ಆನೆಗೊಂದಿ ಪರಂಪರೆ ಮತ್ತು ಅಭಿವೃದ್ಧಿ ವಿಚಾರ ಗೋಷ್ಠಿಯಲ್ಲಿ ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ
ಎಂ.ಪ್ರಹ್ಲಾದ
(ಶಬರಿ ವೇದಿಕೆ)ಕನ್ನಡಪ್ರಭ ವಾರ್ತೆ ಕನಕಗಿರಿ
5 ಸಾವಿರ ವರ್ಷಗಳ ಇತಿಹಾಸವಿರುವ ಆನೆಗೊಂದಿಯಲ್ಲಿ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸುವ ಅಗತ್ಯವಿದೆ ಎಂದು ಇತಿಹಾಸ ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ ಹೇಳಿದರು.2024ರ ಆನೆಗೊಂದಿ ಉತ್ಸವ ನಿಮಿತ್ತ ಗಗನ್ ಮಹಲ್ ಬಳಿ ಹಮ್ಮಿಕೊಂಡಿರುವ ಆನೆಗೊಂದಿ ಪರಂಪರೆ ಮತ್ತು ಅಭಿವೃದ್ಧಿ ವಿಚಾರ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಸೋಮವಾರ ಅವರು ಮಾತನಾಡಿದರು.
ರೋಮಾಂಚನಗೊಳಿಸುವ ಸಂಸ್ಕೃತಿ ಈ ನೆಲದಲ್ಲಿದೆ. ರಾಮಾಯಣ, ಮಹಾಭಾರತದಲ್ಲಿ ಈ ಪ್ರದೇಶ ಉಲ್ಲೇಖಗೊಂಡಿದೆ. ಇಲ್ಲಿನ ಸಾಂಸ್ಕೃತಿಕ, ರಾಜಕೀಯ ದಕ್ಷಿಣ ಭಾರತದಲ್ಲಿಯೇ ಶ್ರೀಮಂತಿಕೆ ಪಡೆದಿದೆ. ಬೆಂಗಳೂರು ನಿರ್ಮಾತೃ ಕೆಂಪೇಗೌಡರು, ಚಿತ್ರದುರ್ಗದ ದೊರೆ ಮತ್ತಿ ತಿಮ್ಮಣ್ಣನು ಆನೆಗೊಂದಿ ಜೈಲಿನಲ್ಲಿ ಸೆರೆವಾಸ ಅನುಭವಿಸಿರುವ ಪ್ರಸಂಗಗಳು ನಡೆದಿವೆ ಎಂದರು.ಇನ್ನೂ ಈ ಪ್ರದೇಶದ ಸುತ್ತಮುತ್ತಲೂ ಉತ್ಖನನ ಮಾಡಿದಾಗ ಮಣ್ಣಿನ ಮಡಿಕೆಗಳು ಸಿಕ್ಕಿದ್ದು, ಆನೆಗೊಂದಿ ಕುಂಬಾರಿಕೆಗೂ ಹೆಸರುವಾಸಿಯಾಗಿತ್ತು ಎನ್ನುವುದು ಸಾಬೀತಾಗಿದೆ. ಹುಚ್ಚಪ್ಪಯ್ಯ, ಸರಸ್ವತಿ ಮಠಗಳೂ ಇವೆ. ಗಂಡುಗಲಿ ಕುಮಾರರಾಮ ಹಾಗೂ ಹಿರೇಬೆಣಕಲ್ ಶಿಲಾ ಸಮಾಧಿಗಳು, ಸಾವಿರಾರು ವರ್ಷಗಳ ಹಿಂದಿನ ಶಿಲಾ ಚಿತ್ರಗಳು ಪ್ರವಾಸಿಗರನ್ನು ವಿಸ್ಮಯಗೊಳಿಸುತ್ತಿವೆ. ಇಂತಹ ಅದ್ಭುತ ಪರಂಪರೆಯನ್ನು ಹೊಂದಿರುವ ಆನೆಗೊಂದಿ ಪ್ರದೇಶದಲ್ಲಿ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಯಾಗಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಇದಕ್ಕೂ ಮೊದಲು ಕುಮ್ಮಟದುರ್ಗ ಹಾಗೂ ವಿಜಯನಗರ ಸಾಂಸ್ಕೃತಿಕ ಪರಂಪರೆ ವಿಚಾರವಾಗಿ ಸಂಶೋಧಕ ಪವನಕುಮಾರ ಗುಂಡೂರು