ನೀರಾವರಿ ತಜ್ಞ ದೇಶಪಾಂಡೆ ಹೆಸರಲ್ಲಿ ಅಧ್ಯಯನ ಕೇಂದ್ರ ಸ್ಥಾಪನೆ ಆಗಲಿ

KannadaprabhaNewsNetwork |  
Published : Oct 25, 2026, 02:15 AM IST
ದಿ. ವಿ.ವಿ. ದೇಶಪಾಂಡೆ ಅವರ ಜನ್ಮಶತಮಾನೋತ್ಸವ ಅವರ ಭಾವಚಿತ್ರಕ್ಕೆ ಮಾಜಿ ಸಚಿವ ಎಚ್‌.ಕೆ. ಪಾಟೀಲ ಪುಷ್ಪನಮನ ಸಲ್ಲಿಸಿದರು. | Kannada Prabha

ಸಾರಾಂಶ

ಉತ್ತರ ಕರ್ನಾಟಕಕ್ಕೆ ಪ್ರಮುಖ ನೀರಾವರಿ ಯೋಜನೆಗಳನ್ನು ನಿರ್ಮಿಸಿದ ಹಳಿಯಾಳ ದೇಶಪಾಂಡೆ ಕುಟುಂಬದ ವಿ.ವಿ. ದೇಶಪಾಂಡೆ ಹೆಸರಿನಲ್ಲಿ ಅಧ್ಯಯನ ಕೇಂದ್ರ ಸ್ಥಾಪನೆ ಆಗಬೇಕು.

ಧಾರವಾಡ:

ಉತ್ತರ ಕರ್ನಾಟಕಕ್ಕೆ ಪ್ರಮುಖ ನೀರಾವರಿ ಯೋಜನೆಗಳನ್ನು ನಿರ್ಮಿಸಿದ ಹಳಿಯಾಳ ದೇಶಪಾಂಡೆ ಕುಟುಂಬದ ವಿ.ವಿ. ದೇಶಪಾಂಡೆ ಹೆಸರಿನಲ್ಲಿ ಅಧ್ಯಯನ ಕೇಂದ್ರ ಸ್ಥಾಪನೆ ಆಗಬೇಕು ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಇಲ್ಲಿಯ ಆಲೂರು ಭವನದಲ್ಲಿ ವಿವಿಧ ಎಂಜಿನಿಯರ್ಸ್ ಅಸೋಸಿಯೇಷನ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ದಿ. ವಿ.ವಿ. ದೇಶಪಾಂಡೆ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿದ ಅವರು, ಘಟಪ್ರಭಾ, ಮಲಪ್ರಭಾ, ಭದ್ರಾ ಮತ್ತು ಕಾಳಿ ಸೇರಿದಂತೆ ಹಲವು ಪ್ರಮುಖ ನೀರಾವರಿ ಯೋಜನೆಗಳಲ್ಲಿ ವಿ.ವಿ. ದೇಶಪಾಂಡೆ ಅವರು ಉತ್ಕೃಷ್ಟ ಎಂಜಿನಿಯರಿಂಗ್ ಕಾರ್ಯ ನಿರ್ವಹಿಸಿದ್ದಾರೆ. ಆದರೆ, ಅವರ ಸೇವೆ ಗುರುತಿಸಲು ನಮ್ಮ ಸಮಾಜ ವಿಫಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಾನು ಸಹ ಜಲ ಸಂಪನ್ಮೂಲ ಸಚಿವ ಆಗಿದ್ದಾಗಲೂ ಗುರುತಿಸಲಾಗಲಿಲ್ಲ. ಈ ಹಿನ್ನೆಲೆಯಲ್ಲಿ ಅವರ ಕಾರ್ಯ ಮುಂದಿನ ಪೀಳಿಗೆಗೆ ದಾರಿ ದೀಪವಾಗಲು ಈಗಲಾದರೂ ಬೆಳಗಾವಿಯ ವಿಟಿಯು ಅಥವಾ ಕರ್ನಾಟಕ ವಿವಿಯಲ್ಲಿ ಅವರ ಹೆಸರಿನ ಅಧ್ಯಯನ ಕೇಂದ್ರ ಸ್ಥಾಪನೆ ಆಗಲಿ ಎಂದರು.

ಉತ್ತರ ಕರ್ನಾಟಕ ಕಟ್ಟಲು ವಿ.ವಿ. ದೇಶಪಾಂಡೆ ಪಾತ್ರ ದೊಡ್ಡದು. ಅವರ ಜೊತೆ ಸೇವೆ ಸಲ್ಲಿಸಿದ ಅಧಿಕಾರಿಗಳು ಅವರನ್ನು ಅನ್ನದಾತರು ಅಂದಿದ್ದಾರೆ. ಅದಕ್ಕಿಂತ ಹೆಚ್ಚಾಗಿ ರೈತರಿಗೆ ಅನ್ನದಾತ ಆಗಲು ಶಕ್ತಿ ನೀಡಿದ ಕೀರ್ತಿ ದೇಶಪಾಂಡೆ ಅವರಿಗೆ ಸಲ್ಲಲಿದೆ. ಅವರಿಗೆ ಆಡಳಿತ ವ್ಯವಸ್ಥೆ ಹಾಗೂ ಸಮಾಜದಿಂದ ಸಿಗಬೇಕಾದ ಗೌರವ ಸಿಗಲಿಲ್ಲ. ಇದೀಗ ಅವರ ಜನ್ಮಶತಮಾನೋತ್ಸವ ಸಮಾರಂಭ ಸ್ತುತ್ಯಾರ್ಹ ಎಂದರು.

