ಕಲ್ಲೂರು ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ, ಆತಂಕದಲ್ಲಿ ಗ್ರಾಮಸ್ಥರು

KannadaprabhaNewsNetwork | Published : Jan 8, 2025 12:15 AM

ಸಾರಾಂಶ

ಸುದ್ದಿ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಕ್ಕೆ ಆಗಮಿಸಿ ಡ್ರೋಣ ಕ್ಯಾಮೇರಾದಿಂದ ಕಾರ್ಯಾಚರಣೆ ನಡೆಸಿದರು

ಮುಳಗುಂದ: ಸಮೀಪದ ಕಲ್ಲೂರು ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ಮಾಡಳ್ಳಿ ರಸ್ತೆಯ ತೆಗ್ಗಿನ ಹಳ್ಳದ ಪಕ್ಕ ರಮೇಶ ಬೆನ್ನೂರ ಅವರ ಹೊಲದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಹೊಲಕ್ಕೆ ತೆರಳಿದ ಕೃಷಿ ಕಾರ್ಮಿಕರು ಚಿರತೆ ಕಂಡು ಕೃಷಿ ಉಪಕರಣ ಅಲ್ಲಿಯೇ ಬೀಸಾಕಿ ವಾಪಸ್‌ ಮನೆಗೆ ಓಡಿ ಬಂದ ಘಟನೆ ನಡೆದಿದೆ.

ಗ್ರಾಮದ ರಮೇಶ ಅವರ ಹೊಲದ ಪಕ್ಕದಲ್ಲಿ ಹಳ್ಳವಿದ್ದು ಅಲ್ಲಿಂದ ಚಿರತೆ ಮೇಲೆ ಬಂದಿದ್ದು, ಹೊಲದಲ್ಲಿ ಮೆಣಸಿನ ಹಣ್ಣು ಬಿಡಿಸಲು ಬಂದ ಹೆಣ್ಣು ಮಕ್ಕಳು ಭಯಭೀತರಾಗಿ ಅಲ್ಲಿಂದ ಜೀವ ಉಳಿದರೆ ಸಾಕು ಎಂದು ಸಾಮಾನು ಅಲ್ಲಿಯೇ ಬಿಟ್ಟು ಓಡಿ ಬಂದಿದ್ದಾರೆ. ಪಕ್ಕದ ಹೊಲದಲ್ಲಿ ಕಡಲೆ ಬೆಳೆಗೆ ಔಷಧ ಸಿಂಪಡಿಸಲು ಹೋದ ಒಬ್ಬ ಯುವಕ ಚಿರತೆ ನೋಡಿ ಓಡಿ ಬರಲು ಹೋಗಿ ಕಾಲಿಗೆ ಪೆಟ್ಟಾಗಿದೆ.

ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಸೇರಿ ಆ ನಂತರ ಹೊಲದ ಸುತ್ತಲು ಚಿರತೆ ನೋಡಲು ಮುಂದಾದರೂ ಚಿರತೆ ಕಾಣಲಿಲ್ಲ. ತಕ್ಷಣ ಗ್ರಾಮಸ್ಥರು ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದಾರೆ.

ಬಾಬು ಯತ್ನಳ್ಳಿ, ಮಹಾಂತೇಶ ರಣತೂರ, ಫಕೀರಪ್ಪ ಗಾಜಪ್ಪನವರ, ಯಲ್ಲಪ್ಪ ಗಾಜಪ್ಪನವರ, ನೀಲವ್ವ ಬೆನ್ನೂರ ಇತರರು ಹೊಲದಲ್ಲಿ ಕೆಲಸ ಮಾಡುವಾಗ ಚಿರತೆ ನೋಡಿದ್ದಾರೆ ಎಂದು ಗೊತ್ತಾಗಿದೆ.

