ಮೈಸೂರು ದಸರಾ ಶಕ್ತಿ, ಅರಿವು, ಸಂಸ್ಕೃತಿ, ಸಮಾನತೆಯ ಸಂಗಮ‌: ಡಿಕೆಶಿ

KannadaprabhaNewsNetwork |  
Published : Oct 12, 2026, 01:15 AM IST
9 | Kannada Prabha

ಸಾರಾಂಶ

ವಿಜಯನಗರದ ಅರಸರು ಆರಂಭಿಸಿದ ದಸರಾ ಪರಂಪರೆಯನ್ನು ಮೈಸೂರು ಒಡೆಯರು ಮುಂದುವರಿಸಿ, ಅದರ ಸಾಂಸ್ಕೃತಿಕ ದೀಪ ಆರದಂತೆ ಕಾಪಾಡಿದರು. ಅರಸರು ದಸರಾವನ್ನು ಕೇವಲ ಪೂಜೆ ಮತ್ತು ಧಾರ್ಮಿಕ ಆಚರಣೆಗಳಿಗೆ ಸೀಮಿತಗೊಳಿಸದೆ, ಕಲೆ ಮತ್ತು ಸಂಸ್ಕೃತಿಗೆ ಪ್ರೋತ್ಸಾಹ ನೀಡುವ ವೇದಿಕೆಯನ್ನಾಗಿ ರೂಪಿಸಿದರು.

ಬಿ.ಶೇಖರ್‌ ಗೋಪಿನಾಥಂ

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ದಸರಾ ಶಕ್ತಿ, ಅರಿವು, ಸಂಸ್ಕೃತಿ ಮತ್ತು ಸಮಾನತೆಯ ನಾಲ್ಕು ಜ್ಯೋತಿಗಳ ಸಂಗಮ. ಶಕ್ತಿಯಿಂದ ಸಾಧನೆ, ಅರಿವಿನಿಂದ ಅಭಿವೃದ್ಧಿ, ಸಂಸ್ಕೃತಿಯಿಂದ ಸಮಾನತೆ, ಸಮಾನತೆಯಿಂದ ಶಾಂತಿ ಸಾಧ್ಯ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಚಾಮುಂಡಿಬೆಟ್ಟದಲ್ಲಿ ಭಾನುವಾರ ನಡೆದ ನಾಡಹಬ್ಬ ಮೈಸೂರು ದಸರಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಅಜ್ಞಾನದ ಮುಳ್ಳನ್ನು ಜ್ಞಾನದ ಮುಳ್ಳಿನಿಂದ ತೆಗೆಯುವುದು ಅಕ್ಷರ. ಅಧರ್ಮದ ಮುಳ್ಳನ್ನು ಧರ್ಮದ ಮುಳ್ಳಿನಿಂದ ತೆಗೆಯುವುದು ದಸರಾ. ದೇವರನ್ನು ದೇವಸ್ಥಾನದಲ್ಲಿ ಕಾಣುವುದು ಭಕ್ತಿಯಾದರೆ, ದೇವರನ್ನು ಮನುಷ್ಯನಲ್ಲಿ ಕಾಣುವುದು ಮಾನವೀಯತೆ ಎಂದು ಹೇಳಿದರು.

ವಿಜಯನಗರದ ಅರಸರು ಆರಂಭಿಸಿದ ದಸರಾ ಪರಂಪರೆಯನ್ನು ಮೈಸೂರು ಒಡೆಯರು ಮುಂದುವರಿಸಿ, ಅದರ ಸಾಂಸ್ಕೃತಿಕ ದೀಪ ಆರದಂತೆ ಕಾಪಾಡಿದರು. ಅರಸರು ದಸರಾವನ್ನು ಕೇವಲ ಪೂಜೆ ಮತ್ತು ಧಾರ್ಮಿಕ ಆಚರಣೆಗಳಿಗೆ ಸೀಮಿತಗೊಳಿಸದೆ, ಕಲೆ ಮತ್ತು ಸಂಸ್ಕೃತಿಗೆ ಪ್ರೋತ್ಸಾಹ ನೀಡುವ ವೇದಿಕೆಯನ್ನಾಗಿ ರೂಪಿಸಿದರು ಎಂದು ಅವರು ಸ್ಮರಿಸಿದರು.

ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವಕ್ಕೆ ದಸರಾ ಪರಿವರ್ತನೆಯಾಗಿದೆ. ಈಗ ನಡೆಯುತ್ತಿರುವುದು ಪ್ರಜಾ ದರ್ಬಾರಿನ ದಸರಾ. ಪ್ರಜಾಪ್ರಭುತ್ವದಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಮುನ್ನಡೆಯುತ್ತಿದ್ದೇವೆ. ದಸರಾ ಹಬ್ಬದ ಸಂಭ್ರಮ ಮೈಸೂರಿಗೆ ಮಾತ್ರ ಸೀಮಿತವಾಗದೆ ಇಡೀ ರಾಜ್ಯಕ್ಕೆ ಹರಡಿಕೊಂಡಿದೆ. ಮುಂದಿನ 11 ದಿನಗಳ ಕಾಲ ಮೈಸೂರಿನ ಮೂಲಕ ಭಾರತವನ್ನು ನೋಡಲಾಗುತ್ತದೆ. ಭಾರತೀಯ ಪರಂಪರೆಗೆ ಕನ್ನಡಿ ಹಿಡಿಯುವ ಈ ಮಹೋತ್ಸವ ನಾಡಿನ ಹೆಮ್ಮೆಯ ಸಂಕೇತವಾಗಿದೆ ಎಂದು ಅವರು ಹೇಳಿದರು.

ವಿಜಯನಗರದ ಅರಸರ ಕಾಲದಲ್ಲಿ ಕೋಣಗಳನ್ನು ದಸರಾಗೆ ಕರೆ ತರುವ ಪರಂಪರೆಯಿತ್ತು. ಆ ಪರಂಪರೆಯ ಸಾಂಸ್ಕೃತಿಕ ನೆನಪನ್ನು ಈ ವರ್ಷ ದಸರಾದಲ್ಲಿ ಕಂಬಳ ಆಯೋಜಿಸುವ ಮೂಲಕ ಮುಂದುವರಿಸಲಾಗಿದೆ. ಟೀಕೆಗಳನ್ನು ಎದುರಿಸಿ ಇದನ್ನು ನಡೆಸಲಾಗುತ್ತಿದೆ ಎಂದರು.

ಮುಖ್ಯಮಂತ್ರಿಯಾಗಿ ನಾಡಹಬ್ಬದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಅವಕಾಶ ದೊರೆತಿರುವುದು ತಮ್ಮ ಬದುಕಿನ ಸ್ಮರಣೀಯ ದಿನ ಹಾಗೂ ಹೊಸ ಅಧ್ಯಾಯ. ತಾಯಿ ಚಾಮುಂಡೇಶ್ವರಿ ಮತ್ತು ನಾಡಿನ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಾಲ್ಕು ಶತಮಾನಗಳಿಗೂ ಹಿಂದಿನ ಪರಂಪರೆಯನ್ನು ಹೊತ್ತ ದಸರಾ ಕಾಲಕ್ಕೆ ತಕ್ಕಂತೆ ರೂಪಾಂತರಗೊಂಡು, ನಾಡಿನ ಜನರೆಲ್ಲರೂ ಒಗ್ಗೂಡುವ ಉತ್ಸವವಾಗಿ ಬೆಳೆದಿದೆ ಎಂದು ಅವರು ತಿಳಿಸಿದರು.

ಡೊಳ್ಳು, ತಮಟೆ, ನಗಾರಿ, ವೀರಗಾಸೆ, ಕೋಲಾಟ ಮತ್ತು ಯಕ್ಷಗಾನದಂತಹ ಕಲಾಪ್ರಕಾರಗಳು ಕರ್ನಾಟಕದ ಸಂಸ್ಕೃತಿಯನ್ನು ಜೀವಂತವಾಗಿಟ್ಟಿವೆ. ಸಾವಿರಾರು ರಂಗಭೂಮಿ ಕಲಾವಿದರು, ಹಾಡುಗಾರರು ಮತ್ತು ಸಂಗೀತಗಾರರು ತಮ್ಮ ಪರಿಶ್ರಮದಿಂದ ಕಲೆಯನ್ನು ಉಳಿಸಿ ಬೆಳೆಸುತ್ತಿದ್ದಾರೆ. ಇಂತಹ ಕಲಾವಿದರಿಗೆ ದಸರಾ ದೊಡ್ಡ ವೇದಿಕೆಯಾಗಿದ್ದು, ಅವರ ಪ್ರತಿಭೆ ಅನಾವರಣಗೊಳ್ಳಲು ಅವಕಾಶ ಕಲ್ಪಿಸುತ್ತದೆ ಎಂದರು.

