ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ತಾಲೂಕಿನ ಚಿನ್ನಕೋಟೆ ಗ್ರಾಮ ಪಂಚಾಯಿತಿಯ ದೇವಗಾನಹಳ್ಳಿ ಗ್ರಾಮದಲ್ಲಿನ ಮೂರು ದಶಕಗಳಷ್ಟು ಹಳೆಯದಾದ ಅಂಗನವಾಡಿ ಕಟ್ಟಡವು ಸಂಪೂರ್ಣ ಶಿಥಿಲಗೊಂಡಿದ್ದು, ಇಂದೋ, ನಾಳೆಯೋ ಕುಸಿದು ಬೀಳುವ ಸ್ಥಿತಿಯಲ್ಲಿದ್ದರೂ ಇಲಾಖೆ ಗಮನಹರಿಸದೆ ಕಡೆಗಣಿಸಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.ಕಟ್ಟಡ ಯೋಗ್ಯವಾಗಿಲ್ಲದ ಕಾರಣ ಈ ಅಂಗನವಾಡಿ ಕೇಂದ್ರಕ್ಕೆ ಮಕ್ಕಳನ್ನು ಕಳುಹಿಸಲು ಪೋಷಕರು ಹಿಂದೇಟು ಹಾಕುವಂತಾಗಿದೆ. ದೇವಗಾನಹಳ್ಳಿ ಗ್ರಾಮದಲ್ಲಿನ ಅಂಗನವಾಡಿ ಕೇಂದ್ರದ ಕಟ್ಟಡವು ಹಲವು ವರ್ಷಗಳಿಂದ ಸಂಪೂರ್ಣ ಶಿಥಿಲಗೊಂಡಿದ್ದು, ಬೀಳುವ ಹಂತಕ್ಕೆ ತಲುಪಿದೆ ಮತ್ತುಕಳಚಿದ ಮೇಲ್ಛಾವಣಿ ಸಿಮೆಂಟ್
ಶಿಥಿಲವಾಗಿರುವ ಮೇಲ್ಛಾವಣಿ ಯಾವಾಗ ಕಳಚಿ ಮಕ್ಕಳ ಮೇಲೆ ಬೀಳುವುದೊ ಎನ್ನುವ ಆತಂಕದಲ್ಲಿಯೇ ಅಂಗನವಾಡಿ ನಡೆಯುತ್ತಿದೆ. ಕಳೆದ ಎರಡು ತಿಂಗಳ ಹಿಂದೆ ದಾಸರಹೊಸಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದ ಮೇಲ್ಚಾವಣಿಯ ಸಿಮೆಂಟ್ ಕಳಚಿ ಮಕ್ಕಳ ತಲೆ ಮೇಲೆ ಬಿದ್ದು ನಾಲ್ವರು ಮಕ್ಕಳಿಗೆ ಗಾಯವಾಗಿದ್ದರೂ ಇಲಾಖೆ ಎಚ್ಚತ್ತುಕೊಂಡು ಅವ್ಯವಸ್ಥೆಯ ಕೇಂದ್ರಗಳನ್ನು ದುರಸ್ತಿಗೆ ಮುಂದಾಗಿಲ್ಲ ಎಂಬುದು ಗ್ರಾಮಸ್ಥರ ಅಳಲು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 1996 ರಲ್ಲಿ ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಿಸಲಾಗಿದ್ದು, ಮಳೆಗಾಲದಲ್ಲಿ ಸೋರುತ್ತದೆ. ಕಳೆದ ಎರಡು ವರ್ಷಗಳಿಂದ ಕಟ್ಟಡದ ಸಿಮೆಂಟ್ ಕಾಂಕ್ರೀಟ್‌ನ ಪದರುಗಳು ಕಳಚಿ ಬೀಳುತ್ತಿವೆ. ಕಟ್ಟಡದ ಛಾವಣಿಯ ಕಾಂಕ್ರೀಟ್‌ನ ಕಬ್ಬಿಣದ ಕಂಬಿಗಳು ತುಕ್ಕು ಹಿಡಿದು ಹೊರ ಚಾಚಿಕೊಂಡಿವೆ. ಗೋಡೆಗಳು ಬಿರುಕು ಬಿಟ್ಟಿದ್ದರಿಂದ ಮಕ್ಕಳು, ಸಿಬ್ಬಂದಿ ನಿತ್ಯ ಪ್ರಾಣ ಭಯದಲ್ಲೇ ಇರುವಂತಾಗಿದೆ. ಕೇಂದ್ರದ ಕಾರ್ಯಕರ್ತೆ ಆಗಾಗ ಮಕ್ಕಳನ್ನು ಹೊರಗಡೆ ಕೂರಿಸಿ ಪಾಠ ಮಾಡುತ್ತಾರೆ.ಅಂಗನವಾಡಿಯಲ್ಲಿ 16 ಮಕ್ಕಳುಈ ಕೇಂದ್ರದಲ್ಲಿ ಪ್ರಸ್ತುತ 05 ಗಂಡು, 11 ಹೆಣ್ಣು ಸೇರಿ ಒಟ್ಟು 16 ಮಕ್ಕಳು ದಾಖಲಾಗಿದ್ದಾರೆ. ಕಟ್ಟಡದ ದುಸ್ಥಿತಿ ಕಂಡ ಪೋಷಕರು ತಮ್ಮ ಮಕ್ಕಳನ್ನು ಈ ಅಂಗನವಾಡಿ ಕೇಂದ್ರಕ್ಕೆ ಕಳಿಸಲು ಹಿಂದೇಟು ಹಾಕುತ್ತಿದ್ದು, ಕೇಂದ್ರದಲ್ಲಿ ಮಕ್ಕಳ ಸಂಖ್ಯೆಯೂ ಇಳಿಕೆಯಾಗಿದೆ. ಅಂಗನವಾಡಿ ಕೇಂದ್ರವು ಶಿಥಿಲಗೊಂಡ ಕಟ್ಟಡದಲ್ಲೇ ನಡೆಯುತ್ತಿದ್ದರೂ ಮಕ್ಕಳ ಬಗ್ಗೆ ಕಾಳಜಿವಹಿಸದೇ ಮೌನವಹಿಸಿದ ಇಲಾಖೆಯ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಅನಾಹುತ ನಡೆಯುವ ಮುನ್ನ ಕಟ್ಟಡವನ್ನು ದುರಸ್ಥಿಪಡಿಸಿ ಇಲ್ಲವೆ ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಿ ಎಂದು ಒತ್ತಾಯಿಸಿದ್ದಾರೆ.
ನೂತನ ಕಟ್ಟಡ ನಿರ್ಮಿಸಲಿಕಟ್ಟಡ ಶಿಥಿಲಗೊಂಡು ಕಟ್ಟಡದಲ್ಲಿ ಮಕ್ಕಳನ್ನು ಕೂರಿಸಲು ಭಯವಾಗುತ್ತದೆ, ಅಡುಗೆ ಕೋಣೆ ಸಹ ಅವ್ಯವಸ್ಥೆಯಿಂದ ಕೂಡಿದ್ದು ಆಹಾರ ಪದಾರ್ಥಗಳ ಮೇಲೆ ಸಿಮೆಂಟ್ ಕಳಚಿ ಬೀಳುತ್ತಿದೆ. ಮಕ್ಕಳ ದೃಷ್ಟಿಯಿಂದ ಆದಷ್ಟು ಬೇಗ ನೂತನ ಕಟ್ಟಡ ನಿರ್ಮಿಸಬೇಕು ಎಂದು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಒತ್ತಾಯಿಸಿದ್ದಾರೆ.