ಕೃಷಿ ಜಮೀನುಗಳಲ್ಲಿ ಚಿರತೆ, ರೈತರಲ್ಲಿ ಆತಂಕ

KannadaprabhaNewsNetwork |  
Published : Nov 06, 2025, 02:15 AM IST
ಫೋಟೋ : 5ಎಚ್‌ಎನ್‌ಎಲ್2 | Kannada Prabha

ಸಾರಾಂಶ

ಹಾನಗಲ್ಲ ತಾಲೂಕಿನ ಕೃಷಿ ಭೂಮಿಯಲ್ಲಿ ಸುತ್ತಾಡುತ್ತಿರುವ ಚಿರತೆಯನ್ನು ಬೋನಿಗೆ ಕೆಡವಲು ಅರಣ್ಯ ಇಲಾಖೆ ಹರಸಾಹಸ ಮಾಡುತ್ತಿದೆ, ಚಿರತೆ ಬೋನಿಗೆ ಬೀಳುತ್ತಿಲ್ಲ. ಚಿರತೆ ಭಯದಿಂದ ಕೃಷಿ ಚಟುವಟಿಕೆಗೆ ಅಡ್ಡಿಯಾಗಿದೆ.

ಹಾನಗಲ್ಲ: ತಾಲೂಕಿನ ಕೃಷಿ ಭೂಮಿಯಲ್ಲಿ ಸುತ್ತಾಡುತ್ತಿರುವ ಚಿರತೆಯನ್ನು ಬೋನಿಗೆ ಕೆಡವಲು ಅರಣ್ಯ ಇಲಾಖೆ ಹರಸಾಹಸ ಮಾಡುತ್ತಿದೆ, ಚಿರತೆ ಬೋನಿಗೆ ಬೀಳುತ್ತಿಲ್ಲ. ರೈತರ ಆತಂಕಕ್ಕೆ ಪರಿಹಾರ ಸಿಗುತ್ತಿಲ್ಲ.

ಹಾನಗಲ್ಲ ತಾಲೂಕಿನ ಬಸಾಪುರ, ಬೆಳವತ್ತಿ, ಬಾದಮಗಟ್ಟಿ, ಗುಂಡೂರು, ಬೆಳಗಾಲಪೇಟೆ ಗ್ರಾಮಗಳ ಭಾಗದ ಕೃಷಿ ಭೂಮಿಯಲ್ಲಿ ಸುತ್ತಾಡುತ್ತಿರುವ ಚಿರತೆ ರೈತರ ಕಣ್ಣಿಗೆ ಕಾಣಿಸುತ್ತಿದೆ. ಭಯಗೊಂಡು ರೈತರು ಜಮೀನ ತೊರೆದು ಊರು ಸೇರುತ್ತಿದ್ದಾರೆ. ಕೃಷಿ ಭೂಮಿಯಲ್ಲಿ ಬಂದ ಬೆಳೆಯನ್ನು ಕಟಾವು ಮಾಡಲು ಕೂಡ ರೈತರು ಭಯಗೊಂಡಿದ್ದಾರೆ. ಚಿರತೆ ಭಯದಿಂದ ಕೃಷಿ ಚಟುವಟಿಕೆಗೆ ಅಡ್ಡಿಯಾಗಿದೆ. ಎರಡು ತಿಂಗಳಿನಿಂದ ಈ ಸಮಸ್ಯೆಯಿಂದ ಗೋಳಾಡುತ್ತಿರುವ ರೈತರ ಚಿರತೆಯ ಭಯ ಹೋಗಲಾಡಿಸಲು ಅರಣ್ಯ ಇಲಾಖೆ ಯತ್ನಿಸುತ್ತಿದೆ. ಚಿರತೆ ಸೆರೆ ಹಿಡಿಯಲು ಬೋನುಗಳನ್ನು ಅಳವಡಿಸಿದೆ. ಆದರೆ ಚಿರತೆ ಬೋನಿಗೆ ಬೀಳುತ್ತಿಲ್ಲ. ಆತಂಕ ದೂರವಾಗುತ್ತಿಲ್ಲ. ತಜ್ಞ ವಿಶೇಷ ಅರಣ್ಯ ಇಲಾಖೆಯ ಪ್ರಾಣಿಗಳನ್ನು ಹಿಡಿಯುವ ತಂಡದಿಂದ ಈ ಚಿರತೆ ಹಿಡಿದು ರೈತರ ಆತಂಕ ದೂರ ಮಾಡಬೇಕು ಎಂಬುದು ರೈತರ ಒತ್ತಾಸೆಯಾಗಿದೆ.