ಗ್ಯಾರಂಟಿ ಮೂಲಕ ಸಮಾನತೆಯ ಆಶಯ:

ತಾಯಿ ಚಾಮುಂಡೇಶ್ವರಿಯ ಪಾದಕ್ಕೆ ಗೃಹಲಕ್ಷ್ಮಿ ಯೋಜನೆಯ 2000 ಅರ್ಪಿಸಿದ ದಿನದಿಂದ ಇಂದಿಗೆ 1139 ದಿನಗಳು ಪೂರ್ಣಗೊಂಡಿವೆ. ಅಂದಿನಿಂದ ಇಂದಿನವರೆಗೂ ಜನರ ಕಲ್ಯಾಣಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಲೋಪವಿಲ್ಲದೆ ಮುಂದುವರಿಸಿಕೊಂಡು ಬರಲು ಸರ್ಕಾರ ಪ್ರಯತ್ನಿಸಿದೆ. ಗ್ಯಾರಂಟಿ ಯೋಜನೆಗಳು ಜನರ ಬದುಕಿನಲ್ಲಿ ಬದಲಾವಣೆ ತರುವ ಉದ್ದೇಶ ಹೊಂದಿವೆ. ಕೆಲವು ರಾಜ್ಯಗಳನ್ನು ಹೊರತುಪಡಿಸಿದರೆ, ಇತರ ರಾಜ್ಯಗಳು ಇಂತಹ ಯೋಜನೆಗಳನ್ನು ಜಾರಿಗೊಳಿಸಲು ಪರದಾಡುತ್ತಿವೆ ಎಂದು ಅವರು ಹೇಳಿದರು.

ಕೇಂದ್ರ ರಕ್ಷಣಾ ಸಚಿವರನ್ನು ಭೇಟಿ ಮಾಡಿ ಮೂರು ಸೈನ್ಯದ ತುಕಡಿಗಳು ದಸರಾದಲ್ಲಿ ಭಾಗವಹಿಸಲು ಮನವಿ ಮಾಡಿದ್ದೆ. ಅವರು ನನ್ನ ಮನವಿಯನ್ನು ಪುರಸ್ಕರಿಸಿದ್ದಾರೆ. ಅದಕ್ಕಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ನನ್ನ ಧನ್ಯವಾದಗಳು ಎಂದರು.

ನವದುರ್ಗೆಯರ ಆಶೀರ್ವಾದ ಸರ್ಕಾರದ ಮೇಲಿರಲಿ. ದುರ್ಗೆಯರ ಜೊತೆಗೆ ರಾಜ್ಯದ ಕೋಟ್ಯಂತರ ತಾಯಂದಿರ ಆಶೀರ್ವಾದವೂ ನಮ್ಮ ಮೇಲಿದೆ. ದೇವರ ಕೃಪೆ ಜನರ ಮೇಲಿರಲಿ, ಜನರ ಕೃಪೆ ನಮ್ಮ ಮೇಲಿರಲಿ. ದಸರಾ ಕೇವಲ ಧಾರ್ಮಿಕ ಆಚರಣೆಯಲ್ಲ, ಅದು ಪರಂಪರೆ, ಕಲೆ, ಸಂಸ್ಕೃತಿ, ಸಾಮಾಜಿಕ ಸಾಮರಸ್ಯ ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ಒಂದೆಡೆ ಸೇರಿಸುವ ಮಹೋತ್ಸವ. ಈ ಪರಂಪರೆಯನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯುವ ಮೂಲಕ ಕನ್ನಡಿಗರ ಸ್ವಾಭಿಮಾನ ಮತ್ತು ಮೈಸೂರಿನ ಸಾಂಸ್ಕೃತಿಕ ವೈಭವವನ್ನು ಜಗತ್ತಿಗೆ ಪರಿಚಯಿಸಬೇಕು ಎಂದು ಅವರು ಆಶಿಸಿದರು. ಬ್ರ್ಯಾಂಡ್ ಮೈಸೂರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಅಪಾರ

ಬ್ರ್ಯಾಂಡ್ ಮೈಸೂರು ಪರಿಕಲ್ಪನೆಗೆ ಬುನಾದಿ ಹಾಕಿದವರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಮಹತ್ವದ್ದಾಗಿದೆ. ಮೈಸೂರು ರೇಷ್ಮೆ, ಮೈಸೂರು ಸ್ಯಾಂಡಲ್ ಸೋಪು, ಮೈಸೂರು ಚಿತ್ರಕಲೆ, ಮೈಸೂರು ಪಾಕ್ ಮತ್ತು ಕನ್ನಂಬಾಡಿ ಅಣೆಕಟ್ಟಿನಂತಹ ಸಾಧನೆಗಳು ಮೈಸೂರಿನ ಹೆಸರನ್ನು ರಾಜ್ಯದ ಗಡಿಗಳಾಚೆಗೂ ಪರಿಚಯಿಸಿವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಮರಿಸಿದರು.

