ಬಿರುಸು ಕಳೆದುಕೊಂಡ ಮಳೆ, 17 ಮನೆಗಳಿಗೆ ಹಾನಿ

KannadaprabhaNewsNetwork |  
Published : Jul 30, 2024, 12:32 AM IST
ಜೋಯಿಡಾದಲ್ಲಿ ಸೋಮವಾರ ಭಾರಿ ಮಳೆ ಸುರಿದಿದ್ದು, ಬತ್ತದ ಗದ್ದೆಗಳು ಜಲಾವೃತವಾಗಿವೆ. | Kannada Prabha

ಸಾರಾಂಶ

ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮಳೆ ಇಳಿಮುಖವಾಗಿದೆ. ಆದರೆ ಸೋಮವಾರ ಒಂದೇ ದಿನ 17 ಮನೆಗಳಿಗೆ ಹಾನಿ ಉಂಟಾಗಿದೆ. ಮಳೆ ಹಾವಳಿ 2-3 ದಿನಗಳಿಂದ ಕಡಿಮೆಯಾಗಿದ್ದರೂ, ಜಲಾವೃತವಾಗಿದ್ದ ಮನೆಗಳ ಕುಸಿತ ಮುಂದುವರಿದಿದೆ.

ಕಾರವಾರ: ಜಿಲ್ಲೆಯಾದ್ಯಂತ ಮಳೆ ಇಳಿಮುಖವಾಗಿದೆ. ಆದರೆ ಸೋಮವಾರ ಒಂದೇ ದಿನ 17 ಮನೆಗಳಿಗೆ ಹಾನಿ ಉಂಟಾಗಿದೆ.ಮಳೆ ಹಾವಳಿ 2-3 ದಿನಗಳಿಂದ ಕಡಿಮೆಯಾಗಿದ್ದರೂ, ಜಲಾವೃತವಾಗಿದ್ದ ಮನೆಗಳ ಕುಸಿತ ಮುಂದುವರಿದಿದೆ. ಪ್ರತಿದಿನ ಮನೆಗಳು ಕುಸಿಯುತ್ತಿವೆ. ಜಿಲ್ಲೆಯಲ್ಲಿ ಸೋಮವಾರ 5 ಮನೆಗಳಿಗೆ ತೀವ್ರ ಹಾನಿ ಆಗಿದ್ದರೆ, 12 ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಕಾರವಾರದ 2 ಮತ್ತು ಕುಮಟಾದ 1 ಸೇರಿದಂತೆ ಒಟ್ಟು 3 ಕಾಳಜಿ ಕೇಂದ್ರಗಳಲ್ಲಿ 119 ಜನರು ಆಶ್ರಯ ಪಡೆದಿದ್ದಾರೆ.ಸುಮಾರು 15 ದಿನಗಳ ಕಾಲ ಭಾರಿ ಮಳೆ ಸುರಿದು ಜಿಲ್ಲೆಯಾದ್ಯಂತ ಅನಾಹುತಗಳು ಉಂಟಾದ ಬಳಿಕ ಈಗ ಮಳೆಯ ಅಬ್ಬರ ಕಡಿಮೆಯಾಗಿದೆ. ಸೋಮವಾರ ಕರಾವಳಿಗಿಂತ ಘಟ್ಟದ ಮೇಲಿನ ತಾಲೂಕುಗಳಲ್ಲಿ ಸ್ವಲ್ಪ ಹೆಚ್ಚು ಮಳೆಯಾಗುತ್ತಿದೆ.