ಮಾತನಾಡಿ, ಜನಪದ, ಲಾವಣಿ ಪದಗಳಲ್ಲಿ ಗಂಡುಗಲಿ ಕುಮಾರರಾಮ ಜೀವಂತವಾಗಿದ್ದಾರೆ. ಕುಮಾರರಾಮನ ಕುರಿತಾದ ಜಾತ್ರೆ, ಸಂಪ್ರಾದಾಯ ಹಾಗೂ ಉತ್ಸವಗಳು ಇಂದಿಗೂ ಆಚರಣೆಯಲ್ಲಿವೆ. ಚಿತ್ರದುರ್ಗ, ಬಳ್ಳಾರಿ, ಕೊಪ್ಪಳ ಸೇರಿದಂತೆ ನಾನಾ ಕಡೆ ಕುಮಾರರಾಮನ ಕುರಿತಾದ ಸಂಪ್ರದಾಯ, ಉತ್ಸವಗಳು ನಡೆಯುತ್ತಿವೆ. ಜಾತ್ರೆಯೂ ನಡೆಯುತ್ತಿದೆ. ದೆಹಲಿಯ ಸುಲ್ತಾನರನ್ನು ಸೋಲಿಸಿ ತನ್ನ ಅಧಿಪತ್ಯವನ್ನು ಸ್ಥಾಪಿಸಿದ ಕುಮಾರರಾಮನ ಪರಾಕ್ರಮ, ವೀರತ್ವ ವರ್ಣಿಸಲು ಅಸಾಧ್ಯ. ಇಂತಹ ಶೂರನ ಚರಿತ್ರೆ ಆನೆಗೊಂದಿಗಷ್ಟೇ ಸೀಮಿತಗೊಂಡಿರುವುದು ವಿಷಾದವಾಗಿದ್ದು, ರಾಷ್ಟ್ರಮಟ್ಟದಲ್ಲಿಯೂ ಕುಮಾರರಾಮನ ಇತಿಹಾಸ ಪಸರಿಸುವಂತಾಗಬೇಕು ಎಂದರು.ನವವೃಂದಾವನ ಗಡ್ಡಿಯ ರಘುವರ್ಯರು ಹಾಗೂ ಜಯತೀರ್ಥರ ವಿಚಾರವಾಗಿ ರಾಯರಮಠ ಹಾಗೂ ಉತ್ತರಾಧಿಮಠಗಳಿಂದ ಉಂಟಾದ ಜಗಳ ನ್ಯಾಯಾಲಯದಲ್ಲಿದೆ. ಇಂತಹ ವಿಚಾರಗಳು ಸೂಕ್ಷ್ಮವಾಗಿದ್ದು, ಸಂಶೋಧನೆಗಳ ಮೂಲಕ ಈ ವಿವಾದಕ್ಕೆ ತೆರೆ ಎಳೆಯಬೇಕಾಗಿದೆ. ಎರಡೂ ಮಠದವರು ಈ ಬಗ್ಗೆ ಸಂಶೋಧನೆಗೊಳಪಡಿಸಿ ಸತ್ಯಾಂಶ ತಿಳಿಯುವಂತಾಗಬೇಕು. ವಾದ-ವಿವಾದದಿಂದ ಯಾವುದೇ ಪ್ರಯೋಜನವಿಲ್ಲ ಎಂದರಲ್ಲದೆ, ಮೋಹನದಾಸರು ಆನೆಗೊಂದಿಯಲ್ಲಿ ಜನಿಸಿದ್ದು, ವಿಜಯದಾಸರ ಶಿಷ್ಯರಾಗಿದ್ದಂತವರು. ಇವರು ಜಾತಿ ಮತ್ತು ಅಸಮಾನತೆ ವಿರುದ್ಧ ಹೋರಾಡಿದ್ದು, ತಮ್ಮ ಕಿರ್ತನೆಗಳ ಮೂಲಕ ಸಮಾಜದಲ್ಲಿ ಸಾಮರಸ್ಯ ಮೂಡಿಸಲು ರಾಯಚೂರು ಜಿಲ್ಲೆಯ ಮಾನವಿಯ ಚೀಕಲಪರವಿ ಸೇರಿದಂತೆ ಮತ್ತಿತರ ಗ್ರಾಮಗಳಲ್ಲಿ ಸಂಚರಿಸಿದ್ದಾರೆಂದು ತಿಳಿಸಿದರು.
ಪ್ರಾಧ್ಯಾಪಕ ಎಸ್. ಕರಿಗೂಳಿ ಆಶಯ ನುಡಿಗಳನ್ನಾಡಿದರು. ಶಾಸಕ ಜಿ. ಜನಾರ್ದನರೆಡ್ಡಿ ವಿಚಾರಗೋಷ್ಠಿ ಉದ್ಘಾಟಿಸಿದರು.ಆನೆಗೊಂದಿ ಗ್ರಾಪಂ ಅಧ್ಯಕ್ಷೆ ಮಹಾದೇವಿ, ಉಪಾಧ್ಯಕ್ಷೆ ಪೂರ್ಣಿಮಾ, ಪತ್ರಕರ್ತರಾದ ರಾಮಮೂರ್ತಿ ನವಲಿ, ನಾಗರಾಜ ಇಂಗಳಗಿ, ವಿಶ್ವನಾಥ ಬೆಳಗಲ್ ಮಠ, ಕರವೇ ಸಂಘಟಕರಾದ ಪಂಪಣ್ಣ ನಾಯಕ, ಅರ್ಜುನ ನಾಯಕ, ಚನ್ನಬಸವ ಜೇಕಿನ್, ರಾಮಣ್ಣ ನಾಯಕ ಬಳ್ಳಾರಿ ಸೇರಿದಂತೆ ಇತರರಿದ್ದರು.