ವ್ಯಕ್ತಿತ್ವ ಲಾಂಛನವಾಗಿ ಸಾಧನೆ ಘರ್ಜಿಸಲಿ: ಡಾ. ಮಂಜುನಾಥ್‌

KannadaprabhaNewsNetwork | Published : Feb 22, 2024 1:47 AM

ಸಾರಾಂಶ

ರೈತ ಸಭಾಂಗಣದಲ್ಲಿ ನಡೆದ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರ ೭೯ನೇ ಜಯಂತ್ಯುತ್ಸವ

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರತಿಯೊಬ್ಬರೂ ತಮ್ಮ ವ್ಯಕ್ತಿತ್ವವನ್ನು ಲಾಂಛನವಾಗಿಸಿಕೊಂಡು ಸಾಧನೆ ಘರ್ಜಿಸುವಂತೆ ಮಾಡಿಕೊಳ್ಳಬೇಕು ಎಂದು ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಅಭಿಪ್ರಾಯಪಟ್ಟರು. ನಗರದ ರೈತ ಸಭಾಂಗಣದಲ್ಲಿ ಬುಧವಾರ ಒಕ್ಕಲಿಗರ ಸೇವಾ ಟ್ರಸ್ಟ್, ಜಿಲ್ಲಾ ಒಕ್ಕಲಿಗರ ಸಂಘದ ಸಂಯುಕ್ತಾಶ್ರಯದಲ್ಲಿ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರ ೭೯ನೇ ಜಯಂತ್ಯುತ್ಸವ ಮತ್ತು ಪಟ್ಟಾಭಿಷೇಕದ ಸುವರ್ಣ ಮಹೊತ್ಸವ, ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಪಟ್ಟಾಭಿಷೇಕ ದಶಮಾನೋತ್ಸವ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಕಣ್ಣಿನಿಂದ ಬಡತನವನ್ನು ನೋಡುವುದು ಶ್ರೇಷ್ಠತನ. ಕೆಲವೊಮ್ಮೆ ಬಡವರಿಗೆ ಸೇವೆ ಮಾಡುವ ಸಮಯದಲ್ಲಿ ಕಾನೂನುಗಳು ಅಡ್ಡಿಯಾಗುವುದು ಸಹಜ. ಆದರೆ, ಬಡವರ ಕಣ್ಣಿನಲ್ಲಿ ಕಾಣುವ ನೋವು, ಸಂಕಟಗಳನ್ನು ಅರ್ಥೈಸಿಕೊಂಡು ಸ್ಪಂದಿಸುವ ಗುಣ ಮುಖ್ಯ. ಆ ರೀತಿಯಲ್ಲಿ ಸಮಾಜವನ್ನು ನೋಡುವ, ಬದಲಾವಣೆಯನ್ನು ತರುವ ಮನಸ್ಸುಗಳು ಹುಟ್ಟಬೇಕು ಎಂದು ಹೇಳಿದರು.ಶಿಕ್ಷಣದ ಜೊತೆಗೆ ಸಂಸ್ಕಾರ ಬಹಳ ಮುಖ್ಯ. ಸ್ವಾತಂತ್ರ್ಯ ಪೂರ್ವದಲ್ಲಿ ದೇಶದಲ್ಲಿ ಶೇ.೩೦ರಷ್ಟು ಸಾಕ್ಷರತೆ ಇತ್ತು. ಈಗ ಶೇ.೮೦ರಷ್ಟು ಸಾಕ್ಷರತೆ ಇದ್ದರೂ ಸಂಸ್ಕಾರ ಕಡಿಮೆಯಾಗಿದೆ. ಸಾಕ್ಷರತೆ ಹೆಚ್ಚಿದಂತೆ ಸಂಸ್ಕಾರ ಕ್ಷೀಣಿಸುತ್ತಿರುವುದು ವಿಪರ್ಯಾಸದ ಸಂಗತಿ ಎಂದರು. ವಿಮಾನದಲ್ಲಿ ಕುಳಿತು ಭಾರತವನ್ನು ನೋಡಿದಾಗ ಬಹಳ ಸುಂದರವಾಗಿ ಕಾಣುತ್ತದೆ. ನಿಜವಾದ ಭಾರತವನ್ನು ಅರ್ಥ ಮಾಡಿಕೊಳ್ಳಬೇಕಾದರೆ ರೈಲಿನಲ್ಲಿ ಪ್ರಯಾಣಿಸಬೇಕು. ಆಗ ರೈಲಿನ ಎರಡು ಹಳಿಗಳ ನಡುವೆ ಜನರಲ್ಲಿರುವ ಬಡತನ, ಅವರು ಎದುರಿಸುತ್ತಿರುವ ಸಮಸ್ಯೆಗಳು, ಸಂಕಷ್ಟಗಳು, ಶೌಚಾಲಯ ಕೊರತೆ ಎಲ್ಲವನ್ನೂ ಕಾಣುತ್ತೇವೆ. ಹಾಗಾಗಿ ರೈಲಿನ ಭಾರತಕ್ಕೆ ನಮ್ಮ ತುಡಿತವಿರಬೇಕೇಂದರು. ಅವಿಭಕ್ತ ಕುಟುಂಬಗಳು ಒಡೆಯುತ್ತಿರುವುದೇ ಸಮಸ್ಯೆಗಳು, ರೋಗಗಳಿಗೆ ಮೂಲ ಕಾರಣವಾಗಿದೆ. ಗ್ರಾಮೀಣ ಭಾಗದಿಂದ ಹಲವಾರು ಜನರು ನಗರಗಳಿಗೆ ವಲಸೆ ಬರುತ್ತಿದ್ದಾರೆ. ನಗರಗಳಲ್ಲಿ ವಾಸ ಮಾಡುವುದೇ ಆರೋಗ್ಯಕ್ಕೆ ಹೆಚ್ಚು ಹಾನಿಕರವಾಗಿದೆ. ಹಳ್ಳಿಗಳಲ್ಲಿರುವ ಜನರು ಆರೋಗ್ಯವಂತರಾಗಿ, ಸಂತೃಪ್ತಿಯ ಜೀವನ ನಡೆಸುತ್ತಿದ್ದಾರೆ. ನನ್ನ ಸೇವಾವಧಿಯಲ್ಲಿ ಬಡವರು, ರೈತರೇ ನನ್ನ ವಿಐಪಿಗಳಾಗಿದ್ದರು. ಅವರ ನೋವಿಗೆ ಮಿಡಿಯುವುದೇ ನನ್ನ ಮೊದಲ ಆದ್ಯತೆಯಾಗಿದ್ದಾಗಿ ತಿಳಿಸಿದರು.