ದಿನಕ್ಕೆ 30 ಕಿಮೀ ಸುತ್ತ ಚಿರತೆ ಓಡಾಡುತ್ತದೆ ಎಂಬ ಮಾಹಿತಿ ಇದೆ. ಊರ ಹತ್ತಿರದ, ಹೊಲ ಗದ್ದೆಗಳಲ್ಲಿರುವ ನಾಯಿಗಳನ್ನು ಹಿಡಿದು ತಿನ್ನುತ್ತಿದೆ. ನಾಯಿಯೊಂದಿಗೆ ಚಿಕ್ಕ ಪ್ರಾಣಿಗಳನ್ನು ಹಿಡಿದು ತಿನ್ನುತ್ತಿದೆ. ಅಲ್ಲದೆ ಕಾಡಿನಿಂದ ನಾಡಿಗೆ ಬರುತ್ತಿರುವ ಚಿರತೆಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ ಎನ್ನಲಾಗಿದೆ.

ಆನೆಗಳು: ಪ್ರತಿವರ್ಷ ದೀಪಾವಳಿ ಹೊತ್ತಿಗೆ ಹಾನಗಲ್ಲ ತಾಲೂಕಿನಲ್ಲಿ ಬಂದು ಬೀಡು ಬಿಡುತ್ತಿದ್ದ ಆನೆಗಳು ಈ ವರ್ಷ ಇನ್ನು ಬಂದಿಲ್ಲ. ಈಗಾಗಲೇ ಹಾನಗಲ್ಲ ತಾಲೂಕಿನ ಗಡಿ ಭಾಗದಲ್ಲಿ ಆನೆಗಳು ಕಾಣಿಸಿಕೊಂಡಿದ್ದು, ಹಾನಗಲ್ಲ ತಾಲೂಕಿಗೂ ಪ್ರವೇಶಿಸಬಹುದೆಂದು ನಿರೀಕ್ಷಿಸಲಾಗಿದೆ. ಆನೆಗಳು ಬಂದರೆ ಅವುಗಳನ್ನು ನಿಯಂತ್ರಿಸಿ ಕಾಡಿಗಟ್ಟುವ ಸಿದ್ಧತೆಗೆ ಅರಣ್ಯ ಇಲಾಖೆ ಮುಂದಾಗಿದೆ.

ಕಾಡಿಗೆ ಮರಳಿಸುವ ಯತ್ನ: ಚಿರತೆ ಓಡಾಡುತ್ತಿರುವ ಬಗ್ಗೆ ಮಾಹಿತಿ ಇದೆ. ಚಿರತೆ ಹಿಡಿಯಲು ಎರಡು ಬೋನುಗಳನ್ನು ಇಡಲಾಗಿದೆ. ನಮ್ಮ ಸಿಬ್ಬಂದಿ ದಿನ ನಿತ್ಯ ಚಿರತೆಯ ಚಲನವಲನಗಳನ್ನು ಗಮನಿಸುತ್ತಿದ್ದಾರೆ. ಆದರೆ ಚಿರತೆ ಬೋನಿಗೆ ಬೀಳುತ್ತಿಲ್ಲ. ಒಂದಕ್ಕಿಂತ ಹೆಚ್ಚು ಚಿರತೆಗಳಿವೆ ಎಂಬ ಮಾಹಿತಿಯೂ ಇದೆ. ಇದೆಲ್ಲವನ್ನೂ ಇಲಾಖೆ ಗಮನಿಸಿ ಚಿರತೆ ಹಿಡಿಯುವ ಅಥವಾ ಕಾಡಿಗೆ ಮರಳಿಸುವ ಪ್ರಯತ್ನ ನಡೆದಿದೆ ಎಂದು ಹಾನಗಲ್ಲ ವಲಯ ಅರಣ್ಯಾಧಿಕಾರಿ ಗಣೇಶಪ್ಪ ಶೆಟ್ಟರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ದ್ವೇಷ ಮಸೂದೆಯಿಂದ ಭಿನ್ನ ದನಿ ದಮನ ಆಗಲ್ಲ ''
3 ವರ್ಷ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ: ಆಕ್ರೋಶ