ಮಲೆನಾಡಿನ ರೈತರ ಬದುಕಿಗೆ ಕೃಷಿ ವಿವಿ ಬೆಳಕಾಗಲಿ: ಮಾಜಿ ಸಚಿವ ಕಾಗೋಡು ತಿಮ್ಮಪ್ಪ

KannadaprabhaNewsNetwork | Published : Aug 12, 2024 1:05 AM

ಸಾರಾಂಶ

ರಾಜ್ಯಮಟ್ಟದ ಕಾಯಕ ರತ್ನ ಪ್ರಶಸ್ತಿ ಪುರಸ್ಕೃತ ಮಾಜಿ ಸಚಿವ ಕಾಗೋಡು ತಿಮ್ಮಪ್ಪರಿಗೆ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನಿಂದ ಅಭಿನಂದಿಸಲಾಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕೃಷಿ ವಿಶ್ವವಿದ್ಯಾಲಯ ಮಲೆನಾಡಿನ ರೈತರ ಬದುಕಿಗೆ ಬೆಳಕಾಗುವಂತಾಗಬೇಕು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ನಮ್ಮ ನಡೆ ವಿಜ್ಞಾನ ದಡೆ ಎಂಬ ಕಾರ್ಯಕ್ರಮದಲ್ಲಿ ಕಾಯಕ ರತ್ನ ಪ್ರಶಸ್ತಿ ಪಡೆದ ಕಾಗೋಡು ತಿಮ್ಮಪ್ಪನವರು ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ರೈತರಿಗೆ ಅತ್ಯವಶ್ಯಕತೆ ಆಗಿರುವಂತಹ ಬೀಜ, ಗೊಬ್ಬರ ಬಳಕೆ ಬಗ್ಗೆ ಹಾಗೂ ಇತರೆ ಪರ್ಯಾಯ ಬೆಳೆ ಬೆಳೆಯುವ ಬಗ್ಗೆ ರೈತರಿಗೆ ಮಾರ್ಗದರ್ಶನ ನೀಡಬೇಕು. ಸಂಕಷ್ಟದಲ್ಲಿ ಇರುವಂತಹ ಮಲೆನಾಡಿನ ರೈತರಿಗೆ ಇರುವಕ್ಕಿ ಕೃಷಿ ವಿಶ್ವವಿದ್ಯಾನಿಲಯ ಹೊಸ ದಾರಿ ತೋರಿಸುವ ನಿಟ್ಟಿನಲ್ಲಿ ರಾಜ್ಯದಲ್ಲೇ ಅತ್ಯುತ್ತಮ ಶ್ರೇಷ್ಠ ವಿಶ್ವವಿದ್ಯಾನಿಲಯವಾಗಿ ಹೊರಹೊಮ್ಮಬೇಕು. ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ನನ್ನ ಕಾಯಕ ಗುರುತಿಸಿ ರಾಜ್ಯಮಟ್ಟದ ಕಾಯಕ ರತ್ನ ಪ್ರಶಸ್ತಿ ನೀಡಿದ್ದು ತುಂಬಾ ಸಂತೋಷ ತಂದಿದೆ. ಈ ಪ್ರಶಸ್ತಿ ಮಲೆನಾಡಿನಲ್ಲಿ ಕಾಯಕ ಮಾಡುವ ರೈತರಿಗೆ ಸಮರ್ಪಿಸುತ್ತೇನೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಗೋಪಾಲಕೃಷ್ಣ ಬೇಳೂರು, ಕಾಗೋಡು ಹೋರಾಟದ ಮೂಲಕ ಜನಸಾಮಾನ್ಯರ, ರೈತರ ಬಗ್ಗೆ ಅಪಾರ ಕಾಳಜಿ ಹೊಂದಿರುವಂತ ರಾಜ್ಯದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಬಡವರ ಧ್ವನಿಯಾಗಿ ಭೂಮಿ ಕೊಡಿಸುವಲ್ಲಿ ಕ್ಷಮಿಸಿದಂತಹ ಶ್ರೇಷ್ಠ ವ್ಯಕ್ತಿ ಕಾಗೋಡು ತಿಮ್ಮಪ್ಪ. ಇಂತಹ ವ್ಯಕ್ತಿಗೆ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಿಗಳ ಸಂಸ್ಥೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಬೇಕು ಎಂದು ಒತ್ತಾಯಿಸಿದರು. ತಿಮ್ಮಪ್ಪನವರು ಹೋರಾಟದ ಮೂಲಕ ರಾಜಕಾರಣಕ್ಕೆ ಬಂದಂತಹ ವ್ಯಕ್ತಿ. ಆದರೆ ನಾವು ಅವರ ಆದರ್ಶ ತತ್ವ ಪಾಲಿಸಿ ಜನರ ಪ್ರೀತಿ ಆಶೀರ್ವಾದದಿಂದ ರಾಜಕಾರಣಕ್ಕೆ ಬಂದಿದ್ದೇವೆ. 92ರ ಹರಯದಲ್ಲಿಯೂ ರೈತರ ಬಗ್ಗೆ ಕಾಳಜಿ ವಹಿಸಿರುವಂತಹ ಅಪರೂಪದ ವ್ಯಕ್ತಿ ಕಾಗೋಡು ತಿಮ್ಮಪ್ಪ ಇವರ ಆದರ್ಶವನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಡಾ.ಹುಲಿಕಲ್ ನಟರಾಜ್ ಮಾತನಾಡಿ, ನಮ್ಮ ಹಿರಿಯರ ಆದರ್ಶ ವಿಚಾರ ಪಾಲಿಸ ಬೇಕಾದದ್ದು ನಮ್ಮ ಧರ್ಮ. ಮನಸು ಮನಸು ಕಟ್ಟುವ ಕೆಲಸವಾಗಬೇಕಾಗಿದೆ. ವಿವಿಧ ತಂತ್ರಜ್ಞಾನದ ಬಳಕೆಗಳಿಂದ ಮನುಷ್ಯರ ನಡುವಿನ ಬಾಂಧವ್ಯ ಕಳೆದುಕೊಳ್ಳುತ್ತಿವೆ. ಮನುಷ್ಯನ ಸಂಬಂಧ ಗಟ್ಟಿಗೊಳಿಸುವ ಕಾಯಕವಾಗಬೇಕಾಗಿದೆ. ರಾಜಕಾರಣಿ ಹಿರಿಯ ಮುತ್ಸುದಿ ಕಾಗೋಡು ತಿಮ್ಮಪ್ಪನವರಿಗೆ ಗೌರವ ಡಾಕ್ಟರೇಟ್ ಸೀಮಿತವಾಗದೆ ರಾಜ್ಯ ರಾಷ್ಟ್ರಮಟ್ಟದ ಅತ್ಯುತ್ತಮ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಆಗ್ರಹಿಸಿದರು.