ನಾವು ಬೇರೆಯವರ ಹೃದಯವನ್ನು ಗೆದ್ದು, ಮತ್ಸರವನ್ನು ತ್ಯಜಿಸಿ, ಪ್ರೀತಿಯನ್ನು ಹಂಚಬೇಕು. ಸರಳತೆಯಿಂದ ನಮಗೆ ಸಮಾಜದಲ್ಲಿ ಗೌರವ ಸಿಗುತ್ತದೆಯೇ ವಿನಃ ಸಂಪತ್ತಿನಿಂದಲ್ಲ. ಆದರೆ, ಇಂದು ಸಂಬಂಧಗಳು ಸಂಪತ್ತನ್ನು ಹುಡುಕಿಕೊಂಡು ಹೊರಟಿವೆ. ನಾವು ಯಾರ ಜೊತೆಯಲ್ಲಿ ಸಂಪರ್ಕ ಇಟ್ಟುಕೊಳ್ಳುತ್ತೇವೆಯೋ ಅವರಂತೆಯೇ ನಮ್ಮ ಆಲೋಚನೆಗಳಿರುತ್ತವೆ ಎಂದ ಡಾ.ಮಂಜುನಾಥ್, ಸತ್ಯಕ್ಕೆ ಸಾಕ್ಷಿ ಕೇಳುವ ಕಾಲದಲ್ಲಿ ನಾವಿದ್ದೇವೆ. ನಾಲಿಗೆಗೆ ಆದ ಗಾಯ ಮಾಯುತ್ತದೆ. ಆದರೆ ನಾಲಿಗೆಯಿಂದ ಆಗುವ ನೋವು ಎಂದಿಗೂ ಮಾಯುವುದಿಲ್ಲ ಎಂದು ನುಡಿದರು.