ಡ್ರೋಣ ಕ್ಯಾಮೇರಾ ಮೂಲಕ ಕಾರ್ಯಾಚರಣೆ: ಸುದ್ದಿ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಕ್ಕೆ ಆಗಮಿಸಿ ಡ್ರೋಣ ಕ್ಯಾಮೇರಾದಿಂದ ಕಾರ್ಯಾಚರಣೆ ನಡೆಸಿದರು. ಆದರೆ ಯಾವುದೇ ರೀತಿ ಚಿರತೆಯ ಹೆಜ್ಜೆ ಗುರುತು ಸುಳಿವು ಸಿಗದೇ ವಾಪಸ್ಸಾಗಿದ್ದಾರೆ ಎನ್ನಲಾಗಿದೆ.

ಆತಂಕದಲ್ಲಿ ಗ್ರಾಮಸ್ಥರು: ದಿಢೀರ್‌ ಚಿರತೆ ಪ್ರತ್ಯಕ್ಷವಾಗಿದ್ದರಿಂದ ಕೃಷಿ ಕಾರ್ಮಿಕರು ಹೊಲಕ್ಕೆ ಕೆಲಸಕ್ಕೆ ತೆರಳಲು ಹಿಂದೇಟು ಹಾಕುವಂತಾಗಿದೆ. ಈಗ ಸುಗ್ಗಿ ಕಾಲವಾಗಿದ್ದರಿಂದ ರಾತ್ರಿ ಸಮಯದಲ್ಲಿ ಹೊಲದಲ್ಲಿಯೇ ಇರಬೇಕಾಗುತ್ತದೆ. ಬೆಳಗಿನ ಜಾವ ಕಡಲೆ ಕೀಳಲು ಹೊಲಕ್ಕೆ ಹೋಗಬೇಕಾಗುತ್ತದೆ. ಆದರೆ ಚಿರತೆ ಪ್ರತ್ಯಕ್ಷ ಸುದ್ದಿ ತಿಳಿದ ಕಾರ್ಮಿಕರು ಹೊಲಕ್ಕೆ ಹೋಗಲು ಹಿಂದೇಟು ಹಾಕುವದರಿಂದ ಮಾಲೀಕರು ಆತಂಕಕ್ಕೊಳಗಾಗಿದ್ದಾರೆ.

ನಾವು ಕಡಲೆ ಬೆಳೆಗೆ ಔಷಧ ಸಿಂಪಡಿಸಲು ಹೋಗಿದ್ದೇವು. ಚಿರತೆ ಮುಂದಿನ ಹೊಲದಲ್ಲಿ ಹಾಯ್ದು ಹೋಗಿದ್ದನ್ನು ನೋಡಿ ಭಯಭೀತರಾಗಿ ಸಾಮಾನು ಹಾಗೂ ಟ್ರಾಕ್ಟರ ಸಮೇತ ಬಿಟ್ಟು ಓಡಿ ಬಂದೆವು. ಬರುವಾಗ ನಮ್ಮ ಜೊತೆಗಿದ್ದ ಒಬ್ಬ ಹುಡುಗನ ಕಾಲಿಗೆ ಪೆಟ್ಟಾಗಿದೆ ಎಂದು ಪ್ರತ್ಯಕ್ಷದರ್ಶಿ ಬಾಬು ಯತ್ನಳ್ಳಿ ತಿಳಿಸಿದರು.

ಡ್ರೋಣ್ ಕ್ಯಾಮೇರಾ ಮೂಲಕ ನಮ್ಮ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಚಿರತೆ ಇಲ್ಲಿ ಹಾಯ್ದು ಹೋದ ಬಗ್ಗೆ ಯಾವುದೇ ಹೆಜ್ಜೆ ಗುರುತು ಹಾಗೂ ಚಿರತೆಯ ಸುಳಿವು ಸಿಕ್ಕಿಲ್ಲ. ಇದರ ಬಗ್ಗೆ ಜನತೆ ಆತಂಕ ಪಡುವ ಅವಶ್ಯಕತೆಯಿಲ್ಲ ಎಂದು ಗದಗ ಆರ್.ಎಫ್.ಓ ವಿರೇಂದ್ರ ಮರಿಬಸಣ್ಣವರ ತಿಳಿಸಿದ್ದಾರೆ.

Share this article