ಎ.ಮಂಜು ಚಾಮುಂಡಿ ದೇಗುಲದಲ್ಲಿ ಆಣೆ ಪ್ರಮಾಣಕ್ಕೆ ಬರಲಿ

KannadaprabhaNewsNetwork |  
Published : Oct 12, 2026, 01:15 AM IST
11ಕೆಆರ್ ಎಂಎನ್ 1.ಜೆಪಿಜಿಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಕೆ.ರಾಜು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ರಾಮನಗರ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಮಾಡಿರುವ ಎಲ್ಲ ಆರೋಪಗಳು ಸತ್ಯವೆಂದು ಪ್ರಮಾಣ ಮಾಡಲು ನಾನು ಸಿದ್ಧನಿದ್ದೇನೆ. ಅದೆಲ್ಲವು ಸುಳ್ಳೆಂದು ಹೇಳುವುದಾದರೆ ಮಾಜಿ ಶಾಸಕ ಎ.ಮಂಜುನಾಥ್ ಅ.16ರಂದು ರಾಮನಗರದ ಚಾಮುಂಡೇಶ್ವರಿ ದೇವಾಲಯಕ್ಕೆ ಬಂದು ಆಣೆ ಪ್ರಮಾಣ ಮಾಡಲಿ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಕೆ.ರಾಜು ಸವಾಲು ಹಾಕಿದರು

ರಾಮನಗರ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಮಾಡಿರುವ ಎಲ್ಲ ಆರೋಪಗಳು ಸತ್ಯವೆಂದು ಪ್ರಮಾಣ ಮಾಡಲು ನಾನು ಸಿದ್ಧನಿದ್ದೇನೆ. ಅದೆಲ್ಲವು ಸುಳ್ಳೆಂದು ಹೇಳುವುದಾದರೆ ಮಾಜಿ ಶಾಸಕ ಎ.ಮಂಜುನಾಥ್ ಅ.16ರಂದು ರಾಮನಗರದ ಚಾಮುಂಡೇಶ್ವರಿ ದೇವಾಲಯಕ್ಕೆ ಬಂದು ಆಣೆ ಪ್ರಮಾಣ ಮಾಡಲಿ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಕೆ.ರಾಜು ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎ.ಮಂಜುನಾಥ್ ಚಾಮುಂಡೇಶ್ವರಿ ದೇವಾಲಯಕ್ಕೆ ಬಂದು ಕುಮಾರಸ್ವಾಮಿ ಮೇಲಿನ ಆರೋಪಗಳೆಲ್ಲವು ಸುಳ್ಳೆಂದು ಪ್ರಮಾಣ ಮಾಡಲಿ. ಇಲ್ಲದಿದ್ದರೆ ಅವರ ಬೂಟಾಟಿಕೆ ರಾಜಕೀಯ ಸಾಬೀತಾಗುತ್ತದೆ. ನಾನು ಕುಮಾರಸ್ವಾಮಿ ಕುರಿತಾಗಿ ನೀಡಿದ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವ ಧೈರ್ಯವನ್ನು ಎ.ಮಂಜುನಾಥ್ ತೋರಿಸಲಿಲ್ಲ. ಬದಲಿಗೆ ವಿಷಯಾಂತರ ಮಾಡಿ ನನಗೆ ಸಂಬಂಧಿಸದ ವಿಷಯಗಳನ್ನು ಪ್ರಸ್ತಾಪ ಮಾಡಿದ್ದಾರೆಂದು ಆರೋಪಿಸಿದರು.

ಮಂಜುನಾಥ್ ಹೇಗೆ ಬದುಕಿದ್ದಾರೊ ಗೊತ್ತಿಲ್ಲ. ಆದರೆ, ನಾನು ಶುದ್ಧ ರಾಜಕಾರಣ ಮಾಡಿದ್ದೇನೆ. ನನ್ನ ಸ್ವಂತ ಆಸ್ತಿ ಮಾರಾಟ ಮಾಡಿಕೊಂಡಿದ್ದೇನೆ. ಸಮಾಜ ಒಪ್ಪುವಂತೆ ರಾಜಕೀಯ ಜೀವನದಲ್ಲಿ ಬದುಕು ಸಾಗಿಸಿದ್ದೇನೆ. ನಾನು ಯಾರಿಗೊ ಆಪ್ತ ಸಹಾಯಕ(ಪಿಎ)ನಾಗಿ ಅಥವಾ ಬಕೆಟ್ ಹಿಡಿಯುವ ರಾಜಕಾರಣ ಮಾಡಿಲ್ಲ. ಅಂತಹ ಸಂದರ್ಭ ಎದುರಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಯೇ ಹೊರತು ಆ ರೀತಿಯ ಬದುಕು ಬಾಳುವುದಿಲ್ಲ. ಎ.ಮಂಜುನಾಥ್ ಯೋಗ್ಯತೆ ಏನೆಂದು ಎಲ್ಲರಿಗೂ ಗೊತ್ತಿದೆ. ಇನ್ನು ಮುಂದಾದರು ನನ್ನ ಯೋಗ್ಯತೆ ಬಗ್ಗೆ ತಿಳಿದು ಮಾತನಾಡಲಿ ಎಂದು ಕಿವಿಮಾತು ಹೇಳಿದರು.