ಸಾಧನೆಗೆ ದೊಡ್ಡ ಸಾಧನೆಯೇ ಮಾಡಬೇಕೆಂದೇನಿಲ್ಲ. ಬೇರೆಯವರ ನೆನಪಿನಲ್ಲಿ ಉಳಿಯುವಂತಹ ಸಣ್ಣ ಕೆಲಸಗಳೂ ಕೂಡ ಸಾಧನೆಯೇ. ದೊಡ್ಡ ಹುದ್ದೆಯಲ್ಲಿರುವವರು ಸಣ್ಣ ಕೆಲಸ ಮಾಡಿರುವುದುಂಟು. ಹಾಗೆಯೇ ಸಣ್ಣವರಾಗಿದ್ದುಕೊಂಡು ದೊಡ್ಡ ಸಾಧನೆ ಮಾಡಿದವರೂ ನಮ್ಮೊಂದಿಗಿದ್ದಾರೆ. ಹಾಗಾಗಿ ವ್ಯಕ್ತಿಗಿಂತ ವ್ಯಕ್ತಿತ್ವಕ್ಕೆ ಪ್ರಾಮುಖ್ಯತೆ, ಗೌರವ ಹೆಚ್ಚು ಎಂದು ತಿಳಿಸಿದರು.

ಸಮಾಜದಲ್ಲಿ ನಮಗೆ ಸಿಗುವ ಸನ್ಮಾನಗಳು, ಪ್ರಶಸ್ತಿಗಳು ಮೌನವಾಗಿರಬೇಕು. ಸಾಧನೆಗಳು ಮಾತನಾಡಬೇಕು. ಆಗ ಎಲ್ಲರ ಜೀವನ ಪರಿಪೂರ್ಣಗೊಳ್ಳಲು ಸಾಧ್ಯ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ಮಾಡಿದರೆ ಯಾವುದೇ ದೇವಸ್ಥಾನಗಳಿಗೂ ಹೋಗಬೇಕಿಲ್ಲ. ಧರ್ಮಗ್ರಂಥಗಳನ್ನೂ ಓದಬೇಕಿಲ್ಲ. ದೇವರು ಸದಾ ನಿಮ್ಮಲ್ಲೇ ಇರುತ್ತಾನೆ. ನಾವು ಸೋತರೂ, ಸಾಧಿಸದಿದ್ದರೂ ಸತ್ಯವನ್ನೇ ಹೇಳಬೇಕು ಎಂದು ಕಿವಿಮಾತು ಹೇಳಿದರು.

