ನಾಳೆಯಿಂದ ಕುಷ್ಠ ರೋಗ ಜಾಗೃತಿ ಆಂದೋಲನ

KannadaprabhaNewsNetwork |  
Published : Jan 29, 2025, 01:32 AM IST
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ಡಾ.ಸುದರ್ಶನ್. | Kannada Prabha

ಸಾರಾಂಶ

ಚಿಕಿತ್ಸೆಯ ನಂತರ ಕುಷ್ಠ ರೋಗದಿಂದ ಗುಣಮುಖರಾದವರಿಗೆ ಸರ್ಕಾರವು ಬಹುಕೋಶೀಯ ರಬ್ಬರ್ ಪಾದರಕ್ಷೆಗಳನ್ನು ಒದಗಿಸುತ್ತಿದೆ ಎಂದು ಡಾ. ಸುದರ್ಶನ್ ಹೇಳಿದರು. ಕ್ಷೇತ್ರ ಭೇಟಿಯ ಸಮಯದಲ್ಲಿ ಯಾರಾದರೂ ಕುಷ್ಠರೋಗ ಲಕ್ಷಣಗಳನ್ನು ಹೊಂದಿದ್ದರೆ ಸೂಕ್ತ ಚಿಕಿತ್ಸೆಗಾಗಿ ತಜ್ಞರೊಂದಿಗೆ ಟೆಲಿ ಸಮಾಲೋಚನೆ ನಡೆಸಿ ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದರು.

ಕನ್ನಡಪ್ರಭ ವಾರ್ತೆ ಮಂಗಳೂರು

‘ಸ್ಪರ್ಶ್ ಕುಷ್ಠರೋಗ ಜಾಗೃತಿ ಆಂದೋಲನ’ ಜನವರಿ 30ರಿಂದ ಫೆಬ್ರವರಿ 13ರವರೆಗೆ ಒಟ್ಟು 15 ದಿನಗಳ ಕಾಲ ನಡೆಯಲಿದೆ. ‘ಕುಷ್ಠರೋಗದ ಬಗ್ಗೆ ಜಾಗೃತಿ ಮೂಡಿಸೋಣ, ತಪ್ಪು ಕಲ್ಪನೆಗಳನ್ನು ಹೋಗಲಾಡಿಸೋಣ ಮತ್ತು ಕುಷ್ಠರೋಗದಿಂದ ಯಾರೂ ಬಾಧಿತರಾಗದಂತೆ ನೋಡಿಕೊಳ್ಳೋಣ’ ಎಂಬ ಧ್ಯೇಯವಾಕ್ಯದೊಂದಿಗೆ ಈ ಆಂದೋಲನ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಕುಷ್ಠರೋಗ ಅಧಿಕಾರಿ ಡಾ. ಸುದರ್ಶನ್, 2024- 25ರಲ್ಲಿ ಡಿಸೆಂಬರ್‌ವರೆಗೆ ಪತ್ತೆಯಾದ 30 ಪ್ರಕರಣಗಳಲ್ಲಿ 14 ಪ್ರಕರಣಗಳು ಹೊರಜಿಲ್ಲೆ ಮತ್ತು ರಾಜ್ಯದ ಹೊರಗಿನಿಂದ ಬಂದಿವೆ. ಜಿಲ್ಲೆಯಲ್ಲಿ ಯಾವುದೇ ಮಕ್ಕಳಲ್ಲಿ ಕುಷ್ಠರೋಗ ಪತ್ತೆಯಾಗಿಲ್ಲ. ಮಾತ್ರವಲ್ಲದೆ ಕುಷ್ಠರೋಗದಿಂದ ವಿರೂಪಗೊಂಡ ಪ್ರಕರಣಗಳೂ ಆಗಿಲ್ಲ. ಜನರಲ್ಲಿ ಹೆಚ್ಚಿದ ಕಣ್ಗಾವಲು ಮತ್ತು ಜಾಗೃತಿಯೇ ಇದಕ್ಕೆ ಮುಖ್ಯ ಕಾರಣ ಎಂದು ಹೇಳಿದರು.