ಪ್ರಗತಿಪರ ರೈತನ ಮಗನಾದ ನಾನು, 1985ರಿಂದ ಸಕ್ರಿಯ ರಾಜಕಾರಣದಲ್ಲಿದ್ದೇನೆ. ನನ್ನದೇ ಆದ ತತ್ವ ಸಿದ್ಧಾಂತಗಳನ್ನು ನಂಬಿಕೊಂಡು ರಾಜಕಾರಣ ಮಾಡುತ್ತಿದ್ದೇನೆ. ನಾನೇನು ಫುಟ್‌ಪಾತ್‌ನಿಂದ ಬಂದವನಲ್ಲ. ನಾನು ರಾಜಕಾರಣಕ್ಕೆ ಬಂದಾಗ ಎ.ಮಂಜುನಾಥ್ ಎಲ್ಲಿದ್ದರೋ ಗೊತ್ತಿಲ್ಲ. ನಾನು 1987ರಲ್ಲಿಯೇ ಪ್ರಧಾನರಾಗಿ, ತಾಲೂಕು ಜೆಡಿಎಸ್ ಅಧ್ಯಕ್ಷನಾಗಿದ್ದೆ. ಆ ಸಂದರ್ಭದಲ್ಲಿ ಮಂಜುನಾಥ್ ಎಲ್ಲಿದ್ದರೊ, ಏನು ಮಾಡುತ್ತಿದ್ದರೊ ಗೊತ್ತಿಲ್ಲ ಎಂದು ಪರೋಕ್ಷವಾಗಿ ಟೀಕಿಸಿದರು.

ಭಿಕ್ಷೆ ಬೇಡಿ ಅಧಿಕಾರ ಪಡೆದಿಲ್ಲ:

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಿರುವಾಗ ಅವರ ಬಳಿ ಅಧಿಕಾರ ಕೇಳಿಕೊಂಡು ಯಾವತ್ತು ಹೋಗಿಲ್ಲ. ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಸ್ಥಾನ ಕೊಡುವಾಗಲೂ ಪಕ್ಷದಲ್ಲಿರುವ ಹಿರಿಯರಿಗೆ ಕೊಡುವಂತೆ ನಾನೇ ಸಲಹೆ ನೀಡಿದ್ದೆ. ಏಕೆಂದರೆ ಕಾಂಗ್ರೆಸ್‌ನಲ್ಲಿ ನನಗಿಂತಲೂ ಹೆಚ್ಚಾಗಿ ದುಡಿದವರು ಇದ್ದರು.

ಅಲ್ಲದೆ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಜಿಬಿಡಿಎ)ದ ಅಧ್ಯಕ್ಷ ಸ್ಥಾನ ಬದಲಾದರೆ ಮುಂದೆ ಯಾರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂದು ನನ್ನ ಅಭಿಪ್ರಾಯ ತಿಳಿಸಿದ್ದೇನೆ. ನಾನೆಂದೂ ಭಿಕ್ಷೆ ಬೇಡಿ ರಾಜಕೀಯ ಅಧಿಕಾರ ಪಡೆದಿಲ್ಲ. ಅಧಿಕಾರಕ್ಕಾಗಿ ಬಕೆಟ್ ಹಿಡಿಯುವ ಜಾಯಮಾನ ನನ್ನದಲ್ಲ ಎಂದು ಎ.ಮಂಜುನಾಥ್ ವಿರುದ್ಧ ಕೆ.ರಾಜು ತೀವ್ರ ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿಎನ್ ಆರ್ ವೆಂಕಟೇಶ್, ಖಜಾಂಚಿ ಜಯಣ್ಣ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಚ್.ರಾಜು, ನಗರಸಭೆ ಸದಸ್ಯರಾದ ಆಯಿಷಾ ಬಾನು, ಅಣ್ಣು, ಅಸ್ಮಜ್, ದೌಲತ್, ಕಾರ್ಮಿಕ ಘಟಕದ ತಾಲೂಕು ಅಧ್ಯಕ್ಷ ದೇವರಾಜು, ಮುಖಂಡರಾದ ಕೆಂಪರಾಮು, ವಾಸು ಪುಟ್ಟಮಾಸ್ತಿಗೌಡ, ಬೈರೇಗೌಡ, ಗುರುಪ್ರಸಾದ್, ಅನಿಲ್ ಜೋಗೇಂದರ್, ಭದ್ರಯ್ಯ, ವಸಂತ, ಇನಾಯತ್, ರಘು, ನರಸಿಂಹಯ್ಯ, ಮಲ್ಲೇಗೌಡ, ದಾಸೇಗೌಡ, ಮಹೇಶ್ ಹಾಜರಿದ್ದರು.

ಬಾಕ್ಸ್ ..................