ಮೈಸೂರಿನ ದೊಡ್ಡ ಸಂಪತ್ತು ಅರಮನೆಗಳಷ್ಟೇ ಅಲ್ಲ. ನಗರದ ಹೆಸರಿನ ಮೇಲಿರುವ ಜನರ ನಂಬಿಕೆಯೂ ಅದರ ಪ್ರಮುಖ ಆಸ್ತಿಯಾಗಿದೆ. ಕೆಲವು ನಗರಗಳು ಯುದ್ಧ ಮತ್ತು ಹೋರಾಟಗಳಿಂದ ಬೆಳೆದರೆ, ಮೈಸೂರು ತನ್ನ ಸಂಸ್ಕೃತಿಯಿಂದ ಬೆಳೆದ ನಗರ ಎಂದರು.

ಮೈಸೂರು ರೇಷ್ಮೆ, ಶ್ರೀಗಂಧ, ಚಿತ್ರಕಲೆ, ಸಂಗೀತ ಸೇರಿದಂತೆ ಇಲ್ಲಿನ ವೈಶಿಷ್ಟ್ಯಗಳು ನಾಡಿನ ಸಾಂಸ್ಕೃತಿಕ ಗುರುತನ್ನು ರೂಪಿಸಿವೆ. ರೇಷ್ಮೆ ಉಡುಗೆಯಾಗುತ್ತದೆ, ಶ್ರೀಗಂಧ ಪರಿಮಳವಾಗುತ್ತದೆ, ಚಿತ್ರಕಲೆ ಅಲಂಕಾರವಾಗುತ್ತದೆ, ಸಂಗೀತ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಈ ಸಾಂಸ್ಕೃತಿಕ ಮತ್ತು ಅಭಿವೃದ್ಧಿಯ ಪರಂಪರೆಯನ್ನು ಮುಂದುವರಿಸಿಕೊಂಡು ಕರ್ನಾಟಕ ಇಂದು ವಿಶ್ವದ ಗಮನ ಸೆಳೆಯುತ್ತಿದೆ ಎಂದು ಹೇಳಿದರು.

ದಸರಾ ಮಗುವಿಗೆ ಬಣ್ಣಗಳ ಹಬ್ಬ, ಕಲಾವಿದನಿಗೆ ಅದ್ಭುತ ವೇದಿಕೆ, ವ್ಯಾಪಾರಿಗೆ ಉತ್ತಮ ಅವಕಾಶ ಮತ್ತು ಪ್ರವಾಸಿಗನಿಗೆ ಮರೆಯಲಾಗದ ಅನುಭವ. ಮೈಸೂರು ತನ್ನ ಸಾಂಸ್ಕೃತಿಕ ಅಸ್ಮಿತೆಯನ್ನು ಮತ್ತೊಮ್ಮೆ ಕಂಡುಕೊಳ್ಳುವ ಸಂದರ್ಭವೂ ಹೌದು. ಮೈಸೂರಿನ ಸಂಸ್ಕೃತಿ ಒಬ್ಬರಿಂದ ರೂಪುಗೊಂಡದ್ದಲ್ಲ, ರಾಜರು, ಕಲಾವಿದರು, ಕುಶಲಕರ್ಮಿಗಳು, ಸಂಗೀತಗಾರರು, ಶಿಕ್ಷಕರು ಮತ್ತು ವ್ಯಾಪಾರಿಗಳು ಸೇರಿದಂತೆ ಅನೇಕ ತಲೆಮಾರುಗಳ ಜನರ ಬೆವರಿನ ಫಲವಾಗಿದೆ.

- ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೋದಾರ್ ಶಾಲೆಯಲ್ಲಿ ಸಂಭ್ರಮದ ನವರಾತ್ರಿ ದಾಂಡಿಯಾ ಉತ್ಸವ
ಹಾಸನ ಜಿಲ್ಲೆಯಲ್ಲಿ ಜನತಾದಳ ಸಂಘಟನೆ ಬಲಪಡಿಸಲು ಮಹಿಮಾ ಪಟೇಲ್ ಸೂಚನೆ