ತಹಸೀಲ್ದಾರ್‌ ಮುಂದೆಯೇ ವ್ಯಕ್ತಿ ಮೇಲೆ ಚಿರತೆ ದಾಳಿ!

KannadaprabhaNewsNetwork |  
Published : Jul 31, 2025, 12:46 AM IST
30 ಟಿವಿಕೆ 1 - ತುರುವೇಕೆರೆ ತಾಲ್ಲೂಕಿನಲ್ಲಿ ಚಿರತೆ ದಾಳಿಗೆ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಸಣ್ಣನಿಂಗಯ್ಯ | Kannada Prabha

ಸಾರಾಂಶ

ಹಲವು ದಿನಗಳಿಂದ ಆತಂಕ ಸೃಷ್ಟಿಸಿದ್ದ ಚಿರತೆವೊಂದು ಬುಧವಾರ ಮೂರು ಗ್ರಾಮಗಳ ಐವರ ಮೇಲೆ ದಾಳಿ ನಡೆಸಿದ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಹಲವು ದಿನಗಳಿಂದ ಆತಂಕ ಸೃಷ್ಟಿಸಿದ್ದ ಚಿರತೆವೊಂದು ಬುಧವಾರ ಮೂರು ಗ್ರಾಮಗಳ ಐವರ ಮೇಲೆ ದಾಳಿ ನಡೆಸಿದ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನಲ್ಲಿ ನಡೆದಿದೆ. ಹೀಗೆ ದಾಳಿ ಮಾಡುತ್ತಾ ತಗಡಿನ ಶೆಡ್‌ಗೆ ನುಗ್ಗಿದ ಚಿರತೆಯನ್ನು ಮನೆಯವರು ಕೂಡಿ ಹಾಕಿದ್ದರು. ಅದನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಬಂದಾಗ ತಹಸೀಲ್ದಾರ್‌ ಕೂಡ ಇದ್ದರು. ಈ ವೇಳೆ ಶೆಡ್‌ನ ಬಾಗಿಲನ್ನು ತಳ್ಳಿದ ಚಿರತೆಯು ತಹಸೀಲ್ದಾರ್‌ ಮುಂದೆಯೇ ಏಕಾಏಕಿ ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಿ ಪರಾರಿ ಆಗಿದೆ.

ಬುಧವಾರ ಗೋಣಿತುಮಕೂರು, ದೇವೀಹಳ್ಳಿ ಮತ್ತು ನಡುವನಹಳ್ಳಿಯಲ್ಲಿ ಚಿರತೆ ದಾಳಿಗೆ 5 ಮಂದಿಗೆ ಕಚ್ಚಿ ಗಾಯಗೊಳಿಸಿದೆ. ಐದಾರು ಮೇಕೆಗಳ ಮೇಲೂ ದಾಳಿ ಮಾಡಿದೆ. ಮೈಸೂರಿನಿಂದ ಅರವಳಿಕೆ ತಜ್ಞರು ಬರುತ್ತಿದ್ದು. ತಡರಾತ್ರಿವರೆಗೂ ಚಿರತೆ ಸೆರೆ ಕಾರ್ಯಚರಣೆ ನಡೆಯಲಿದೆ. ಸದ್ಯ ದೇವಿಹಳ್ಳಿಯ ಶೇಖರಯ್ಯ ಅವರ ಮನೆಯಲ್ಲಿ ಚಿರತೆಯನ್ನು ಕೂಡಿ ಹಾಕಿದ್ದು, ಜಿಲ್ಲಾ ಅರಣ್ಯಾಧಿಕಾರಿಗಳು ಅಲ್ಲಿಯೇ ಬೀಡುಬಿಟ್ಟಿದ್ದಾರೆ.

