ಕನ್ನಡಪ್ರಭ ವಾರ್ತೆ ಶಿವಮೊಗ್ಗ ಗ್ರಾಮೀಣ ಪ್ರದೇಶದಲ್ಲಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಸರ್ಕಾರದ ಮೂಲಕ ನಬಾರ್ಡ್‌ಗೆ ₹195 ಕೋಟಿ ವೆಚ್ಚದ ಕ್ರಿಯಾ ಯೋಜನೆ ಸಲ್ಲಿಸಲಾಗಿದೆ ಎಂದು ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, 13 ಜಿಲ್ಲೆ, 74 ತಾಲೂಕುಗಳು, 65 ವಿಧಾನಸಭಾ ಕ್ಷೇತ್ರಗಳು, 21 ವಿಧಾನ ಪರಿಷತ್ತು ಸದಸ್ಯರು, 12 ಲೋಕಸಭಾ ಸದಸ್ಯರು, 13 ನಾಮ ನಿರ್ದೇಶಿತ ಸದಸ್ಯರನ್ನು ಮಲೆನಾಡು ಅಭಿವೃದ್ಧಿ ಮಂಡಳಿ ಒಳಗೊಂಡಿದೆ. ಮಂಡಳಿ ಮೂಲಕ ಕೆಲಸ ಮಾಡಲು ದೊಡ್ಡ ಮೊತ್ತದ ಅನುದಾನ ಬೇಕಾಗುತ್ತದೆ. ಹೀಗಾಗಿ, ಬೇರೆ ಬೇರೆ ಮೂಲಗಳಿಂದ ಹಣ ಹೊಂದಿಸುವ ಪ್ರಯತ್ನ ನಡೆದಿದೆ ಎಂದು ಮಾಹಿತಿ ನೀಡಿದರು.ಹಿಂದಿನ ಅಧ್ಯಕ್ಷ, ಸಚಿವ ಸುಧಾಕರ್ ಅವರು ₹40 ಕೋಟಿ ಕ್ರಿಯಾಯೋಜನೆ ಸಿದ್ಧಪಡಿಸಿದ್ದಾರೆ. ಈ ಬಾರಿಯ ಆಯ-ವ್ಯಯದಲ್ಲಿ ₹35 ಕೋಟಿ ಹಣ ನಿಗದಿಪಡಿಸಲಾಗಿದೆ. ಇದರ ಜೊತೆಗೆ ಇನ್ನಷ್ಟು ಸಂಪನ್ಮೂಲ ಕ್ರೋಢೀಕರಿಸುವ ಸಂಬಂಧ ಗಮನ ಹರಿಸಲಾಗುತ್ತಿದೆ. ನಬಾರ್ಡ್ ಕೂಡ ಗ್ರಾಮೀಣಾಭಿವೃದ್ಧಿ ಮೂಲ ಆಶಯ ಹೊಂದಿದೆ. ಈ ಹಿನ್ನೆಲೆ ಸರ್ಕಾರದ ಮೂಲಕ ನಬಾರ್ಡ್‌ಗೆ ₹195 ಕೋಟಿ ಮೊತ್ತದ ಆರ್ಥಿಕ ನೆರವು ಪಡೆಯುವ ಸಂಬಂಧ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ವಿವರಿಸಿದರು.
ಇದರಲ್ಲಿ ಮುಖ್ಯವಾಗಿ ದೊಡ್ಡ ತೂಗು ಸೇತುವೆ, ಮಧ್ಯಮ ಗಾತ್ರದ ತೂಗು ಸೇತುವೆ, ಸಂಪರ್ಕ ರಸ್ತೆ, ವಿಶೇಷವಾಗಿ ಚೆಕ್ ಡ್ಯಾಂ ನಿರ್ಮಾಣದ ಗುರಿಯನ್ನು ಪ್ರಸ್ತಾಪಿಸಲಾಗಿದೆ. ಜಲಸಂರಕ್ಷಣೆ ಇಂದಿನ ಆದ್ಯತೆಗಳಲ್ಲಿ ಒಂದಾಗಿದ್ದು, ಇದಕ್ಕೆ ಚೆಕ್ ಡ್ಯಾಂ ನಿರ್ಮಾಣ ದೊಡ್ಡ ಪರಿಹಾರ ಒದಗಿಸುತ್ತದೆ ಎಂದರು.ಮಲೆನಾಡಿನಲ್ಲಿ ಗಣಿಗಾರಿಕೆ ನಡೆಯುತ್ತಿದ್ದು, ಈ ಸಂಬಂಧ ಸರ್ಕಾರ ಸಂಗ್ರಹಿಸಿದ ರಾಯಲ್ಟಿ ಹಣದಲ್ಲಿ ಮಂಡಳಿಗೆ ಸ್ವಲ್ಪ ಪ್ರಮಾಣ ನೀಡಿದಲ್ಲಿ ಕಾಮಗಾರಿ ಮಾಡಲು ಸುಲಭವಾಗುತ್ತದೆ. ಮಲೆನಾಡಿನಲ್ಲಿಯೇ ಸಂಗ್ರಹಿಸಿದ ಹಣವನ್ನು ಇಲ್ಲಿನ ಅಭಿವೃದ್ಧಿಗೇ ಬಳಕೆ ಬಹಳ ಮುಖ್ಯ. ಇದರ ಜೊತೆಗೆ ಬೇರೆ ಬೇರೆ ರೀತಿಯಲ್ಲಿ ಕೂಡ ಹಣ ಹೊಂದಾಣಿಕೆ ಮತ್ತು ಬೇರೆ ಬೇರೆ ಇಲಾಖೆಗಳ ಜೊತೆ ಸಮನ್ವಯ ಸಾಧಿಸಿ, ಅಭಿವೃದ್ಧಿ ಕೆಲಸ ಮಾಡುವ ಕುರಿತು ಗಮನಹರಿಸಲಾಗುತ್ತಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ಜೊತೆ ಚರ್ಚೆ ನಡೆಸಿದ್ದು, ಇಬ್ಬರೂ ಕೂಡ ಹೆಚ್ಚಿನ ನೆರವು ನೀಡಲು ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ₹2 ಕೋಟಿ ಕ್ರಿಯಾಯೋಜನೆ ರೂಪಿಸುವಂತೆ ಶಾಸಕರಿಗೆ ಪತ್ರ ಬರೆಯಲಾಗಿದೆ ಎಂದರು.ಸುದ್ದಿಗೋಷ್ಟಿಯಲ್ಲಿ ಮಂಡಳಿ ಕಾರ್ಯದರ್ಶಿ ಎಸ್.ವೈ. ಬಸವರಾಜು, ಅಧೀನ ಕಾರ್ಯದರ್ಶಿ ಹನುಮಾನಾಯ್ಕ್, ಕಾಂಗ್ರೆಸ್ ಮುಖಂಡರಾದ ಎಂ.ಶ್ರೀಕಾಂತ್, ರಮೇಶ್ ಶೆಟ್ಟಿ, ಎಸ್.ಕೆ. ಮರಿಯಪ್ಪ ಇದ್ದರು.
- - - -ಫೋಟೋ:ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.