ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ಗೋಣಿತುಮಕೂರು, ದೇವೀಹಳ್ಳಿ ಮತ್ತು ನಡುವನಹಳ್ಳಿಯಲ್ಲಿ ಚಿರತೆ ದಾಳಿಗೆ 5 ಮಂದಿ ಗಾಯಗೊಂಡಿರುವ ಘಟನೆ ವರದಿಯಾಗಿದೆ.ಪ್ರಕರಣ 1) ಬುಧವಾರ ಮಧ್ಯಾಹ್ನ 2.30 ರ ಸುಮಾರಿನಲ್ಲಿ ನಡುವನಹಳ್ಳಿಯ ವನಜಾಕ್ಷಮ್ಮ (43) ಎಂಬುವವರು ತಮ್ಮ ತೋಟದಲ್ಲಿ ಕೃಷಿ ಕಾಯಕದಲ್ಲಿ ತೊಡಗಿರುವ ವೇಳೆ ಚಿರತೆ ಏಕಾಏಕಿ ದಾಳಿ ನಡೆಸಿ ಕೈ ಮತ್ತು ತೋಳನ್ನು ಬಲವಾಗಿ ಕಚ್ಚಿದೆ. ವನಜಾಕ್ಷಮ್ಮ ಕೂಗಿಕೊಂಡ ಕೂಡಲೇ ಅಕ್ಕಪಕ್ಕದ ತೋಟದಲ್ಲಿದ್ದ ರೈತಾಪಿಗಳು ಗಲಾಟೆ ಮಾಡಿದ ಕೂಡಲೇ ಚಿರತೆ ಅಲ್ಲಿಂದ ಕಾಲು ಕಿತ್ತಿದೆ. ಪ್ರಕರಣ 2) ಮೂರು ಗಂಟೆಯ ವೇಳೆಗೆ ಗೋಣಿತುಮಕೂರಿನ ಹುಚ್ಚಮ್ಮ (70) ಎಂಬುವವರು ತಮ್ಮ ತೋಟದ ಬಳಿ ಮೇಕೆಗಳನ್ನು ಮೇಯಿಸುತ್ತಿದ್ದ ವೇಳೆ ದಾಳಿ ಮಾಡಿದ ಚಿರತೆ ಹುಚ್ಚಮ್ಮರ ಕಿವಿ, ಮುಖವನ್ನು ಪರಚಿ ತೀವ್ರವಾಗಿ ಗಾಯ ಮಾಡಿದೆ. ಅಕ್ಕಪಕ್ಕದವರು ಬಂದ ವೇಳೆ ಚಿರತೆ ನಾಪತ್ತೆ ಆಗಿದೆ. ಪ್ರಕರಣ 3) ಗೋಣಿತುಮಕೂರಿನ ಹೊರವಲಯದಲ್ಲಿರುವ ಬೋರೇಗೌಡ (67) ಎಂಬುವವರ ಮನೆ ಬಳಿ ಬಂದ ಚಿರತೆ ಬೋರೇಗೌಡರ ಮೇಲೂ ದಾಳಿ ಮಾಡಿದೆ. ಅಲ್ಲದೇ ಅವರ ತಗಡಿನ ಶೆಡ್ ಒಳಗೆ ನುಗ್ಗಿದೆ. ಕೂಡಲೇ ಬೋರೇಗೌಡರು ಬಾಗಿಲು ಹಾಕಿದ್ದಾರೆ. ಚಿರತೆ ಸತತವಾಗಿ ದಾಳಿ ಮಾಡುತ್ತಿರುವ ಬಗ್ಗೆ ಮತ್ತು ಬೋರೇಗೌಡರ ಮನೆ ಬಳಿ ಬಂಧಿಯಾಗಿರುವ ಸುದ್ದಿ ಹರಡುತ್ತಿದ್ದಂತೆ ಮನೆ ಬಳಿ ಜನರು ಜಮಾಯಿಸಿದ್ದಾರೆ. ಆ ವೇಳೆಗೆ ಅರಣ್ಯ ಇಲಾಖಾ ಸಿಬ್ಬಂದಿ ಸಹ ದೌಡಾಯಿಸಿದ್ದರು. ಜನರ ಜಮಾವಣೆ ಮತ್ತು ಗಲಾಟೆ ಹೆಚ್ಚುತ್ತಿದ್ದಂತೆ ಗಾಬರಿಗೊಂಡ ಚಿರತೆ ತಗಡಿನ ಬಾಗಿಲನ್ನು ನೂಕಿ ಹೊರಬಂದು ನೂರಾರು ಜನರಿದ್ದ ಕಡೆಯೇ ಓಡಿ ಹೋಗಿದೆ. ಆ ವೇಳೆ ಅಲ್ಲಿದ್ದ ಸಣ್ಣ ನಿಂಗಯ್ಯ(50) ಎಂಬುವವರ ಮೇಲೆ ದಾಳಿ ಮಾಡಿದೆ. ಅವರ ಬೆನ್ನಿಗೆ ಕಚ್ಚಿ, ಉಗುರಿನಿಂದ ಗಾಯ ಮಾಡಿ ಪಲಾಯನ ಮಾಡಿದೆ. ಈ ವೇಳೆ ತಹಸೀಲ್ದಾರ್ ಕುಂಇ ಅಹಮದ್ ಹಾಗೂ ಅವರ ಸಿಬ್ಬಂದಿ ಸಹ ಹಾಜರಿದ್ದರು. ಎಲ್ಲರೂ ಚಿರತೆಯ ದಾಳಿಗೆ ಕಕ್ಕಾಬಿಕ್ಕಿಯಾದರು. ಈ ಘಟನೆ ಆದ ಕೆಲವೇ ನಿಮಿಷಗಳಲ್ಲಿ ಗೋಣಿತುಮಕೂರಿನಿಂದ ಕೆಲವೇ ದೂರವಿರುವ ದೇವಿಹಳ್ಳಿಯ ಹೊರವಲಯದಲ್ಲಿ ತಮ್ಮ ಮನೆಯ ಬಳಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ ಶೇಖರಯ್ಯ (50) ಎಂಬುವವರ ಮೇಲೆ ಎರಗಿ ಅವರ ಕಾಲನ್ನು ಬಲವಾಗಿ ಕಚ್ಚಿ ಗಾಯಗೊಳಿಸಿದೆ. ಅಲ್ಲದೇ ಅವರ ಮನೆಯೊಳಗೆ ಸೇರಿಕೊಂಡಿದೆ. ಕೂಡಲೇ ಜಾಗೃತರಾದ ಮನೆಯವರು ಚಿರತೆಯನ್ನು ಕೂಡಿ ಹಾಕಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಹುಚ್ಚಮ್ಮ, ವನಜಾಕ್ಷಮ್ಮ, ಬೋರೇಗೌಡ, ಮತ್ತು ಶೇಖರಯ್ಯನವರಿಗೆ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ. ಚಿರತೆ ದಾಳಿಯಿಂದ ಗಾಯಗೊಂಡಿರುವ ಗಾಯಾಳುಗಳ ಖರ್ಚನ್ನು ಅರಣ್ಯ ಇಲಾಖೆಯಿಂದ ಭರಿಸಲಾಗುವುದು. ಅಲ್ಲದೇ ಯಾರಿಗೂ ಪ್ರಾಣಾಪಾಯವಿಲ್ಲವೆಂದು ವೈದ್ಯರು ಹೇಳಿದ್ದಾರೆ ಎಂದು ಚಿಕ್ಕನಾಯಕನಹಳ್ಳಿ ವಲಯ ಅರಣ್ಯಾಧಿಕಾರಿ ಅಮಿತ್ ತಿಳಿಸಿದ್ದಾರೆ. ಜನರ ಮೇಲೆ ದಾಳಿ ಮಾಡಿರುವ ಚಿರತೆ ಐದಾರು ಮೇಕೆಗಳ ಮೇಲೂ ದಾಳಿ ಮಾಡಿದೆ. ಮರಿ ಚಿರತೆಗಳು ಸೇರಿದಂತೆ ಐದಾರು ಚಿರತೆಗಳು ಇದ್ದು. ಅರಣ್ಯಾಧಿಕಾರಿ ಎಲ್ಲವನ್ನೂ ಸೆರೆ ಹಿಡಿಯಬೇಕೆಂದು ಗೋಣಿತುಮಕೂರು ಗ್ರಾಮದ ನಂದೀಶ್ ಕುಮಾರ್, ಚಂದನ್ ಮತ್ತು ರಂಗಸ್ವಾಮಿ ಒತ್ತಾಯಿಸಿದ್ದಾರೆ. ಮೈಸೂರಿನಿಂದ ಅರವಳಿಕೆ ತಜ್ಞರು ಬರುತ್ತಿದ್ದು. ತಡರಾತ್ರಿವರೆಗೂ ಚಿರತೆ ಸೆರೆ ಕಾರ್ಯಚರಣೆ ನಡೆಯಲಿದೆ ಎಂದು ಅರಣ್ಯ ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಅರಣ್ಯಾಧಿಕಾರಿ ಶಶಿಧರ್ ,ಭರತ್ , ಅರಣ್ಯ ಇಲಾಖಾ ಸಿಬ್ಬಂದಿಗಳು ದೇವಿಹಳ್ಳಿಯ ಶೇಖರಯ್ಯನವರ ಮನೆ ಬಳಿ ಬೀಡುಬಿಟ್ಟಿದ್ದಾರೆ.