ಕನ್ನಡಪ್ರಭ ವಾರ್ತೆ ಬಾಗಲಕೋಟೆ
ರೈತರು ಉತ್ಪಾದಿಸಿದ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗಬೇಕಾದರೆ ಬ್ರ್ಯಾಂಡ್ ಅಗತ್ಯವಾಗಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.ತೋಟಗಾರಿಕೆ ವಿವಿಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಕೃಷಿ, ತೋಟಗಾರಿಕೆ, ಕೆಪೆಕ್ ಮತ್ತು ತೋಟಗಾರಿಕೆ ವಿವಿಯ ಸಹಯೋದಲ್ಲಿ ಕೃಷಿ, ತೋಟಗಾರಿಕೆ ಉತ್ಪನ್ನಗಳ ಖರೀದಿದಾರರ ಮತ್ತು ಮಾರಾಟಗಾರರ ಸಮ್ಮೇಳನ-ಸಂವಾದ ಹಾಗೂ ಸಿರಿಧಾನ್ಯ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೈತ ಕಷ್ಟಪಟ್ಟು ಬೆಳೆ ಬೆಳೆಯುತ್ತಾನೆ. ಬೆಳೆ ಬಂದ ಮೇಲೆ ಉತ್ತಮ ಬೆಲೆ ಸಹ ಸಿಗಲ್ಲ. ಇದರಿಂದ ರೈತ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಆಧುನಿಕ ಜಗತ್ತಿಗೆ ತಕ್ಕಂತೆ ಉತ್ಪನ್ನಗಳಿಗೆ ಬ್ರ್ಯಾಂಡ್ ರೂಪ ಕೊಟ್ಟು ಮಾರುಕಟ್ಟೆಗೆ ತಂದಲ್ಲಿ ಉತ್ತಮ ಬೆಲೆ ಸಿಗುತ್ತಿದೆ ಎಂದು ತಿಳಿಸಿದರು.
ಕೃಷಿಯಿಂದ ಯುವಕರು ಬಹಳಷ್ಟು ದೂರ ಉಳಿಯುತ್ತಿದ್ದಾರೆ. ಇದಕ್ಕೆ ಕಾರಣ ಕೃಷಿಯಲ್ಲಿ ಹೆಚ್ಚಿನ ಆದಾಯ ಪಡೆಯಲು ಸಾಧ್ಯವಾಗುವುದಿಲ್ಲ. ಅದನ್ನು ಯಾವ ರೀತಿಯಲ್ಲಿ ಹೋಗಲಾಡಿಸಬೇಕು. ಉತ್ಪಾದನಾ ಕೇಂದ್ರಗಳು ಹೆಚ್ಚಿಗೆ ಆಗಬೇಕು. ಹುನಗುಂದ ತಾಲೂಕಿನ ಎಫ್ಪಿಒ ₹80 ಕೋಟಿ ವಹಿವಾಟು ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಇಂತಹ ಎಫ್‌ಪಿಓಗಳಿಗೆ ಪ್ರೋತ್ಸಾಹ ನೀಡುವ ಕೆಲಸವಾಗಬೇಕು. ಇಲ್ಲಿಯ ಬೆಳೆ ಹೆಚ್ಚಿನ ಉತ್ಪನ್ನಗಳು ರಪ್ತು ಆಗಬೇಕು. ಅದಕ್ಕಾರಿ ಮಾರುಕಟ್ಟೆಗಳು ನಿರ್ಮಾಣವಾಗಬೇಕು. ಇಂತಹದೊಂದು ಸಮ್ಮೇಳನ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.ಬೀಳಗಿ ಶಾಸಕ ಜೆ.ಟಿ.ಪಾಟೀಲ ಮಾತನಾಡಿ, ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗದೇ ಮಧ್ಯವರ್ಥಿಗಳಿಂದ ನಲುಗಿ ಹೋಗುತ್ತಿದ್ದಾರೆ. ಕೃಷಿ, ತೋಟಗಾರಿಕೆ ಬೆಳೆಗಳನ್ನು ಆಸಕ್ತಿಯಿಂದ ಬೆಳೆಯುತ್ತಾರೆ. ಬೆಳೆದ ಉತ್ಪನ್ನಗಳಿಗೆ ಯೋಗ್ಯ ದರ ಸಿಗಬೇಕಿದೆ. ಈ ನಿಟ್ಟಿನಲ್ಲಿ ಇಲಾಖೆ, ತೋವಿವಿಯಿಂದ ಮಾರುಕಟ್ಟೆ ಕಲ್ಪಿಸುವ ವ್ಯವಸ್ಥೆ ಆಗಬೇಕು. ಅಂದಾಗ ರೈತ ಆರ್ಥಿಕವಾಗಿ ಬಷ್ಠರಾಗಲು ಸಾಧ್ಯವಾಗುತ್ತದೆ. ಅಪ್ರಾಪ್ತ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಒಳಗಾಗುತ್ತಿದ್ದು, ರೈತರು ಮೂಲ ಕೃಷಿ ಒಲಿಯಬೇಕಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಮಾತನಾಡಿ, ರೈತರ ಉತ್ಪನ್ನಗಳಿಗೆ ಪ್ರಚಾರ ಹೆಚ್ಚಾಗಬೇಕು ಎಂದರು. ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಪ್ರಚಾರದಲ್ಲಿ ವಿಫಲರಾಗುತ್ತಿದ್ದೇವೆ. ರೈತರಿಗೆ ಯೋಗ್ಯವಾದ ಪ್ರತಿಫಲ ಸಿಗುತ್ತಿಲ್ಲ. ಬೆಳೆದ ಉತ್ಪನ್ನಗಳ ಶ್ರಮಕ್ಕೆ ಪ್ರತಿಫಲ ಸಿಗುತ್ತಿಲ್ಲ. ಇದರಿಂದ ರೈತರ ಆತ್ಮಹತ್ಯೆಗಳು ಸಂಭವಿಸುತ್ತವೆ. ಇದಕ್ಕೆ ಕಾರಣ ಹುಡುಕಿ ಪರಿಹಾರ ಕಂಡುಕೊಳ್ಳುವ ಕೆಲಸವಾಗಬೇಕಿದೆ ಎಂದು ತಿಳಿಸಿದರು.ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಾತನಾಡಿ, ರೈತರು ಸಾಧನೆ ಮಾಡಿದವರಿಗೆ ಸನ್ಮಾನ ಮಾಡಿ ಸೂಕ್ತ ಬಹುಮಾನ ನೀಡಿದರೆ, ಆತ್ಮಹತ್ಯಡಿಕೊಂಡ ರೈತನಿಗೆ ಪರಿಹಾರ ಸಹ ಸರ್ಕಾರ ಕೊಡುತ್ತಿದೆ ಎಂದರು.
ಜಿಲ್ಲಾಧಿಕಾರಿ ಸಂಗಪ್ಪ ಸಮ್ಮೇಳನ ಕುರಿತು ಮಾತನಾಡಿದರು. ಜಿಪಂ ಮುಖ್ಯ ಸಿಇಒ ಶಶಿಧರ ಕುರೇರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. 2024-25ನೇ ಸಾಲಿನ ಜಿಲ್ಲಾ ಮಟ್ಟದ ಶ್ರೇಷ್ಟ ಕೃಷಿಕ ಪ್ರಶಸ್ತಿ ಪಡೆದ 10 ಜನ ರೈತರನ್ನು ಸನ್ಮಾನಿಸಿ ಪ್ರಶಸ್ತಿ ನೀಡಲಾಯಿತು. ಕಾರ್ಯಕ್ರಮಕ್ಕೂ ಮಂಚೆ ಕೃಷಿ, ತೋಟಗಾರಿಕೆ ಉತ್ಪನ್ನಗಳ ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಚಾಲನೆ ನೀಡಿದರು.ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆನ್ನವರ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಮಹಾಂತೇಶ ಹಟ್ಟಿ, ಹಾಪ್ ಕಾಮ್ಸ್ನ ಅಧ್ಯಕ್ಷ ಈರಪ್ಪ ಅರಕೇರಿ, ತೋಟಗಾರಿಕೆ ವಿವಿಯ ಕುಲಪತಿ ಡಾ.ವಿಷ್ಣುವರ್ಧನ್, ಲಾಲ್‌ಬಾಗ್ ನ ತೋಟಗಾರಿಕೆ ಅಪರ ನಿರ್ದೇಶಕ ಡಾ.ಪಿ.ಎಂ. ಸೊಬರದ, ಕಪೆಕ್ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ, ಪ್ರಧಾನ ವ್ಯವಸ್ಥಾಪಕ ಎಚ್.ಕೆ. ಶಿವಕುಮಾರ, ಬೆಳಗಾವಿ ವಿಭಾಗದ ತೋಟಗಾರಿಕೆ ಜಂಟಿ ನಿರ್ದೇಶಕ ಐ.ಕೆ.ದೊಡ್ಡಮನಿ, ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ ಕಳ್ಳೇನ್ನವರ, ತೋಟಗಾರಿಕೆ ಉಪನಿರ್ದೇಶಕ ರವೀಂದ್ರ ಹಕಾಟಿ ಉಪಸ್ಥಿತರಿದ್ದರು.
₹249.28 ಕೋಟಿ ಒಡಂಬಡಿಕೆ: ತೋಟಗಾರಿಕೆ ವಿವಿಯಲ್ಲಿ ನಡೆದ ಕೃಷಿ, ತೋಟಗಾರಿಕೆ ಉತ್ಪನ್ನಗಳ ಖರೀದಿದಾರರ ಮತ್ತು ಮಾರಾಟಗಾರರ ಸಮ್ಮೇಳದಲ್ಲಿ ರೈತರು ಮತ್ತು ಖರೀದಿದಾರರ ಜೊತೆಗೆ ₹249.28 ಕೋಟಿ ಒಡಂಬಡಿಕೆ ನಡೆಯಿತು. ಅದರಲ್ಲಿ ಕೃಷಿಗೆ ಉತ್ಪನ್ನಗಳಿಗೆ ₹ 76.82 ಕೋಟಿ ಮತ್ತು ತೋಟಗಾರಿಕೆ ಉತ್ಪನ್ನಗಳಿಗೆ ಶೇ.172.46 ಕೋಟಿ ಒಡಂಬಡಿಕೆ ನಡೆಯಿತು.