ಮಾಗಡಿ: ಅರಣ್ಯ, ದಟ್ಟಡವಿಗಳಲ್ಲಿ ವಾಸ ಮಾಡುವ ಚಿರತೆಗಳು ಮರೆಯಲ್ಲಿ ನಿಂತು ಬೇಟೆಯಾಡುವ ಸ್ವಭಾವ ಹೊಂದಿದ್ದು, ಮನುಷ್ಯರ ಮೇಲೆ ದಾಳಿ ಮಾಡುವುದಿ ಕಡಿಮೆ ಎಂದು ಪ್ರಾಣಿಪ್ರಿಯ ಸಂಜಯ್ ಗುಬ್ಬಿ ಹೇಳಿದರು.
ತಾಲೂಕಿನ ಸಾವನದುರ್ಗದ ಕೆಂಪೇಗೌಡ ವನಧಾಮದಲ್ಲಿ ಅಂತಾರಾಷ್ಟ್ರೀಯ ಚಿರತೆ ದಿನದ ಅಂಗವಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಚಿರತೆಗಳು ದೊಡ್ಡದೊಡ್ಡ ಪ್ರಾಣಿಗಳನ್ನು ಬೇಟೆ ಆಡುವುದಿಲ್ಲ. 20ರಿಂದ 30 ಕೆಜಿ ತೂಕವಿರುವ ಪ್ರಾಣಿಗಳ ಮೇಲೆ ಮಾತ್ರ ದಾಳಿ ಮಾಡುತ್ತದೆ. ಇತರ ಪ್ರಾಣಿಗಳಿಗೆ ದಿನಕ್ಕೆ 200 ಕೆಜಿವರೆಗೂ ಆಹಾರ ಬೇಕಾದರೆ ಚಿರತೆಗಳಿಗೆ ಕೇವಲ ಮೂರರಿಂದ ನಾಲ್ಕು ಕೆಜಿ ಆಹಾರ ಸಿಕ್ಕರೆ ಸಾಕು. ಮನುಷ್ಯರ ಮೇಲೆ ದಾಳಿ ಮಾಡುವುದು ತುಂಬಾ ಕಡಿಮೆ. ಒಂದು ವೇಳೆ ಬೇಟೆ ಆಡುವಾಗ ಪ್ರಾಣಿಗಳು ಜೊತೆ ಮನುಷ್ಯರಿದ್ದಾಗ ಭಯಕ್ಕೆ ಹೆದರಿ ಮನುಷ್ಯರ ಮೇಲೆ ದಾಳಿ ಮಾಡುತ್ತವೆ ಎಂದು ಹೇಳಿದರು.2018ರ ಬಳಿಕ ತುಮಕೂರು ಮತ್ತು ರಾಮನಗರ ಭಾಗದಲ್ಲಿ ಚಿರತೆ, ಆನೆಗಳ ದಾಳಿ ಹೆಚ್ಚಾಗಿದೆ. ಚಿರತೆಗಳು ಸೆರೆ ಸಿಕ್ಕಿದ್ದ ನಂತರ ಅವುಗಳನ್ನು ನೂರಾರು ಕಿಲೋಮೀಟರ್ ದೂರಬಿಟ್ಟರೂ ಕೂಡ ಅದು ಮತ್ತೆ ತನ್ನ ವಾಸಸ್ಥಳಕ್ಕೆ ಬಂದುಬಿಡುತ್ತದೆ. ಚಿರತೆಯ ಬೆರಳಚ್ಚು ಮತ್ತು ಚಿರತೆಯ ಮೇಲಿರುವ ಮಚ್ಚೆಗಳನ್ನು ನೋಡಿ ಅದನ್ನು ಗುರುತು ಹಿಡಿಯಬಹುದಾಗಿದ್ದು ಚಿರತೆ ಹಾವಳಿಯನ್ನು ತಡೆಗಟ್ಟಬಹುದಾಗಿದೆ. ಮನೆಗಳ ಹತ್ತಿರ ಆನೈಡರ್ ಸೌಂಡ್- ಫ್ಯಾಕ್ಸ್ ಲೈಟುಗಳನ್ನು ಬಳಸಬಹುದು. ಮಾಂಸಾಹಾರಿ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಕುವುದರ ಬದಲು ಅದನ್ನು ಹೂತಾಕಬೇಕು. ಚಿರತೆ ದಾಳಿಯಿಂದ ಹಾನಿಗೆ ಒಳಗಾದ ಕುರಿಗೆ 5 ಸಾವಿರ ಮನುಷ್ಯನ ಮೇಲೆ ದಾಳಿ ಮಾಡಿದರೆ ಚಿಕಿತ್ಸೆಗಾಗಿ 20 ಸಾವಿರದಿಂದ 2 ಲಕ್ಷದವರೆಗೂ ಮೃತಪಟ್ಟರೆ 15 ಲಕ್ಷ ಪರಿಹಾರ ಸರ್ಕಾರದಿಂದ ಸಿಗಲಿದೆ ಎಂದು ತಿಳಿಸಿದ್ದಾರೆ.