ಮಾಗಡಿ: ತಾಲೂಕಿನ ಕುರುಪಾಳ್ಯ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ಸಾಕು ಪ್ರಾಣಿಗಳ ಮೇಲೆ ಚಿರತೆ ದಾಳಿ ಮಾಡುತ್ತಿದ್ದು ಕೂಡಲೇ ಚಿರತೆ ಸೆರೆಗೆ ಅರಣ್ಯ ಇಲಾಖೆ ಮುಂದಾಗಬೇಕು ಎಂದು ತಾಪಂ ಮಾಜಿ ಅಧ್ಯಕ್ಷ ಚಿಕ್ಕಣ್ಣ ಒತ್ತಾಯಿಸಿದರು
ಮಾಗಡಿ: ತಾಲೂಕಿನ ಕುರುಪಾಳ್ಯ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ಸಾಕು ಪ್ರಾಣಿಗಳ ಮೇಲೆ ಚಿರತೆ ದಾಳಿ ಮಾಡುತ್ತಿದ್ದು ಕೂಡಲೇ ಚಿರತೆ ಸೆರೆಗೆ ಅರಣ್ಯ ಇಲಾಖೆ ಮುಂದಾಗಬೇಕು ಎಂದು ತಾಪಂ ಮಾಜಿ ಅಧ್ಯಕ್ಷ ಚಿಕ್ಕಣ್ಣ ಒತ್ತಾಯಿಸಿದರು.
ಚಿರತೆ ದಾಳಿ ಮಾಡಿದ ಸ್ಥಳಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶನಿವಾರ ಬೆಳಗಿನ ಜಾವ ಕುರುಪಾಳ್ಯ ಗ್ರಾಮದ ರೈತರೊಬ್ಬರ ಶೆಡ್ಡಿನಲ್ಲಿದ್ದ ಎರಡು ವರ್ಷದ ಕರುವಿನ ಮೇಲೆ ಏಕಾಏಕಿ ದಾಳಿ ನಡೆಸಿದ ಚಿರತೆ, ಅದನ್ನು ಹೊಲಕ್ಕೆ ಎಳೆದೊಯ್ದು ಕೊಂದು ತಿಂದಿದೆ. ಜೊತೆಗೆ ಹಲವು ದಿನಗಳಿಂದಲೂ ಗ್ರಾಮಕ್ಕೆ ಪದೇಪದೇ ಚಿರತೆ ದಾಳಿ ಮಾಡುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಉಡಾಫೆ ಉತ್ತರ ನೀಡುತ್ತಿದ್ದಾರೆ. ಈಗ ಸಾಕು ಪ್ರಾಣಿಗಳ ಮೇಲೆ ಚಿರತೆ ದಾಳಿ ಮಾಡುತ್ತಿದ್ದು ಮನುಷ್ಯರ ಮೇಲೆ ದಾಳಿ ಮಾಡುವುದಿಲ್ಲವೇ ಎಂದು ಗ್ರಾಮಸ್ಥರು ಆತಂಕದಲ್ಲಿ ಓಡಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಲ್ಲು ಕ್ರಷರ್ ಶಬ್ದಕ್ಕೆ ಬೆಚ್ಚಿದ ವನ್ಯಜೀವಿಗಳು:
ಸಮೀಪದ ಬೆಟ್ಟಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಕಲ್ಲು ಕ್ರಷರ್ ಸಿಡಿತ ಹಾಗೂ ಭಾರೀ ಶಬ್ದದಿಂದಾಗಿ ವನ್ಯಜೀವಿಗಳು ಕಂಗಾಲಾಗಿ ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿವೆ. ಹಗಲು-ರಾತ್ರಿ ಎನ್ನದೆ ಚಿರತೆಗಳು ಲಗ್ಗೆಯಿಡುತ್ತಿದ್ದು, ನಾಯಿಗಳು ಮತ್ತು ಜಾನುವಾರುಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿವೆ. ಕುರುಪಾಳ್ಯ ಮಾತ್ರವಲ್ಲದೆ ಹನುಮಾಪುರ, ಹುಜಗಲ್, ಮಾಯನಾಯಕನಹಳ್ಳಿ, ಚನ್ನಮ್ಮನಪಾಳ್ಯ, ಬೋಡಗೂರುಪಾಳ್ಯ ಹಾಗೂ ತೈಗೋಡು ಸೇರಿದಂತೆ ನೆರೆಹೊರೆಯ ಗ್ರಾಮಗಳಲ್ಲೂ ಚಿರತೆ ಸಂಚಾರ ಹೆಚ್ಚಾಗಿದ್ದು, ಗ್ರಾಮಸ್ಥರು ಜೀವಭಯದಲ್ಲಿ ದಿನ ಕಳೆಯುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ದೈನಂದಿನ ಕಾಯಕಕ್ಕೆ ತೊಂದರೆ:
ಈ ಭಾಗದ ರೈತರು ಬೆಳಗಿನ ಜಾವ 2 ರಿಂದ 4 ಗಂಟೆಯ ಸುಮಾರಿಗೆ ಮಾರುಕಟ್ಟೆಗೆ ತರಕಾರಿ ಸಾಗಿಸಲು, ಹಾಲು ಕರೆಯಲು ಮತ್ತು ಡೈರಿಗೆ ಹಾಲು ಹಾಕಲು ತೆರಳಲು ಗ್ರಾಮಸ್ಥರು ಚಿರತೆ ಹಾವಳಿಯಿಂದ ಹೆದರುವಂತಾಗಿದೆ.
ಹೊಲಗಳಲ್ಲಿ ಗಿಡಗಂಟಿಗಳು ಬೆಳೆದಿರುವುದರಿಂದ ಸಂಜೆ ಮತ್ತು ಬೆಳಗಿನ ವೇಳೆ ಮಕ್ಕಳು ಹಾಗೂ ರೈತರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ.
ಅರಣ್ಯ ಇಲಾಖೆ ಹಾಗೂ ತಾಲೂಕು ಆಡಳಿತ ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಗ್ರಾಮದಲ್ಲಿ ಬೋನು ಇರಿಸಿ ಚಿರತೆಯನ್ನು ಸೆರೆ ಹಿಡಿಯಬೇಕು. ಜಾನುವಾರು ಕಳೆದುಕೊಂಡ ಬಡ ರೈತರಿಗೆ ತಕ್ಷಣ ಸೂಕ್ತ ಪರಿಹಾರ ನೀಡಬೇಕು. ತಪ್ಪಿದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರೊಂದಿಗೆ ಸೇರಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಗ್ರಾಮ ಮುಖಂಡರು ಹಾಗೂ ರೈತರು ಎಚ್ಚರಿಕೆ ನೀಡಿದ್ದಾರೆ.
ಈ ವೇಳೆ ಗ್ರಾಮಸ್ಥರಾದ ಮುಖಂಡರಾದ ಶ್ರೀನಿವಾಸ್, ರಂಗಸ್ವಾಮಯ್ಯ, ಕುಮಾರ್, ಯುವರಾಜ್, ಲಕ್ಷ್ಮಮ್ಮ, ರೋಹಿತ್, ಲಕ್ಷ್ಮಣ್, ಸುಶೀಲಮ್ಮ, ನಾರಾಯಣಪ್ಪ, ರಂಗನಾಥ್, ಕಾಳಯ್ಯ ಮತ್ತಿತರರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.