ಪ್ರಶಸ್ತಿ ಪ್ರದಾನ:

ದೇಶಪಾಂಡೆ ಕುಟುಂಬದ ಪರವಾಗಿ ನಿವೃತ್ತ ಎಂಜಿನಿಯರ್‌ ಎಂ.ಬಿ. ಪರಪ್ಪಗೌಡರ ಅವರಿಗೆ ಜೀವಮಾನ ಪ್ರಶಸ್ತಿ ಹಾಗೂ ಸಿವಿಲ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿನ ಶ್ರೇಷ್ಠತೆ ಪ್ರಶಸ್ತಿಯನ್ನು ಜಗದೀಶ್ ನಂದಿ ಅವರಿಗೆ ಪ್ರದಾನ ಮಾಡಲಾಯಿತು.

ಸನ್ಮಾನ ನೆರವೇರಿಸಿದ ಶಾಸಕ ಅರವಿಂದ ಬೆಲ್ಲದ ಮಾತನಾಡಿ, ತಮ್ಮ ತಂದೆಯವರ ಸಾಮಾಜಿಕ ಸೇವೆ ಹಾಗೂ ಅವರ ಸ್ಮರಣೆಯಲ್ಲಿ ಡಾ. ರಾಜನ್ ದೇಶಪಾಂಡೆ ಅವರು ಎಂಜಿನಿಯರ್‌ ಕ್ಷೇತ್ರದ ಇಬ್ಬರಿಗೆ ಪ್ರಶಸ್ತಿ ನೀಡುವ ಮೂಲಕ ಪ್ರೇರಣೆ ನೀಡುತ್ತಿರುವುದು ಶ್ಲಾಘನೀಯ. ಪ್ರಸ್ತುತ ಸಮಾಜ, ಆಡಳಿತ, ರಾಜಕೀಯ ಕ್ಷೇತ್ರದಲ್ಲಿ ಈ ಹಿಂದಿದ್ದ ಪ್ರಾಮಾಣಿಕತೆ ಹಾಗೂ ಉತ್ಕೃಷ್ಟತೆ ಕಡಿಮೆ ಆಗುತ್ತಿದೆ. ಅನುದಾನ ಕೊರತೆ ಇದ್ದರೂ ಈ ಮೊದಲು ಗುಣಮಟ್ಟದ ಕಾಮಗಾರಿ ಆಗುತ್ತಿದ್ದು, ಈಗ ನೂರಾರು ಕೋಟಿ ಅನುದಾನ ಇದ್ದರೂ ಉತ್ಕೃಷ್ಟ ಎಂಜಿನಿಯರಿಂಗ್ ಕಾರ್ಯಗಳಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ವಿ.ವಿ. ದೇಶಪಾಂಡೆ ಅವರು ಈಗಿನ ಪೀಳಿಗೆಗೆ ಮಾದರಿ ಆಗಬೇಕಿದೆ ಎಂದರು.

ಇದೇ ವೇಳೆ ದೇಶಪಾಂಡೆ ಅವರೊಂದಿಗೆ ಸೇವೆ ಸಲ್ಲಿಸಿದ ಹಿರಿಯ ಎಂಜಿನಿಯರ್‌ಗಳಾದ ಜಿ.ಸಿ. ತಲ್ಲೂರು, ರಾಜಮನೆ ಬಿ.ಟಿ., ಪಿ.ಕೆ. ಜುಂಜರವಾಡ, ಎಸ್.ಎಸ್. ಬೆಳ್ಳುಂಕೆ, ಸತ್ಯನಾರಾಯಣ, ವಿ.ಎಸ್. ಚಳಗೇರಿ, ಡಾ. ವಿಜಯಾ ಹಿರೇಮಠ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ವಿ.ವಿ. ದೇಶಪಾಂಡೆ ಜೀವನ ಮತ್ತು ಸಾಧನೆ ಪರಿಚಯಿಸುವ ಆಡಿಯೋ-ವಿಶುವಲ್ ಪ್ರಸ್ತುತ ಪಡಿಸಲಾಯಿತು. ಖ್ಯಾತ ಹಿನ್ನೆಲೆ ಗಾಯಕಿ ಸಂಗೀತಾ ಕುಲಕರ್ಣಿ ಕಟ್ಟಿ ಅವರಿಂದ “ಸ್ವರ ನಮನ” ನಡೆಯಿತು. ಮುಂಬೈನ ಹಿರಿಯ ಕ್ಯಾನ್ಸರ್‌ ತಜ್ಞ ಪದ್ಮಶ್ರೀ ಡಾ. ರಮಣ್ ದೇಶಪಾಂಡೆ, ವಿವಿಧ ಎಂಜಿನಿಯರ್ಸ್‌ ಸಂಘಟನೆಗಳ ಪರವಾಗಿ ಕೆ.ಎಲ್‌. ಪಾಟೀಲ, ಎ.ಸಿ. ತಹಶೀಲ್ದಾರ, ಸಿದ್ದು ಪಾಟೀಲ, ಮಕ್ಕಳ ತಜ್ಞ ಕವನ ದೇಶಪಾಂಡೆ ಹಾಗೂ ದೇಶಪಾಂಡೆ ಕುಟುಂಬದ ಸದಸ್ಯರು ಇದ್ದರು. ಅರುಣ ಶೀಲವಂತರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹತ್ತಾರು ಕ್ಷೇತ್ರಗಳಲ್ಲಿ ಕೊಂಕಣಿಗರ ಛಾಪು: ಫಾ. ಥಾಮಸ್ ಫರ್ನಾಂಡೀಸ್
ಬೇಡ್ತಿ- ಅಘನಾಶಿನಿ ತಿರುವು ಯೋಜನೆ ವಿರೋಧಿಸಿ ನವೆಂಬರ್ 3ರಂದು ಹೆದ್ದಾರಿ ತಡೆ