ಅಪಾಯದ ಮಟ್ಟದಲ್ಲಿ ಪ್ರವಹಿಸುತ್ತಿದ್ದ ಅಘನಾಶಿನಿ, ಗಂಗಾವಳಿ, ಚಂಡಿಕಾ, ಗುಂಡಬಾಳ, ಬಡಗಣಿ ಹಾಗೂ ಭಾಸ್ಕೇರಿ ನದಿಗಳಲ್ಲಿ ನೀರಿನ ಮಟ್ಟ ಸಹಜ ಸ್ಥಿತಿಗೆ ಬರುತ್ತಿದೆ. ನದಿ ತೀರದ ಜನತೆ ನಿಟ್ಟುಸಿರು ಬಿಡುವಂತಾಗಿದೆ. ಆದರೆ ಸುಪಾ ಜಲಾಶಯದಿಂದ ನೀರನ್ನು ಹೊರಬಿಡುವ ಸೂಚನೆ ನೀಡಿದ್ದು, ನೀರು ಬಿಟ್ಟಲ್ಲಿ ಕಾಳಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಲಿದೆ.ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ಚತುಷ್ಪಥ ಹೆದ್ದಾರಿ ಸಂಚಾರ ಇನ್ನೂ ಆರಂಭವಾಗಿಲ್ಲ. ಮಾಗೋಡ ಫಾಲ್ಸ್ ರಸ್ತೆ ಸೇರಿದಂತೆ ಕೆಲವು ಗ್ರಾಮೀಣ ಪ್ರದೇಶದಲ್ಲೂ ರಸ್ತೆಗಳು ಕುಸಿದಿರುವುದರಿಂದ ಸಂಚಾರಕ್ಕೆ ತೊಡಕಾಗಿದೆ.

ಗ್ರಾಮಾಂತರ ಪ್ರದೇಶದಲ್ಲಿ ಬಿರುಗಾಳಿ ಮಳೆಗೆ ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದು, ಕೆಲವೆಡೆ ವಿದ್ಯುತ್ ವ್ಯತ್ಯಯ ಮುಂದುವರಿದಿದೆ. ಮಳೆ ಕಡಿಮೆಯಾದರೂ ಗುಡ್ಡ ಕುಸಿತ, ಮನೆಗಳ ಕುಸಿತ, ತೀವ್ರ ಮಳೆಯಲ್ಲಿ ಮನೆಗಳು ಜಲಾವೃತವಾಗಿದ್ದರಿಂದ ಜನಜೀವನ ಸಹಜ ಸ್ಥಿತಿಗೆ ಬರಬೇಕಾಗಿದೆ.

ಜೋಯಿಡಾದಲ್ಲಿ ಮಳೆ ಅಬ್ಬರ:

ಕಳೆದ ಎರಡು ದಿನಗಳಿಂದ ಕಡಿಮೆಯಾಗಿದ್ದ ಮಳೆ ಮತ್ತೆ ಜೋರಾಗಿದೆ. ಇದರಿಂದ ಪ್ರವಾಹ ಮಿತಿಮೀರುತ್ತಿದೆ. ರೈತರೆಲ್ಲ ಬತ್ತದ ನಾಟಿ ಕೆಲಸದಲ್ಲಿ ನಿರತರಾಗಿದ್ದಾರೆ. ಸೋಮವಾರದ ಮಳೆ ತುಂಬಾ ಜೋರಾದ ಕಾರಣ ಡೇರಿಯಾ ಗ್ರಾಮದಲ್ಲಿ ನಾಟಿ ಮಾಡಿದ ಹತ್ತಾರು ಎಕರೆ ಬತ್ತದ ಗದ್ದೆ ಪೂರ್ತಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಡೇರಿಯಾ ಗ್ರಾಮದ ಡೇರೆಕರ ಕುಟುಂಬದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇರುವ ಗದ್ದೆ ಕೊಚ್ಚಿ ಹೋಯಿತು, ಮತ್ತೆ ನಾಟಿ ಮಾಡಲು ಅಗೆಮಡಿಯೂ ಇಲ್ಲ ಎಂದು ರೈತರು ಗೋಳಿಡುತ್ತಿದ್ದಾರೆ. ಪಕ್ಕದ ಹಳ್ಳ ತುಂಬಿ ಭೋರ್ಗರೆದು ಇಡಿ ಗುಡ್ಡದ ನೀರೆಲ್ಲ ಗದ್ದೆಗೆ ನುಗ್ಗಿದೆ. ಈ ಬಗ್ಗೆ ಕೃಷಿ ಇಲಾಖೆಗೆ, ತಹಸೀಲ್ದಾರರಿಗೆ ಮಾಹಿತಿ ನೀಡಲಾಗಿದೆ. ತಾಲೂಕಿನ ಹಲವಾರು ಕಡೆಗಳಲ್ಲಿ ಈ ರೀತಿಯ ಮಳೆ ಆಗಿದ್ದು, ಹಾನಿ ವಿವರ ತಿಳಿದು ಬರಬೇಕಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!