ಪ್ರಕರಣ 1:

ನಡುವನಹಳ್ಳಿಯ ವನಜಾಕ್ಷಮ್ಮ (43) ತಮ್ಮ ತೋಟದ ಕೃಷಿ ಕಾಯಕದಲ್ಲಿ ತೊಡಗಿದ್ದಾಗ ಮಧ್ಯಾಹ್ನ 2.30ಕ್ಕೆ ವೇಳೆಗೆ ಚಿರತೆ ಏಕಾಏಕಿ ದಾಳಿ ನಡೆಸಿ ಕೈ ಮತ್ತು ತೋಳನ್ನು ಕಚ್ಚಿದೆ. ವನಜಾಕ್ಷಮ್ಮ ಕೂಗಿಕೊಂಡ ಕೂಡಲೇ ಅಕ್ಕಪಕ್ಕದ ತೋಟದಲ್ಲಿದ್ದ ರೈತರು ಗಲಾಟೆ ಮಾಡಿದ್ದು, ಈ ಗದ್ದಲಕ್ಕೆ ಚಿರತೆ ಅಲ್ಲಿಂದ ಕಾಲು ಕಿತ್ತಿದೆ.

ಪ್ರಕರಣ 2:

ಮಧ್ಯಾಹ್ನ 3ರ ವೇಳೆಗೆ ಗೋಣಿ ತುಮಕೂರಿನ ತಮ್ಮ ತೋಟದ ಬಳಿ ಮೇಕೆಗಳನ್ನು ಮೇಯಿಸುತ್ತಿದ್ದ ಹುಚ್ಚಮ್ಮ (70) ಮೇಲೆ ಚಿರತೆ ದಾಳಿ ಮಾಡಿ ಕಿವಿ, ಮುಖವನ್ನು ಪರಚಿ ತೀವ್ರವಾಗಿ ಗಾಯ ಮಾಡಿದೆ. ಅಕ್ಕಪಕ್ಕದವರು ಬಂದ ಕೂಡಲೇ ನಾಪತ್ತೆಯಾಗಿದೆ.

ಪ್ರಕರಣ 3:

ಬಳಿಕ ಗೋಣಿ ತುಮಕೂರಿನ ಹೊರವಲಯದಲ್ಲಿರುವ ಬೋರೇಗೌಡ (67) ಮನೆ ಬಳಿ ಬಂದ ಚಿರತೆ ಅವರ ಮೇಲೂ ದಾಳಿ ಮಾಡಿ ಅವರ ತಗಡಿನ ಶೆಡ್‌ ಒಳಗೆ ನುಗ್ಗಿದೆ. ಬೋರೇಗೌಡರು ಬಾಗಿಲು ಹಾಕಿದ್ದಾರೆ. ಆ ವೇಳೆಗೆ ತಹಸೀಲ್ದಾರ್‌ ಅರಣ್ಯ ಇಲಾಖಾ ಸಿಬ್ಬಂದಿ ದೌಡಾಯಿಸಿದ್ದರು.

ಪ್ರಕರಣ 4:

ಜನರ ಜಮಾವಣೆ ಮತ್ತು ಗಲಾಟೆ ಹೆಚ್ಚುತ್ತಿದ್ದಂತೆ ಗಾಬರಿಗೊಂಡ ಚಿರತೆ ತಗಡಿನ ಬಾಗಿಲನ್ನು ನೂಕಿ ಹೊರಬಂದು ನೂರಾರು ಜನರಿದ್ದ ಕಡೆ ನುಗ್ಗಿ ಅಲ್ಲಿದ್ದ ಸಣ್ಣನಿಂಗಯ್ಯ (50) ಬೆನ್ನಿಗೆ ಕಚ್ಚಿ, ಉಗುರಿನಿಂದ ಗಾಯಗೊಳಿಸಿ ಪಲಾಯನ ಮಾಡಿದೆ. ಈ ವೇಳೆ ತಹಸೀಲ್ದಾರ್‌ ಕುಂಇ ಅಹಮದ್ ಹಾಜರಿದ್ದರು.

ಪ್ರಕರಣ 5:

ಬಳಿಕ ದೇವಿಹಳ್ಳಿಯ ಹೊರವಲಯದ ತಮ್ಮ ಮನೆಯ ಬಳಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ ಶೇಖರಯ್ಯ (50) ಮೇಲೆ ಎರಗಿ ಕಾಲನ್ನು ಕಚ್ಚಿ ಗಾಯಗೊಳಿಸಿ ಅವರ ಮನೆಯೊಳಗೆ ನುಗ್ಗಿದೆ. ಕೂಡಲೇ ಮನೆಯವರು ಚಿರತೆಯನ್ನು ಕೂಡಿ ಹಾಕಿದ್ದಾರೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