ಪ್ರೀಪ್ಲಾನ್ ಮಾಡಿ ನನ್ನ ತೇಜೋವಧೆಗೆ ಪ್ರಯತ್ನ: ಕೆ.ರಾಜು

ರಾಮನಗರ:

ವಿವೇಕಾನಂದನಗರ ಬಡಾವಣೆಯಲ್ಲಿ ಶ್ರೀ ಕೆಂಗಲ್ ಹನುಮಂತಯ್ಯ ಸ್ಪೋರ್ಟ್ಸ್ ಕ್ಲಬ್ ಒತ್ತುವರಿ ಮಾಡಿಕೊಂಡಿದ್ದ ರಾಜಕಾಲುವೆ ಮೇಲಿನ ಸ್ಲ್ಯಾಬ್‌ ತೆರವು ಕಾರ್ಯಾಚರಣೆ ವೇಳೆ ನನ್ನನ್ನು ಟಾರ್ಗೆಟ್ ಮಾಡಿ ಉದ್ದೇಶ ಪೂರ್ವಕವಾಗಿ ತೇಜೋವಧೆ ಮಾಡಲು ಪ್ರಯತ್ನಿಸಿದ್ದಾರೆ ಎಂದು ಮಾಜಿ ಶಾಸಕ ಕೆ.ರಾಜು ಆರೋಪಿಸಿದರು.

ರಾಜಕಾಲುವೆ ಮೇಲೆ ಹಾಕಿದ್ದ ಸ್ಲ್ಯಾಬ್ ತೆರವಿಗೆ ಕಾಲಾವಕಾಶ ಕೇಳಲು ಹೋಗಿದ್ದೇನೆಯೇ ಹೊರತು ಒತ್ತುವರಿ ತೆರವು ಬೆಂಬಲಿಸಲು ಅಲ್ಲ. ಆದರೆ, ಮೊದಲೇ ಪ್ರೀಪ್ಲಾನ್ ಮಾಡಿಕೊಂಡಿದ್ದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅಲ್ಲಿಗೆ ಬಂದು ನನ್ನನ್ನು ತೇಜೋವಧೆಯಾಗುವಂತೆ ಮಾಡಿ, ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ ಎಂದರು.

ರಾಜಕಾಲುವೆಯಿಂದ ಬರುವ ವಾಸನೆಯಿಂದ ಯೋಗ ಮಾಡುವವರಿಗೆ ತೊಂದರೆಯಾಗುತ್ತಿತ್ತು. ಈ ಕಾರಣಕ್ಕಾಗಿ ಕ್ಲಬ್‌ನವರು ಸ್ಲ್ಯಾಬ್ ಹಾಕಿದ್ದರು. ಇದಕ್ಕೆ ಜಿಲ್ಲಾಧಿಕಾರಿಗಳು ಮತ್ತು ನಗರಸಭೆ ಆಯುಕ್ತರು ಅಭ್ಯಂತರ ಇಲ್ಲವೆಂದು ಹೇಳಿದ್ದರು. ಕ್ಲಬ್ ಸದಸ್ಯರ ಮನವಿ ಮೇರೆಗೆ ನಾನು ಅಲ್ಲಿಗೆ ಹೋಗಿದ್ದೆ ಅಷ್ಟೇ. ಆ ಸ್ಲ್ಯಾಬ್ ಹಾಕಿರುವುದಕ್ಕು ಮತ್ತು ನನಗೂ ಯಾವುದೇ ಸಂಬಂಧ ಇಲ್ಲ. ಕ್ಲಬ್ ಹಿಂಭಾಗದ ರಾಜಕಾಲುವೆ ಮೇಲೆ ಸ್ಲ್ಯಾಬ್ ಹಾಕಿರುವುದು ಅಕ್ರಮ ಎನ್ನುವುದಾದರೆ ನಗರದಲ್ಲಿ ಹಾದು ಹೋಗಿರುವ ರಾಜಕಾಲುವೆ ಒತ್ತುವರಿಯಾಗಿ ಕಟ್ಟಡಗಳು ನಿರ್ಮಾಣಗೊಂಡಿವೆ. ಹಳೇ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಫುಟ್ ಪಾತ್ ನಲ್ಲಿ ಫುಡ್ ಸ್ಟ್ರೀಟ್ ನಿರ್ಮಾಣ ಮಾಡಲಾಗುತ್ತಿದೆ. ಇದೆಲ್ಲ ನೋಡಿಕೊಂಡು ರಾಮನಗರ ನಗರಸಭೆ ಏಕೆ ಮೌನವಾಗಿದೆ ಎಂದು ಕೆ.ರಾಜು ಪ್ರಶ್ನಿಸಿದರು.

11ಕೆಆರ್ ಎಂಎನ್ 1.ಜೆಪಿಜಿ

ರಾಮನಗರದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಕೆ.ರಾಜು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೋದಾರ್ ಶಾಲೆಯಲ್ಲಿ ಸಂಭ್ರಮದ ನವರಾತ್ರಿ ದಾಂಡಿಯಾ ಉತ್ಸವ
ಹಾಸನ ಜಿಲ್ಲೆಯಲ್ಲಿ ಜನತಾದಳ ಸಂಘಟನೆ ಬಲಪಡಿಸಲು ಮಹಿಮಾ ಪಟೇಲ್ ಸೂಚನೆ