ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಗ್ರಾಮದ ಪುಟ್ಟರಾಜು ಅವರ ಜಮೀನು ಬಳಿ ಅರಣ್ಯ ಇಲಾಖೆ ಇರಿಸಲಾಗಿದ್ದ ಬೋನಿನಲ್ಲಿ ಮಂಗಳವಾರ ರಾತ್ರಿ ಸುಮಾರು 5 ವರ್ಷದ ಗಂಡು ಚಿರತೆ ಸೆರೆಯಾಗಿದ್ದು, ಆತಂಕದಲ್ಲಿದ್ದ ರೈತರು, ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.
ಈ ವ್ಯಾಪ್ತಿಯಲ್ಲಿ ಸಾಕಷ್ಟು ಕಬ್ಬಿನಗದ್ದೆ, ಗುಡ್ಡ ಪ್ರದೇಶವಿದ್ದು, ಸುತ್ತಮುತ್ತಲ ಪ್ರದೇಶದಲ್ಲಿ ಚಿರತೆ ಆಗಿಂದಾಗ್ಗೆ ಗೋಚರಿಸಿಕೊಳ್ಳುತ್ತಿತ್ತು. ರೈತರ ಜಾನುವಾರು, ಕುರಿ, ಮೇಕೆ, ಕೋಳಿ, ಸಾಕು ನಾಯಿಗಳ ಮೇಲೆ ದಾಳಿ ಮಾಡಿಕೊಂದು ತಿಂದು ಹಾಕಲಾಗಿತ್ತು.ರೈತರ ಕೊಟ್ಟಿಗೆಗಳಿಗೆ ನುಗ್ಗಿ ಕಟ್ಟಿ ಹಾಕಲಾಗುತ್ತಿದ್ದ ಜಾನುವಾರುಗಳನ್ನು ಹೊತ್ತುಕೊಂಡು ಹೋಗಿ ತಿಂದು ಹಾಕುತ್ತಿತ್ತು. ಚಿರತೆ ಉಪಟಳಕ್ಕೆ ರೋಸಿ ಹೋಗಿದ್ದ ರೈತಾಪಿ ಜನತೆ ತಾಲೂಕು ವಲಯ ಅರಣ್ಯಇಲಾಖೆಯವರಿಗೆ ಚಿರತೆ ಸೆರೆ ಹಿಡಿಯುವಂತೆ ಮನವಿ ಮಾಡಲಾಗಿತ್ತು.
ಮಂಗಳವಾರ ರಾತ್ರಿ ಆಹಾರ ಹುಡುಕುತ್ತ ಬಂದ ಚಿರತೆ ಬೋನಿನಲ್ಲಿದ್ದ ನಾಯಿ ತಿನ್ನಲು ನುಗ್ಗಿ ಬೋನಿನಲ್ಲಿ ಬಂಧಿಯಾಗಿದೆ.
ಚಿರತೆ ಆರೋಗ್ಯತಪಾಸಣೆ ಮಾಡಿ ಮೇಲಾಧಿಕಾರಿಗಳ ಆದೇಶದಂತೆ ಬಂಡೀಪುರ ಅಥವಾ ನಾಗರಹೊಳೆಯಂತಹ ಸೂಕ್ತವಾದ ರಕ್ಷಿತಅಭಯಾರಣ್ಯಕ್ಕೆ ಚಿರತೆ ಬಿಡಲಾಗುವುದು ಎಂದು ತಾಲೂಕು ವಲಯ ಅರಣ್ಯಅಧಿಕಾರಿ ಎಂ.ವಿ. ಅನಿತಾ ತಿಳಿಸಿದರು.
ಚಿರತೆ ದಾಳಿಗೆ ಹಸು ಬಲಿ
ಗ್ರಾಮದ ಕಪಿನಿಗೌಡರಿಗೆ ಸೇರಿದ ಹಸು ಬಲಿಯಾಗಿದ್ದು, ಇದರಿಂದ ಸಾವಿರಾರು ನಷ್ಟ ಉಂಟಾಗಿದೆ. ಕಪಿನಿಗೌಡರು ಜಮೀನಿನಲ್ಲಿ ಮೇಯಲು ಬಿಟ್ಟಿದ್ದ ವೇಳೆ ದಾಳಿ ಮಾಡಿದ ಚಿರತೆ ಹಸುವಿನ ಅರ್ಧ ಭಾಗದಷ್ಟು ದೇಹ ತಿಂದಿದೆ. ಚಿರತೆ ದಾಳಿಯಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಆದರೆ, ಚಿರತೆ ಹಿಡಿಯಲು ಬೋನ್ ಇಡದೆ ವಾಪಸಾಗಿರುವುದರಿಂದ ಗ್ರಾಮಸ್ಥರು ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.