ಡಿಎಫ್ಒ ಕೃಷ್ಣಪ್ಪ ಮಾತನಾಡಿ, ತುಮಕೂರು, ರಾಮನಗರ ಜಿಲ್ಲೆಗಳಲ್ಲಿ ಹೆಚ್ಚಾಗಿ ಗುಡ್ಡಗಾಡು ಪ್ರದೇಶವನ್ನು ಕಾಣುತ್ತೇವೆ. ಈಗ ಮನುಷ್ಯರು ಹೆಚ್ಚಾಗಿ ಅರಣ್ಯ ಪ್ರದೇಶಗಳಿಗೆ ಪ್ರವೇಶ ಕೊಡುತ್ತಿರುವುದರಿಂದ ಪ್ರಾಣಿಗಳು ನಾಡಿನತ್ತ ಹೆಚ್ಚಾಗಿ ಬರುವಂತಾಗಿದೆ ಅರಣ್ಯ ಪ್ರದೇಶಗಳಲ್ಲಿ ಯಾವುದೇ ರೀತಿಯ ಮನುಷ್ಯನ ಚಟುವಟಿಕೆಗಳು ಹೆಚ್ಚಾದರೆ ಪ್ರಾಣಿಗಳಿಗೆ ಸಮಸ್ಯೆಯಾಗಲಿದೆ. ಅವು ಅರಣ್ಯವನ್ನು ಬಿಟ್ಟು ನಾಡಿನತ್ತ ಬರುತ್ತವೆ. ಚಿರತೆ ಹಾವಳಿ ಬಗ್ಗೆ ಹೆಚ್ಚಾಗಿ ದೂರುಗಳು ಬರುತ್ತಿದ್ದು ನಮ್ಮ ಅಧಿಕಾರಿಗಳು ಚಿರತೆ ಸೆರೆ ಹಿಡಿಯುವ ಕೆಲಸವನ್ನು ಮಾಡುತ್ತಿದ್ದರು ಕೂಡ ಸಾಕಷ್ಟು ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು ಸಾಕುಪ್ರಾಣಿಗಳನ್ನು ಮೇಯಿಸುವಾಗ ಮುಂಜಾಗ್ರತಾ ಕ್ರಮಗಳನ್ನು ಮನುಷ್ಯರು ಮಾಡಿಕೊಂಡಾಗ ಮಾತ್ರ ಕಾಡುಪ್ರಾಣಿಗಳ ದಾಳಿಯಿಂದ ತಪ್ಪಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಸೇವಾ ಯೋಜನೆ ಅಂಗವಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ವಿಶೇಷವಾಗಿ ಅಂತಾರಾಷ್ಟ್ರೀಯ ಚಿರತೆ ದಿನದ ವಿಶೇಷತೆ ಮತ್ತು ಅದರಿಂದ ಪಾರಾಗುವ ಬಗ್ಗೆ ಮಕ್ಕಳಿಗೆ ಅರಣ್ಯ ಇಲಾಖೆಯಿಂದ ಮಾಹಿತಿ ನೀಡಲಾಯಿತು. ಇದೇ ವೇಳೆ ಎಸಿಎಫ್ ಗಣೇಶ್, ನಿಜಾಮುದಿನ್, ಆಎಫ್‌ಆರ್‌ಒ ಚೈತ್ರ, ದಾಳೇಶ್, ಸಾಮಾಜಿಕಾರಣ್ಯ ಆರ್‌ಎಫ್‌ಒ ಮಂಜುನಾಥ್ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.ಪೋಟೋ 3ಮಾಗಡಿ1 :
ಮಾಗಡಿ ತಾಲೂಕಿನ ಸಾವನದುರ್ಗದ ಕೆಂಪೇಗೌಡ ವನಧಾಮದಲ್ಲಿ ಅಂತಾರಾಷ್ಟ್ರೀಯ ಚಿರತೆ ದಿನದ ಅಂಗವಾಗಿ ಅರಣ್ಯ ಇಲಾಖೆಯಿಂದ ಪೋಸ್ಟರ್ ಬಿಡುಗಡೆ ಮಾಡಲಾಯಿತು.