ಸಂಸದೆ ಸುಮಲತಾ ಅಂಬರೀಶ್ ಮಾತನಾಡಿ, ಡಾ.ಬಾಲಗಂಗಾಧರನಾಥ ಸ್ವಾಮೀಜಿ ಮತ್ತು ಅಂಬರೀಶ್ ನಡುವಿನ ಬಾಂಧವ್ಯ ಉತ್ತಮವಾಗಿತ್ತು. ೩೦ ವರ್ಷಗಳ ಹಿಂದೆ ನಡೆದ ಒಕ್ಕಲಿಗರ ರ್ಯಾಲಿಯ ನೇತೃತ್ವವನ್ನು ಅಂಬರೀಶ್‌ಗೆ ಕೊಟ್ಟಿದ್ದರು. ಮಗನ ಹುಟ್ಟುಹಬ್ಬ ಹಾಗೂ ಅಂಬರೀಶ್ ಷಷ್ಠಿಪೂರ್ತಿ ಸಮಾರಂಭಕ್ಕೂ ಬಂದು ಆಶೀರ್ವದಿಸಿದ್ದರು ಎಂದರು. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರೊಂದಿಗೂ ಅಂಬರೀಶ್ ಅದೇ ಬಾಂಧವ್ಯ ಹೊಂದಿದ್ದರು. ಈಗಲೂ ಶ್ರೀಮಠದ ಮೇಲೆ ಅಭಿಮಾನ, ಗೌರವ, ಪ್ರೀತಿ ಮುಂದುವರೆದಿದೆ. ೧೦ ಲಕ್ಷ ರು. ಹಣವನ್ನು ಸಂಸದರ ನಿಧಿಯಿಂದ ಕೊಟ್ಟು ಬ್ರೈಲ್ ಲಿಪಿ ಸೆಂಟರ್ ಕೊಟ್ಟಿದ್ದೇನೆ ಎಂದು ಹೇಳಿದರು.ಡಾ.ಸಿ.ಎನ್.ಮಂಜುನಾಥ್ ತುಂಬಾ ಸಂಸ್ಕಾವಂತ ವ್ಯಕ್ತಿ. ಎಲ್ಲರೂ ಅವರನ್ನು ಪ್ರೀತಿ, ಗೌರವ, ಅಭಿಮಾನಗಳಿಂದ ಕಾಣುತ್ತಾರೆ. ಸರ್ಕಾರಿ ಆಸ್ಪತ್ರೆಯನ್ನು ಯಾವುದೇ ಖಾಸಗಿ ಆಸ್ಪತ್ರೆಗೂ ಕಡಿಮೆ ಇಲ್ಲದಂತೆ ಬೆಳೆಸಿ ಅಪೂರ್ವ ಸೇವೆ ಸಲ್ಲಿಸಿದ್ದಾಆರೆ. ಅವರ ಅವಧಿ ಮುಗಿದಿರುವುದು ಎಲ್ಲರಿಗೂ ಬೇಸರ ಉಂಟುಮಾಡಿದೆ. ಇಂತಹ ಮಾರ್ಗದರ್ಶಕರ ಸೇವೆ ಎಲ್ಲರಿಗೂ ಸಿಗಬೇಕು.ಇತರೆ ವೈದ್ಯರಿಗೆ ಮಾದರಿಯಾಗಬೇಕು ಎಂದು ಹೇಳಿದರು.

ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ, ಶಾಸಕ ಪಿ.ರವಿಕುಮಾರ್, ಡಾ.ಸಿ.ಎನ್.ಮಂಜುನಾಥ್ ಅವರ ಪತ್ನಿ ಅನಸೂಯಮ್ಮ, ಡೀಸಿ ಡಾ.ಕುಮಾರ, ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್. ಎಡಿಸಿ ಡಾ.ಹೆಚ್.ಎಲ್.ನಾಗರಾಜು, ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ವೆಂಕಟರಮಣೇಗೌಡ, ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ, ರಾಜ್ಯ ಕುಕ್ಕುಟ ಮಹಾಮಂಡಳಿ ಅಧ್ಯಕ್ಷ ಮೂಡ್ಯ ಚಂದ್ರು, ಮನ್‌ಮುಲ್ ಮಾಜಿ ನಿರ್ದೇಶಕ ನೆಲ್ಲೀಗೆರೆ ಬಾಲು, ಮೈಸೂರು ಜಯದೇವ ಹೃದ್ರೋಗ ಸಂಸ್ಥೆಯ ಡಾ.ಸದಾನಂದಗೌಡ, ಒಕ್ಕಲಿಗರ ಸೇವಾ ಟ್ರಸ್ಟ್ ಅಧ್ಯಕ್ಷ ಬಸವೇಗೌಡ, ಪದಾಧಿಕಾರಿಗಳಾದ ರಮೇಶ್, ಬಸವರಾಜೇಗೌಡ, ಕೆ.ಸಿ.ರವೀಂದ್ರ, ಶಾಂತಾ, ಜ್ಯೋತಿ, ಸುಜಾತ, ಕೃಷ್ಣ, ಚಿಕ್ಕೋನಹಳ್ಳಿ ತಮ್ಮಣ್ಣಗೌಡ ಮತ್ತಿತರರಿದ್ದರು.

