ಬ್ಯಾಡಗಿ: ಅಪರಿಚಿತ ವಾಹನಕ್ಕೆ ಸಿಲುಕಿ ಚಿರತೆಯೊಂದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲೂಕಿನ ಮೋಟೆಬೆನ್ನೂರ ಗ್ರಾಮದ ಕೋಟೆಗುಡ್ಡದ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಶುಕ್ರವಾರ ಬೆಳಗಿನ ಜಾವ ನಡೆದಿದೆ.
ಚಿರತೆ ಸಾವಿನ ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಸೇರಿದಂತೆ ಪಿಡಿಓ ಮಲ್ಲೇಶ ಮೋಟೆನವರ ಸ್ಥಳ ಪರಿಶೀಲನೆ ನಡೆಸಿದರು.
ಸುಮಾರು 2 ವರ್ಷದ ಹೆಣ್ಣು ಚಿರತೆಯೊಂದು ಸಾವನ್ನಪ್ಪಿದ್ದು, 2 ಅಡಿ ಎತ್ತರ, 5.4 ಅಡಿ ಉದ್ದವಿರುವುದಾಗಿ ಅರಣ್ಯಾಧಿಕಾರಿ ಲೋಕೇಶ ಮಾಹಿತಿ ನೀಡಿದರು. ಪಶು ವೈದ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸ್ಥಳ ಮಹಜರು ನಡೆಸಿ ಚಿರತೆಯ ಶವ ದಫನ ಮಾಡಲಾಯಿತು.