ಶಿರಸಿ: ಇಲ್ಲಿನ ಟಿಎಸ್‌ಎಸ್ (ತೋಟಗಾರ್ಸ್ ಸೇಲ್ಸ್ ಸೊಸೈಟಿ)ನಲ್ಲಿ ಈ ಹಿಂದಿನ ಆಡಳಿತ ಮಂಡಳಿ ಅವಧಿಯಲ್ಲಿ ನಡೆದ ಹಗರಣದ ಜಾಡು ಹಿಡಿದು ಆದಾಯ ತೆರಿಗೆ ಇಲಾಖೆ ಹಿರಿಯ ಅಧಿಕಾರಿಗಳು ಶಿರಸಿಯ 6 ಉದ್ಯಮಿಗಳ ನಿವಾಸ ಮತ್ತು ಕಚೇರಿ ಮೇಲೆ ದಾಳಿ ನಡೆಸಿ, ಅಗತ್ಯ ದಾಖಲೆಪತ್ರಗಳನ್ನು ಪರಿಶೀಲಿಸಿದ್ದಾರೆ.ಶುಕ್ರವಾರ ಬೆಳಗ್ಗೆ 7 ಗಂಟೆಗೆ ಆಗಮಿಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ಸಂಜೆಯವರೆಗೂ ಕಾಗದಪತ್ರಗಳ ಪರಿಶೀಲನೆ ನಡೆಸಿದೆ. ಜಯನಗರದಲ್ಲಿರುವ ಉದ್ಯಮಿ ದೀಪಕ ದೊಡ್ಡೂರ ಮನೆ ಮತ್ತು ಕಚೇರಿ, ಎಪಿಎಂಸಿ ಆವರಣದ ಸಮೀಪದಲ್ಲಿರುವ ಟಿಎಸ್‌ಎಸ್ ಮಾಜಿ ವ್ಯವಸ್ಥಾಪಕ ರವೀಶ ಹೆಗಡೆ ಮನೆ ಮೇಲೆ ನಾಲ್ವರು ಅಧಿಕಾರಿಗಳ ತಂಡ ದಾಳಿ ನಡೆಸಿ, ಸಂಜೆಯವರೆಗೂ ಆಸ್ತಿ ದಾಖಲೆಪತ್ರಗಳನ್ನು ಪರಿಶೀಲನೆ ನಡೆಸಿದೆ ಎಂಬುದಾಗಿ ತಿಳಿದು ಬಂದಿದೆ.ಟಿಎಸ್‌ಎಸ್ ಮಾಜಿ ಉದ್ಯೋಗಿ ಅನಿಲ ಮುಷ್ಟಗಿ ಅವರ ಯಲ್ಲಾಪುರ ರಸ್ತೆಯ ದೇವ ನಿಲಯ ಮತ್ತು ಚಿಪಗಿಯಲ್ಲಿರುವ ಮನೆ, ಟಿಎಸ್‌ಎಸ್ ನಿರ್ದೇಶಕ ರಾಮಕೃಷ್ಣ ಹೆಗಡೆ ಕಡವೆಯವರ ಯಲ್ಲಾಪುರ ರಸ್ತೆಯಲ್ಲಿರುವ ಮನೆ, ಟಿಎಸ್‌ಎಸ್‌ನಲ್ಲಿ ಅಡಕೆ ವಹಿವಾಟು ನಡೆಸುತ್ತಿದ್ದ ಪ್ರವೀಣ ಹೆಗಡೆ ಹೀಪನಳ್ಳಿ ಅವರ ವಿನಾಯಕ ಕಾಲನಿಯ ಮನೆ ಹಾಗೂ ಅಡಕೆ ವ್ಯಾಪಾರಿ ಶಿವರಾಮ ಹೆಗಡೆ ಅವರ ಅಡಕೆ ವಕಾರಿಯ ಮೇಲೆ ದಾಳಿ ನಡೆಸಲಾಗಿದೆ. ಹುಬ್ಬಳ್ಳಿ, ಬೆಂಗಳೂರು, ಮಂಗಳೂರು ಮತ್ತು ಕಾರವಾರ ಕಚೇರಿಯ ಆದಾಯ ತೆರಿಗೆ ಇಲಾಖೆಯ ೨೦ಕ್ಕೂ ಅಧಿಕ ಅಧಿಕಾರಿಗಳು ಈ ದಾಳಿಯಲ್ಲಿ ಪಾಲ್ಗೊಂಡಿದ್ದಾರೆ.
6 ಗಂಟೆ ವಿಚಾರಣೆ: ಶುಕ್ರವಾರ ಏಕಕಾಲಕ್ಕೆ ೬ ಉದ್ಯಮಿಗಳ ಮನೆ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಅಧಿಕಾರಿಗಳು, ಟಿಎಸ್‌ಎಸ್ ಮಾಜಿ ವ್ಯವಸ್ಥಾಪಕ ರವೀಶ ಹೆಗಡೆ ಹಾಗೂ ಉದ್ಯಮಿ ದೀಪಕ ಹೆಗಡೆ ದೊಡ್ಡೂರ ಮನೆಗೆ ಸುಮಾರು ನಾಲ್ವರು ಅಧಿಕಾರಿಗಳ ತಂಡ ಬೆಳಗ್ಗೆಯಿಂದ ಸಂಜೆಯವರೆಗೂ ಸುಮಾರು ೬ ಗಂಟೆಗಳ ಕಾಲ ಆಸ್ತಿಯ ದಾಖಲೆಪತ್ರ, ಬೆಲೆಬಾಳುವ ಆಭರಣಗಳ ಕುರಿತು ಮಾಹಿತಿಗೆ ಡ್ರಿಲ್ ಹೊಡೆದಿದ್ದಲ್ಲದೇ, ಬ್ಯಾಂಕ್ ಪಾಸ್‌ಬುಕ್ ವಿಚಾರಣೆ ನಡೆಸಿದೆ.