ಒಮ್ಮೊಮ್ಮೆ ಸಾಧನೆ ಮಾಡುವುದೇ ಸಮಸ್ಯೆಯಾಗುತ್ತಿದೆ ಅನ್ನಿಸುತ್ತೆ. ಅದೇ ಭಾರವಾಗಿ ನಮ್ಮನ್ನು ಕಾಡಿರುವುದೂ ಉಂಟು. ಬಿಪಿಎಲ್ ಕಾರ್ಡ್ ಇದ್ದರೇ ಉಚಿತ ಚಿಕಿತ್ಸೆ ಸಿಗಲಿದೆ. ಆದರೆ, ಬಿಪಿಎಲ್ ಕಾರ್ಡ್ ಪಡೆದವರಲ್ಲಿ ಶೇ.30ರಷ್ಟು ಶ್ರೀಮಂತರ ಪಾಲಾಗಿದೆ. ಬಿಪಿಎಲ್ ಕಾರ್ಡ್ ನಲ್ಲಿ ಕೆಲವರ ಹೆಸರೇ ಇರೋದಿಲ್ಲ. ಆದರೂ ನಾವೂ ಕಣ್ಣಿನಿಂದ ಬಡವರನ್ನು ಗುರುತಿಸಿ ಚಿಕಿತ್ಸೆ ಕೊಟ್ಟಿದ್ದೇವೆ. ಇದೇ ನಮಗೆ ಸಮಸ್ಯೆಯಾಗುತ್ತಿದೆ. ಅಧಿಕಾರಿಗಳಿಗೆ ಕಡತಗಳು ಕಾಣುತ್ತೆ, ಅವರಿಗೆ ರೋಗಿಗಳು ಕಾಣುವುದಿಲ್ಲ. ಡಾ.ಸಿ.ಎನ್‌.ಮಂಜುನಾಥ್‌, ಖ್ಯಾತ ಹೃದ್ರೋಗ ತಜ್ಞರು.

ಆದಿಚುಂಚನಗಿರಿ ಮಠ ಒಕ್ಕಲಿಗರಿಗೆ ಸೀಮಿತವಾಗಿಲ್ಲ: ಡಾ.ಎಚ್.ಎಲ್.ನಾಗರಾಜು

ಮಂಡ್ಯ: ಆದಿಚುಂಚನಗಿರಿ ಮಠ ಒಕ್ಕಲಿಗರಿಗೆ ಸೀಮಿತವಾದ ಮಠವಲ್ಲ. ಬಾಲಗಂಗಾಧರನಾಥ ಸ್ವಾಮೀಜಿಯವರು ಒಕ್ಕಲಿಗರಿಗಾಗಿಯೇ ಮಠವನ್ನು ಕಟ್ಟಲಿಲ್ಲ. ಶ್ರೀ ಮಠ ಎಲ್ಲ ಶೂದ್ರ ಸಮುದಾಯದವರನ್ನು ಒಳಗೊಂಡಿರಬೇಕೆಂಬ ಪರಿಕಲ್ಪನೆ ಅವರಲ್ಲಿತ್ತು ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್. ನಾಗರಾಜು ಹೇಳಿದರು.ನಗರದ ರೈತಸಭಾಂಗಣದಲ್ಲಿ ನಡೆದ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಜಯಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿ, ಶ್ರೀಮಠದಲ್ಲಿ ಒಕ್ಕಲಿಗ ವಿದ್ಯಾರ್ಥಿಗಳು ಮಾತ್ರ ಓದುತ್ತಿಲ್ಲ. ಒಕ್ಕಲಿಗ ಜನಾಂಗದವರು ಮಾತ್ರ ಬರುತ್ತಿಲ್ಲ. ಜಾತಿಯನ್ನು ಬದಿಗಿಟ್ಟು ಎಲ್ಲರನ್ನೂ ಒಳಗೆ ಕರೆದುಕೊಳ್ಳುತ್ತಿದೆ. ಅದೊಂದು ವಿಶ್ವಮಾನವ ಮಠವಾಗಿದೆ. ಎಲ್ಲ ಜಾತಿಯ ಮನಸ್ಸುಗಳನ್ನು ಕಟ್ಟಿಕೊಟ್ಟು, ವೈಜ್ಞಾನಿಕ ಚಿಂತನೆಯೊಂದಿಗೆ ಮಠವನ್ನು ಬೆಳೆಸಬೇಕೆನ್ನುವುದು ಬಾಲಗಂಗಾಧರನಾಥ ಸ್ವಾಮೀಜಿಯವರ ಗುರಿಯಾಗಿತ್ತು ಎಂದು ತಿಳಿಸಿದರು. ಜಗತ್ತಿನ ಎಲ್ಲ ಭಾಗದಲ್ಲೂ ಮಣ್ಣಿನ ಗುಣ, ಋಣ ತೀರಿಸುವ ಕೆಲಸ ಮಾಡಿರುವ ಡಾ. ಬಾಲಗಂಗಾಧರನಾಥ ಸ್ವಾಮೀಜಿ ವಿಶ್ವದ ಮೊದಲ ಶೂದ್ರ ಸನ್ಯಾಸಿಯಾಗಿದ್ದಾರೆ. ಜಾತಿ ಮುಕ್ತ ಭಾರತ ಹಾಗೂ ಮನಸ್ಸನ್ನು ಕಟ್ಟಲು ಸಮಾಜವನ್ನು ಪರಿವರ್ತಿಸುವ ಮನಸ್ಸುಗಳು ಹುಟ್ಟಬೇಕು. ನಾವು ವಿಶ್ವಮಾನವ ಪ್ರಜ್ಞೆಯತ್ತ ಸಾಗಬೇಕು. ಎಲ್ಲರನ್ನೂ ಕಟ್ಟಿಕೊಂಡು ಮುನ್ನಡೆಯಬೇಕು ಎಂದರು. ನಿಜವಾದ ತ್ಯಾಗಿಗಳು ಮುಕ್ತಿಗೆ ಅರ್ಹರು: ಚುಂಚಶ್ರೀ