ಬೆಂಗಳೂರು ಕಿಮ್ಸ್ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಎಚ್.ಅಂಜನಪ್ಪ ವಿದ್ಯಾರ್ಥಿ ಜೀವನದಲ್ಲಿ ಆರೋಗ್ಯ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಉಪನ್ಯಾಸ ನೀಡಿ, ಆರೋಗ್ಯವಂತ ಮನುಷ್ಯನ ದೇಹವೇ ಆಸ್ತಿ ಇದ್ದ ಹಾಗೆ, ಉತ್ತಮ ಆರೋಗ್ಯ ಪಡೆಯಬೇಕಾದರೆ ಒಳ್ಳೆಯ ಗುಣ ಬೆಳೆಸಿಕೊಳ್ಳಬೇಕು. ಆಧುನಿಕ ಭರಾಟೆಯಲ್ಲಿ ಜೀವನದ ಶೈಲಿ ಬದಲಾಗಿದೆ. ಇದರಿಂದ ಅನಾರೋಗ್ಯಕ್ಕೆ ತುತ್ತಾಗಿ ಜೀವನ ವಿನಾಶಕ್ಕೆ ಕಾರಣವಾಗುತ್ತದೆ ಎಂದರು.

ರಾಜ್ಯ ವೈಜ್ಞಾನಿಕ ಪರಿಷತ್ ಜಿಲ್ಲಾ ಅಧ್ಯಕ್ಷ ಬಿ.ಡಿ ರವಿಕುಮಾರ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನೆರವೇರಿತು. ಇರುವಕ್ಕಿ ವಿವಿ ಕುಲಪತಿ ಡಾ.ಆರ್‌.ಸಿ ಜಗದೀಶ್, ಉಪಕುಲಪತಿ ಡಾ.ಕೆ.ಸಿ ಶಶಿಧರ್, ವೈಜ್ಞಾನಿಕ ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ಡಾ. ರಾಮಚಂದ್ರ, ಪ್ರಧಾನ ಕಾರ್ಯದರ್ಶಿ ಡಾ.ಎಚ್.ವಿ ಚಿಕ್ಕ ಹನುಮಂತೇಗೌಡ, ಸಂಘಟನಾ ಕಾರ್ಯದರ್ಶಿ ವಿ.ಟಿ.ಸ್ವಾಮಿ, ಡಾ.ಸುರೇಶ್, ರಾಜೇಂದ್ರ ಆವಿನಹಳ್ಳಿ, ಗುರುರಾಜ್ ಜಕ್ಕನ ಕೊಪ್ಪ, ಕೆ.ಎಂ.ಲೋಕೇಶಪ್ಪ, ಸೀಮಾ ಸೇರಾಮ್, ಮಾರುತಿ, ಅನಿತಾ ಕುಮಾರಿ ಸೇರಿ ಅನೇಕರಿದ್ದರು.

Share this article