ಕನ್ನಡಪ್ರಭ ವಾರ್ತೆ ಮಂಡ್ಯಪರೀಕ್ಷೆಗಳು ಸಮೀಪಿಸಿವೆ, ಇನ್ನೂ ಪೂರ್ಣಗೊಳ್ಳದ ಪಾಠ, ಪಠ್ಯ ಬೋಧಿಸಬೇಕಾದದ ಶಿಕ್ಷಕರನ್ನು ತರಬೇತಿಗೆ ನಿಯೋಜಿಸುವುದು ಇನ್ನೂ ನಿಂತಿಲ್ಲ. ಪಠ್ಯ ವಿಷಯಗಳು ಪೂರ್ಣಗೊಳ್ಳದೆ ವಿದ್ಯಾರ್ಥಿಗಳು ಆತಂಕಗೊಂಡಿದ್ದು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.
ಶಾಲಾ ಆವರಣದ ರಂಗ ಮಂದಿರದಲ್ಲಿ ಪ್ರತಿಭಟನೆ ಕುಳಿತಿರುವ ವಿದ್ಯಾರ್ಥಿಗಳು ಮತ್ತು ಪೋಷಕರು, ಮೊದಲು ಪರಿಪೂರ್ಣವಾಗಿ ಪಾಠ ಮುಗಿಸಿ ಆ ನಂತರ ಪರೀಕ್ಷೆ ಬರೆಸಿ ಎಂದು ಒತ್ತಾಯಿಸಿದ್ದಾರೆ. ಮಕ್ಕಳ ಹೋರಾಟಕ್ಕೆ ಪೋಷಕರು ಕೂಡ ಸಾಥ್ ನೀಡಿದ್ದಾರೆ.
ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಮೇಶ್ ಮಾತನಾಡಿ, ಶಾಲೆ ಉಳಿವಿಗೆ ಏನೆಲ್ಲಾ ಬೇಕೋ ಆ ವ್ಯವಸ್ಥೆಯನ್ನು ಮಾಡಿದ್ದೇವೆ, ಇಲ್ಲಿಯ ತನಕ ಸುಮಾರು ೨೦ ಲಕ್ಷ ರುಪಾಯಿಗಿಂತಲೂ ಹೆಚ್ಚು ಸೌಲಭ್ಯ ನೀಡಿದ್ದೇವೆ, ನಿತ್ಯ ಸಚಿವರ ತವರೂರು ಎಂಬ ಕಾರಣಕ್ಕಾಗಿ ನಮ್ಮೂರಿನ ಹೆಸರು ಉಳಿವಿಗೆ ಸಹಕರಿಸಿದ್ದೇವೆ, ಆದರೂ ಮಕ್ಕಳಿಗೆ ಪಾಠಗಳನ್ನು ಪೂರ್ಣಗೊಳಿಸಿಲ್ಲ ಎಂದು ಆರೋಪಿಸಿದರು.ಶಿಕ್ಷಣ ಇಲಾಖೆ ಅಧಿಕಾರಿಗಳು ಪಾಠ ಮಾಡಬೇಕಾದ ಶಿಕ್ಷಕರನ್ನು ಪರೀಕ್ಷೆ ಸಮಯದಲ್ಲೂ ತರಬೇತಿಗೆ ಕಳುಹಿಸುತ್ತಿದ್ದಾರೆ. ಪರೀಕ್ಷೆ ಸಮಯದಲ್ಲಿ ತರಬೇತಿ ನೀಡುವ ಅಗತ್ಯವೇನು. ಮಕ್ಕಳಿಗೆ ಪಠ್ಯ ಬೋಧನೆ ಮಾಡುವುದಕ್ಕಿಂತ ಶಿಕ್ಷಕರಿಗೆ ನೀಡುವ ತರಬೇತಿಯೇ ಅಧಿಕಾರಿಗಳಿಗೆ ಮುಖ್ಯವೇ ಎಂದು ಪ್ರಶ್ನಿಸಿದರು.
ಈ ಶಾಲೆಯಲ್ಲಿ ಏಳು ಜನ ಶಿಕ್ಷಕರಿದ್ದು, ಒಬ್ಬರು ನಿಯೋಜನೆ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಶೈಕ್ಷಣಿಕ ವರ್ಷ ಮುಗಿಯುವವರೆಗೆ ಶಿಕ್ಷಕರಿಗೆ ಯಾವುದೇ ತರಬೇತಿ ಬೇಡ ಎಂದು ಹೇಳಿದ್ದೇವೆ. ಈಗ ಮಕ್ಕಳು ಶಾಲೆಯಿಂದ ಹೊರಗಡೆ ಕುಳಿತು ಮೊದಲು ಪಾಠ ಮಾಡಿಕೊಡಿ ಎಂದು ಕೇಳುತ್ತಿದ್ದಾರೆ, ಇಲ್ಲಿವರೆಗೆ ಯಾವ ಅಧಿಕಾರಿಗಳೂ ಸಹ ಈ ಶಾಲೆಯ ಬಳಿ ಬಂದಿಲ್ಲ, ಹೀಗಾದರೇ ಎಲ್ಲಿ ಸರ್ಕಾರಿ ಶಾಲೆ ಉಳಿವು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.