ. ಆದರೆ, ಚಿರತೆ ದಾಳಿಯಿಂದ ರೈತನ ಕೈಗೆ ಬಂದಿದ್ದು ಬಾಯಿಗೆ ಬರಲಿಲ್ಲ ಎನ್ನು ವಂತಾಗಿದೆ. ಸರ್ಕಾರ ಸಂತ್ರಸ್ತ ರೈತನ ಪರವಾಗಿದ್ದು ಆದಷ್ಟು ಬೇಗನೆ ಚಿರತೆ ಬಂಧಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು ಸೂಕ್ತ ಪರಿಹಾರವನ್ನು ಕೂಡ ಕೊಡಿಸಲಿದ್ದೇನೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.