ಮಂಡ್ಯ: ಸಮಾಜಕ್ಕೆ ತ್ಯಾಗ ಮನೋಭಾವದಿಂದ ಸೇವೆ ಸಲ್ಲಿಸಿದವರು ಮಾತ್ರ ಮುಕ್ತಿಗೆ ಅರ್ಹರು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.ನಗರದ ರೈತ ಸಭಾಂಗಣದಲ್ಲಿ ನಡೆದ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಜಯಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿ, ಮಾನವಿಯ ಮೌಲ್ಯಗಳು, ತ್ಯಾಗ ಮನೋಭಾವ ಕಣ್ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಮಕ್ಕಳಲ್ಲಿ ಆ ಗುಣಗಳನ್ನು ಬೆಳೆಸುವ ಅಗತ್ಯವಿದೆ. ಸಂಕಷ್ಟದಲ್ಲಿರುವವರ ನೋವಿಗೆ ತುಡಿಯುವಂತಹ ಮನಸ್ಸುಗಳು ಸೃಷ್ಟಿಯಾದಾಗ ಸಮಾಜದಲ್ಲಿ ಸುಧಾರಣೆ ಕಾಣುವುದಕ್ಕೆ ಸಾಧ್ಯವಾಗಲಿದೆ ಎಂದು ನುಡಿದರು.

ಅಂತಃಕರಣ ಶುದ್ಧವಾಗಿಟ್ಟುಕೊಂಡು ಮಾಡುವ ಕಾರ್ಯದಲ್ಲಿ ನಿಸ್ವಾರ್ಥವಿರುತ್ತದೆ. ಅಂತಹ ಕೆಲಸಗಳು ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುತ್ತವೆ. ವೈದ್ಯಲೋಕದಲ್ಲಿರುವ ವೈದ್ಯರಿಗೆ ಡಾ.ಸಿ.ಎನ್. ಮಂಜುನಾಥ್ ಮಾದರಿಯಾಗಿದ್ದಾರೆ. ಅವರಂತೆಯೇ ಬಡವರ ಕಣ್ಣೀರನ್ನು ಒರೆಸುವ ಮನಸ್ಸುಗಳು ಹೆಚ್ಚಾದಾಗ ಆರೋಗ್ಯವಂತ ಸಮಾಜವನ್ನು ಕಾಣಬಹುದು ಎಂದರು.

Share this article