ಕನ್ನಡಪ್ರಭ ವಾರ್ತೆ ಅಥಣಿಹೆಣ್ಣು ಶಕ್ತಿ ಸ್ವರೂಪಿಣಿಯಾಗಿದ್ದು, ಭಾರತೀಯ ಸಂಪ್ರದಾಯದಲ್ಲಿ ಪೂಜ್ಯನಿಯ ಸ್ಥಾನ ಹೊಂದಿದ್ದಾಳೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ಇಂದು ಸ್ವಾತಂತ್ರ್ಯ ಹಾಗೂ ಸಮಾನತೆ ಸಾಧಿಸಿದ್ದಾಳೆ.ಮಹಿಳೆಯರು ಇಂದು ವಿವಿಧ ಕ್ಷೇತ್ರಗಳಲ್ಲಿ ಪುರುಷರಷ್ಟೇ ಸಮಾಂತರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.ಪಟ್ಟಣದ ರಾಯಲ್ ಸಾಂಸ್ಕೃತಿಕ ಭವನದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಮಹಿಳಾ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ಸ್ಥಳೀಯ ಸಂಸ್ಥೆಗಳಲ್ಲಿ ಶೇ.50ರಷ್ಟು ಮಹಿಳೆಯರು ಆಡಳಿತ ನಡೆಸುತ್ತಿದ್ದು, ಮುಂಬರುವ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಶೇ.33 ರಷ್ಟು ಮಹಿಳೆಯರು ಆಯ್ಕೆಯಾಗಿ ರಾಜಕೀಯ ವಲಯದಲ್ಲಿ ಪ್ರವೇಶ ಮಾಡುವ ದಿನಗಳು ದೂರಿಲ್ಲ. ಇಂದು ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮೀಸಲಿರದೆ ತಂತ್ರಜ್ಞಾನ, ಆರ್ಥಿಕ, ರಾಜಕೀಯ, ರಕ್ಷಣೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಅವರ ಕೊಡುಗೆಯನ್ನು ಸ್ಮರಿಸಲು ಈ ದಿನವನ್ನು ಅವರಿಗೆ ಮೀಸಲಿರಿಸಲಾಗಿದೆ. ಅಂದು ಅವರ ಕೊಡುಗೆಯನ್ನು ನೆನೆಯುತ್ತ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ ಗೌರವಿಸುವುದರಿಂದ ಇನ್ನಷ್ಟು ಮಹಿಳೆಯರಿಗೆ ಅವರ ಸಾಧನೆ ಪ್ರೇರಣೆಯಾಗಲಿದೆ ಎಂದು ತಿಳಿಸಿದರು.ಸರ್ಕಾರಿ ಶಾಲೆ ಮತ್ತು ಖಾಸಗಿ ಶಾಲೆಗಳ ಮಧ್ಯೆ ಪೈಪೋಟಿ ನಡೆಯುತ್ತಿದೆ. ದುಬಾರಿ ವೆಚ್ಚದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ದೊರಕುತ್ತಿರುವುದು ಸಂತೋಷದ ಸಂಗತಿ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನೂಗ್ಲಿ ಮಾತನಾಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸೇವೆಯನ್ನು ಶಿಕ್ಷಕಿಯರ ಸೇವೆಯ ಕುರಿತು ಪ್ರಶಂಸೆ ವ್ಯಕ್ತಪಡಿಸಿ ರಾಜ್ಯ ಸರ್ಕಾರ ಪದವೀಧರ ಶಿಕ್ಷಕರ ಸಮಸ್ಯೆಗೆ ಮತ್ತು ಏಳನೇ ವೇತನ ಆಯೋಗ ಜಾರಿಯಾಗುವ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.ಪ್ರಾಸ್ತಾವಿಕವಾಗಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಎಂ.ಹಿರೇಮಠ ಮಾತನಾಡಿ ಮಹಿಳೆಯರು ಪ್ರತಿಯೊಂದು ರಂಗದಲ್ಲಿ ಶ್ರಮಿಸುತ್ತಿದ್ದಾರೆ. ಅನೇಕ ಮಹಿಳೆಯರು ಸಾಧನೆ ಮಾಡುವ ಮೂಲಕ ಮಹಿಳಾ ಲೋಕಕ್ಕೆ ಪ್ರೇರಣೆಯಾಗಿದ್ದಾರೆ. ದೇಶದ ಮೊದಲ ಶಿಕ್ಷಕಿ ಎನಿಸಿಕೊಂಡಿರುವ ಸಾವಿತ್ರಿಬಾಯಿ ಫುಲೆ ಅಂದಿನ ಕಾಲದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿ ಮಕ್ಕಳಿಗೆ ಶಿಕ್ಷಣವನ್ನು ನೀಡಲು ಶ್ರಮಿಸಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರನ್ನ ಗುರುತಿಸಿ ಗೌರವಿಸುವ ಉದ್ದೇಶದಿಂದ ಈ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.ಪದವೀಧರ ಶಿಕ್ಷಕರ ಸಮಸ್ಯೆಗಳಿಗೆ ಸರ್ಕಾರ ಕೂಡಲೇ ಸ್ಪಂದಿಸಬೇಕು. ಪದವಿ ಪಡೆದ ಶಿಕ್ಷಕರಿಗೆ ಬಡ್ತಿ ನೀಡಿ ಅವರಿಗೆ ಹೆಚ್ಚುವರಿ ವೇತನವನ್ನು ನೀಡಬೇಕು. ರಾಜ್ಯ ಸರ್ಕಾರ 7ನೇ ವೇತನ ಆಯೋಗವನ್ನು ಕೂಡಲೇ ಜಾರಿಗೊಳಿಸಬೇಕು. ದೈಹಿಕ ಶಿಕ್ಷಕರಿಗೆ ಬಡ್ತಿ ನೀಡಬೇಕು. ಸರ್ಕಾರಿ ಶಾಲೆಗಳಲ್ಲಿ ಸಿಪಾಯಿಗಳಿಲ್ಲ, ಶಿಕ್ಷಕರೇ ಶೌಚಾಲಯ ತೊಳೆಯುವ ಪ್ರಸಂಗ ಬಂದಿದೆ. ಡಿ ದರ್ಜೆ ನೌಕರರನ್ನು ನೇಮಿಸಬೇಕು ಸರ್ಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಚಿನ್ನಮ್ಮ ಜಂಗಮಶೆಟ್ಟಿ ಅವರ ಸ್ಮರಣಾರ್ಥ ಜಿಲ್ಲಾಮಟ್ಟದ ಅತ್ಯುತ್ತಮ ಸೇವಾರತ್ನ ಪ್ರಶಸ್ತಿಯನ್ನು ಹುಕ್ಕೇರಿ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕಿ ಅಲಕಾ ನಾಮದೇವ ಇಂಗಳೆ ಅವರಿಗೆ ನೀಡಿ ಗೌರವಿಸಲಾಯಿತು. ಇದಲ್ಲದೆ ಮಹಿಳಾ ದಿನಾಚರಣೆಯ ಕಾರ್ಯಕ್ರಮಕ್ಕೆ ದೇಣಿಗೆ ನೀಡಿದ ನಿವೃತ್ತ ಶಿಕ್ಷಕ ಜಂಗಮಶೆಟ್ಟಿ ಕುಟುಂಬದವರಿಗೆ ಸನ್ಮಾನಿಸಲಾಯಿತು. ತಾಲೂಕಿನ ವಿವಿಧ ಶಾಲೆಯ ಮಹಿಳಾ ಸಾಧಕ ಶಿಕ್ಷಕಿಯರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಈ ವೇಳೆ ಎಸ್‌ಎಸ್‌ಎಂಎಸ್ ಪ.ಪೂ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ರೇಷ್ಮಾ ಇನಾಮದಾರ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ವಿ.ಮೊರಟಗಿ, ಚಿಕ್ಕೋಡಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎಂ.ಲೋಕಣ್ಣವರ, ಕ್ಷೇತ್ರ ಸಮನ್ವಯ ಅಧಿಕಾರಿ ಗೌಡಪ್ಪ ಖೋತ, ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ರಾಮಗೊಂಡ ಪಾಟೀಲ, ದೈಹಿಕ ಶಿಕ್ಷಣ ಅಧಿಕಾರಿ ಎಂ.ಆರ್.ಹಲಸಂಗಿ, ಕಾಗವಾಡ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಸಂಕಪಾಳ ಸೇರಿದಂತೆ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಮಹಿಳಾ ವೇದಿಕೆಯ ಸದಸ್ಯರಾದ ಎಸ್.ಬಿ.ಕುಲಕರ್ಣಿ, ಎಂ.ಎಂ.ಮಿರ್ಜಿ, ಎಸ್.ವಿ.ಡವಳೇ, ಜಿ.ಜಿ.ಪವಾರ, ಭಾರತಿ ಸಂಗೊಳ್ಳಿ, ಎಸ್.ಎ.ಅಂಬಿ, ಎ.ಎ.ಕೋಳಿ, ಅಜಿತ ಕುಟಕೋಳಿ, ಮಹಾಂತೇಶ ಗೋಳಪ್ಪನವರ, ಎನ್.ಎಂ. ಹಿರೇಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಮಹಾಂತೇಶ ಗೋಳಪ್ಪನವರ ಸ್ವಾಗತಿಸಿದರು. ಎಸ್.ಜಿ. ಕುಂಬಾರ ಮತ್ತು ವಿ.ಎಸ್.ಕಂಬಾಗಿ ನಿರೂಪಿಸಿದರು. ಬಿ.ಎಲ್.ಪೂಜಾರಿ ವಂದಿಸಿದರು.