ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಮೈಷುಗರ್ ಆವರಣದಲ್ಲಿ ಲೆಸ್ಲಿ ಕೋಲ್ಮನ್ ಅವರ ಸಂಸ್ಮರಣೆ ದಿನದ ಅಂಗವಾಗಿ ಲೆಸ್ಲಿ ಕೋಲ್ಮನ್ ಪ್ರತಿಮೆಗೆ ಮಾಲಾರ್ಪಣೆ ಮತ್ತು ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ರಾಜ್ಯದ ಪ್ರಮುಖ ಸಕ್ಕರೆ ಕಾರ್ಖಾನೆಗಳಲ್ಲೊಂದಾದ ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಪ್ರಾರಂಭಿಸಿ, ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಕಬ್ಬನ್ನು ಈ ಪ್ರಾಂತ್ಯದಲ್ಲಿ ಬೆಳೆಯುವಂತೆ ಮಾಡಿದರು ಎಂದು ಹೇಳಿದರು.
ಕೆನಡಾದ ಟೊರಾಂಟೋ ರಾಜ್ಯದ ಆಂಟೇರಿಯೋ ಪಟ್ಟಣದಲ್ಲಿ 1878ರ ಜೂನ್ 16ರಂದು ಜನಿಸಿದ ಕೋಲ್ಮನ್ ಅವರು, ಆಂಟೇರಿಯೋ ವಿಶ್ವವಿದ್ಯಾಲಯದಲ್ಲಿ ಎಂಎ ಪದವಿ ಪಡೆದು ಮೈಸೂರು ಸರ್ಕಾರದ ನೆರವಿನಿಂದ ಜರ್ಮನ್‌ನ ಗಟಿಂಗೆನ್ ವಿವಿಯಲ್ಲಿ ಅಧ್ಯಯನ ನಡೆಸಿ ಡಾಕ್ಟರೇಟ್ ಪದವಿ ಪಡೆದರು. ನಂತರ ಮೈಸೂರು ಸಂಸ್ಥಾನದಲ್ಲಿ ಕೀಟ ಮತ್ತು ಶಿಲೀಂಧ್ರ ವಿಜ್ಞಾನಿಯಾಗಿ, ತರುವಾಯ ವ್ಯವಸಾಯ ಇಲಾಖೆಯ ನಿರ್ದೇಶಕರಾಗಿ ದುಡಿದು 1934ರಲ್ಲಿ ನಿವೃತ್ತರಾದರು ಎಂದರು.ಈ ಅವಧಿಯಲ್ಲಿ ನಿಷ್ಠಾವಂತ ಮತ್ತು ದಕ್ಷ ಸೇವೆ ಮೂಲಕ ಕೋಲ್ಮನ್ ಅವರು ಮೈಸೂರಿನ ಸ್ಥಿತಿಗತಿಗಳಿಗೆ ತಕ್ಕಂತೆ ಮಾರ್ಪಾಡು ಮಾಡಿ ಜೋಡಿಸುವ ಮೂಲಕ ಇಲ್ಲಿನ ಕೃಷಿ ಪದ್ಧತಿಯನ್ನು ವೈಜ್ಞಾನಿಕ ಬುನಾದಿಯ ಮೇಲೆ ಸ್ಥಾಪಿಸಿ ಆಧುನೀಕರಿಸುವ ಪ್ರಯತ್ನ ಬಹಳ ಮಟ್ಟಿಗೆ ಸಫಲಗೊಂಡಿತು ಎಂದು ವಿವರಿಸಿದರು.
ಮುಂಗಾರು- ಹಿಂಗಾರು ಮಳೆಗಳ ಅವಧಿಯಲ್ಲಿ ಸಮರೋಪಾದಿಯಾಗಿ ವ್ಯವಸ್ಥೆಗೊಳಿಸಿದ್ದ ಕಾರ್ಯಕ್ರಮ ಈಗಲೂ ಸೂಕ್ತ ಮಾರ್ಪಾಡುಗಳೊಂದಿಗೆ ಅಸ್ತಿತ್ವದಲ್ಲಿದೆ. ಕಾಫಿ ಬೆಳೆಗೆ ತಗಲುವ ಎಲೆರೋಗ, ಕೊಳೆರೋಗಗಳ ದೀರ್ಘ ಅಧ್ಯಯನ ನಡೆಸಿ ಅವುಗಳ ಹತೋಟಿಗೆ ಬೋರ್ಡೋ ಮಿಶ್ರಣ ಸಿಂಪಡಿಕೆಯನ್ನು ಅನುಷ್ಠಾನಕ್ಕೆ ತಂದರು ಎಂದು ಹೇಳಿದರು.
ಮಂಡ್ಯ ಜಿಲ್ಲೆಯ ಇಂದಿನ ಏಳಿಗೆಯಲ್ಲಿ ಕೋಲ್ಮನ್ ಅವರ ರಚನಾತ್ಮಕ ಪಾತ್ರ, ಅವರು ವಹಿಸಿದ ವಿಶೇಷ ಆಸಕ್ತಿ ಫಲವಾಗಿ ಮಂಡ್ಯ ಸಕ್ಕರೆ ನಗರವಾಯಿತು. ನಂತರ ಅವರು ಸ್ವದೇಶಕ್ಕೆ ತೆರಳಿ ಹಲವು ಸಂಶೋಧನೆಗಳಲ್ಲಿ ತೊಡಗಿಕೊಂಡರು. ಬಳಿಕ ಮೋಟಾರ್ ಅಪಘಾತದಲ್ಲಿ ಅವರು ಇಹಲೋಕ ತ್ಯಜಿಸಿದರು ಎಂದು ವಿವರಿಸಿದರು.