ಕನ್ನಡಪ್ರಭ ವಾರ್ತೆ ಹನೂರುತಾಲೂಕಿನ ಗಂಗನ ದೊಡ್ಡಿಯಲ್ಲಿ ಚಿರತೆ ಉಪಟಳ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ.
ಚಿರತೆ ಸೆರೆಗೆ ಒತ್ತಾಯ:
ಗಂಗನದೊಡ್ಡಿ ಬಸಪ್ಪನ ದೊಡ್ಡಿ ಹಾಗೂ ಸುತ್ತಮುತ್ತಲಿನ ಉಡುತೊರೆ ಹಳ್ಳ ಅಂಚಿನಲ್ಲೇ ಬರುವ ರೈತರ ಜಮೀನುಗಳಲ್ಲಿ ಕಳೆದ ಹಲವಾರು ದಿನಗಳಿಂದ ಕಾಣಿಸಿಕೊಳ್ಳುತ್ತಿರುವ ಚಿರತೆ ರೈತರ ಸಾಕು ಪ್ರಾಣಿಗಳನ್ನು ಕೊಂದು ತಿನ್ನುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ರೈತರು ಸೆರೆ ಹಿಡಿಯಲು ಅರಣ್ಯ ಅಧಿಕಾರಿಗಳನ್ನು ಒತ್ತಾಯಿಸಿದರು.ಅರಣ್ಯ ಅಧಿಕಾರಿ ಭೇಟಿ, ಸೆರೆಗೆ ಭರವಸೆ:ಗಂಗನ ದೊಡ್ಡಿ ರೈತರ ಜಮೀನಿನಲ್ಲಿ ಕುರಿ ಕೊಂದು ಉಪಟಳ ನೀಡಿದ್ದ ಚಿರತೆ ಹಿಡಿಯಲು ಬೋನ್ ಸಹ ಇಡಲಾಗಿತ್ತು. ಚಿರತೆ ಬೋನಿಗೆ ಬೀಳದೆ ರೈತರ ಜಮೀನುಗಳಲ್ಲಿ ಅಡಗಿ ಕುಳಿತು ಸಾಕು ಪ್ರಾಣಿಗಳನ್ನು ಕೊಂದು ತಿನ್ನುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ವಲಯ ಅರಣ್ಯ ಅಧಿಕಾರಿ ಪ್ರವೀಣ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದು, ಹೆಚ್ಚಿನ ಸಿಬ್ಬಂದಿ ನೇಮಕ ಮಾಡಿ ರಾತ್ರಿ ಮತ್ತು ಹಗಲಿನಲ್ಲಿ ಗಸ್ತು ಮಾಡಲು ಸಿಬ್ಬಂದಿಗೆ ಸೂಚನೆ ನೀಡಿದರು.
ಡ್ರೋನ್ ಬಳಕೆ: ಈ ಭಾಗದಲ್ಲಿ ಚಿರತೆ ರೈತರಿಗೆ ಕಾಣಿಸಿಕೊಂಡರೆ ಅದರ ಚಲನ ವಲನ ಪರಿಶೀಲಿಸಿ ಡ್ರೋನ್ ಕ್ಯಾಮೆರಾ ಬಳಸುವ ಮೂಲಕ ಚಿರತೆ ಸೆರೆ ಹಿಡಿಯಲು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ರೈತರು ಇದಕ್ಕೆ ಪೂರಕವಾಗಿ ಅರಣ್ಯ ಅಧಿಕಾರಿಗಳಿಗೆ ಸ್ಪಂದಿಸುವ ಮೂಲಕ ಉಪಟಳ ನೀಡುತ್ತಿರುವ ಚಿರತೆ ಸೆರೆ ಹಿಡಿಯಲು ಸಂಪೂರ್ಣ ಸಹಕಾರ ನೀಡಬೇಕು ಎಂದು ತಿಳಿಸಿದರು.