ದ.ಕ.ದಲ್ಲಿ 72 ಕುಷ್ಠ ರೋಗಿಗಳು:

ರಾಜ್ಯದಲ್ಲಿ ಒಟ್ಟು 1785 ಕುಷ್ಠರೋಗ ಪ್ರಕರಣಗಳಿದ್ದು, ಬೆಳಗಾವಿ, ಬಿಬಿಎಂಪಿ ವ್ಯಾಪ್ತಿ, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರದಲ್ಲಿ ಅತಿ ಹೆಚ್ಚು ಪ್ರಕರಣಗಳಿವೆ. ಆ ಭಾಗದಲ್ಲಿ ಕುಷ್ಠರೋಗ ಪತ್ತೆ ಶಿಬಿರಗಳನ್ನು ಪ್ರತಿ ವರ್ಷ ನಡೆಸಲಾಗುತ್ತದೆ ಎಂದ ಅವರು, ದ.ಕ. ಜಿಲ್ಲೆಯಲ್ಲಿ ಪ್ರಸ್ತುತ ಒಟ್ಟು 72 ಕುಷ್ಠರೋಗ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬ ರೋಗಿಯನ್ನು ಕುಷ್ಠರೋಗಕ್ಕೆ ಪರೀಕ್ಷಿಸಿದ ತಕ್ಷಣ ಔಷಧ ನೀಡುವ ಮೂಲಕ ಕುಟುಂಬ ಸದಸ್ಯರಿಗೆ ಹರಡುವುದನ್ನು ತಡೆಯಲಾಗುತ್ತದೆ ಎಂದರು.

ಕುಷ್ಠ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಇದರ ನಿರ್ಮೂಲನೆಯಲ್ಲಿ ಸಮುದಾಯದ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು ಈ 15 ದಿನಗಳ ಅಭಿಯಾನದ ಗುರಿಯಾಗಿದೆ. ಅ.30ರಂದು ಎಲ್ಲ ಶಾಲೆಗಳು, ಕಾಲೇಜುಗಳು, ಸರ್ಕಾರಿ ಕಚೇರಿಗಳಲ್ಲಿ ಕುಷ್ಠರೋಗಕ್ಕೆ ಸಂಬಂಧಿಸಿದ ಕಳಂಕವನ್ನು ಹೋಗಲಾಡಿಸಲು ಪ್ರತಿಜ್ಞೆ ಮಾಡಲಾಗುವುದು ಎಂದು ತಿಳಿಸಿದರು.ವಿವಿಧ ಕಾರ್ಯಕ್ರಮ:

ಕುಷ್ಠರೋಗ, ರೋಗಿಗಳನ್ನು ತಾರತಮ್ಯ ಮಾಡದಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರತಿಯೊಂದು ಕಾರ್ಯಕ್ರಮದಲ್ಲಿ ಜಾಗೃತಿ ಮೂಡಿಸಲಾಗುವುದು. ಕುಷ್ಠ ರೋಗದಿಂದ ಗುಣಮುಖರಾದವರನ್ನು ಸನ್ಮಾನಿಸಲು ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು ಕೇಳಲಾಗಿದೆ. ಗ್ರಾಮಗಳಲ್ಲಿ ಬ್ಯಾನರ್‌ಗಳು, ಪೋಸ್ಟರ್‌ಗಳು ಮತ್ತು ಪ್ರಕಟಣೆಗಳ ಮೂಲಕ ಜಾಗೃತಿ ಮೂಡಿಸಲಾಗುವುದು. ಗ್ರಾಮ ಸಭೆ ಮತ್ತು ಇತರ ಕಾರ್ಯಕ್ರಮಗಳ ಸಮಯದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಕುಷ್ಠರೋಗದ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ ಎಂದು ಡಾ.ಸುದರ್ಶನ್‌ ತಿಳಿಸಿದರು. ವಿವಿಧೆಡೆ ಚರ್ಮರೋಗ ತಪಾಸಣಾ ಶಿಬಿರ:

ಆಂದೋಲನದ ಅಂಗವಾಗಿ ಚರ್ಮರೋಗ ತಪಾಸಣಾ ಶಿಬಿರಗಳನ್ನು ವಿಟ್ಲದ ಪಿಯು ಕಾಲೇಜು (ಜನವರಿ 30), ಒಲವಿನಹಳ್ಳಿ ಆಶ್ರಮ ಕೋಟೆಕಾರ್ (ಜನವರಿ 31), ವಿದ್ಯಾಜ್ಯೋತಿ ಶಾಲೆ ಕುಂಜತ್‌ಬೈಲ್ (ಫೆಬ್ರವರಿ 2), ವೆನ್ಲಾಕ್ ಆಸ್ಪತ್ರೆ (ಫೆಬ್ರವರಿ 3), ಹಳೆಯಂಗಡಿ ನಾರಾಯಣ ಸನಿಲ್ ಶಾಲೆ (ಫೆಬ್ರವರಿ 4), ಜಿಲ್ಲಾ ಕಾರಾಗೃಹ (ಫೆಬ್ರವರಿ 5), ಕೇಂಬ್ರಿಡ್ಜ್ ಶಾಲೆ (ಫೆಬ್ರವರಿ 6), ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಡಿಪಿಎಂಆರ್ ಶಿಬಿರ (ಫೆಬ್ರವರಿ 7), ಭಾರತಿ ಸೇವಾ ಆಶ್ರಮ (ಫೆಬ್ರವರಿ 11), ನಿರ್ಗತಿಕ ಪುನರ್ವಸತಿ ಕೇಂದ್ರ ವಾಮಂಜೂರು (ಫೆಬ್ರವರಿ 12) ಈ ಕೇಂದ್ರಗಳಲ್ಲಿ ನಡೆಸಲಾಗುವುದು ಎಂದು ಜಿಲ್ಲಾ ಕುಷ್ಠರೋಗ ಅಧಿಕಾರಿ ತಿಳಿಸಿದರು.

ಚಿಕಿತ್ಸೆಯ ನಂತರ ಕುಷ್ಠ ರೋಗದಿಂದ ಗುಣಮುಖರಾದವರಿಗೆ ಸರ್ಕಾರವು ಬಹುಕೋಶೀಯ ರಬ್ಬರ್ ಪಾದರಕ್ಷೆಗಳನ್ನು ಒದಗಿಸುತ್ತಿದೆ ಎಂದು ಡಾ. ಸುದರ್ಶನ್ ಹೇಳಿದರು. ಕ್ಷೇತ್ರ ಭೇಟಿಯ ಸಮಯದಲ್ಲಿ ಯಾರಾದರೂ ಕುಷ್ಠರೋಗ ಲಕ್ಷಣಗಳನ್ನು ಹೊಂದಿದ್ದರೆ ಸೂಕ್ತ ಚಿಕಿತ್ಸೆಗಾಗಿ ತಜ್ಞರೊಂದಿಗೆ ಟೆಲಿ ಸಮಾಲೋಚನೆ ನಡೆಸಿ ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದರು.

ದ.ಕ.ದಲ್ಲಿ ಕುಷ್ಠರೋಗ ಪ್ರಕರಣಗಳು

2018-19: 56

2019-20: 37

2020-21: 29

2021-22: 39

2022-23: 75

2023-24: 46

2024-25: 30

------------

ಬಾಕ್ಸ್‌-2

ದ.ಕ.ದಲ್ಲಿ ಗ್ರೇಡ್-2 (ವಿರೂಪ) ಪ್ರಕರಣಗಳು

2018-19: 1

2019-20: 0

2020-21: 2

2021-22: 1

2022-23: 1

2023-24: 3

2024-25: 0

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