ಆಧುನಿಕ ಜೀವನ ಶೈಲಿ, ಕೆಟ್ಟ ಆಹಾರ ಪದ್ಧತಿ, ನಗರೀಕರಣ, ವಾಯುಮಾಲಿನ್ಯ, ವಿಕಿರಣಗಳ ಹಾವಳಿ, ತಂಬಾಕು ಸೇವನೆ, ಮದ್ಯ ಸೇವನೆ, ಒತ್ತಡದ ಜೀವನ ಮುಂತಾದ ಕಾರಣಗಳು ಕ್ಯಾನ್ಸರ್ ಕಾಯಿಲೆಗೆ ಪೂರಕವಾಗಿವೆ.
ಸಂಡೂರು: ಗರ್ಭಕಂಠದ ಮತ್ತು ಸ್ತನ ಕ್ಯಾನ್ಸರ್‌ಗಳಿಗೆ ಹಲವು ಮಹಿಳೆಯರು ತುತ್ತಾಗುತ್ತಿದ್ದಾರೆ. ಈ ವರ್ಷದ ಬಜೆಟ್‌ನಲ್ಲಿ ೯ರಿಂದ ೧೪ ವರ್ಷದ ಹೆಣ್ಣುಮಕ್ಕಳಿಗೆ ಕ್ಯಾನ್ಸರ್ ನಿರೋಧಕ ಲಸಿಕೆ ನೀಡುತ್ತಿರುವುದು ಸಂತಸದ ವಿಷಯವಾಗಿದೆ. ಈ ಲಸಿಕೆಯು ಎಲ್ಲ ಹೆಣ್ಣುಮಕ್ಕಳಿಗೆ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯೆ ಚೆನ್ನಮ್ಮ ತಿಳಿಸಿದರು.
ತಾಲೂಕಿನ ತೋರಣಗಲ್ಲು ಗ್ರಾಮದ ೨ನೇ ಅಂಗನವಾಡಿ ಕೇಂದ್ರದಲ್ಲಿ ಶುಕ್ರವಾರ ವಿಶ್ವ ಕ್ಯಾನ್ಸರ್ ದಿನಾಚರಣೆ ಕುರಿತು ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ, ಆಧುನಿಕ ಜೀವನ ಶೈಲಿ, ಕೆಟ್ಟ ಆಹಾರ ಪದ್ಧತಿ, ನಗರೀಕರಣ, ವಾಯುಮಾಲಿನ್ಯ, ವಿಕಿರಣಗಳ ಹಾವಳಿ, ತಂಬಾಕು ಸೇವನೆ, ಮದ್ಯ ಸೇವನೆ, ಒತ್ತಡದ ಜೀವನ ಮುಂತಾದ ಕಾರಣಗಳು ಕ್ಯಾನ್ಸರ್ ಕಾಯಿಲೆಗೆ ಪೂರಕವಾಗಿವೆ. ಆದ್ದರಿಂದ ಜನತೆ ಉತ್ತಮ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು. ಪ್ರತಿ ಆರು ತಿಂಗಳಿಗೊಮ್ಮೆ ಸಾಮಾನ್ಯ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು. ಅಸಹಜ ಋತುಚಕ್ರ, ಬಿಳಿಮುಟ್ಟು, ಗಡ್ಡೆ ಮಾದರಿ ಯಾವುದಾದರೂ ಇದ್ದರೆ ತಜ್ಞ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಬೇಕು. ಕ್ಯಾನ್ಸರ್ ಸಾಂಕ್ರಾಮಿಕ ರೋಗವಲ್ಲ. ಎಲ್ಲರೂ ಆಯುಷ್ಮಾನ್ ಭಾರತ್ ಕಾರ್ಡ್ ಮಾಡಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಪುಷ್ಟಿ ಪೌಡರ್‌ದಿಂದ ಲಾಡು ತಯಾರಿಸುವ ಕುರಿತು ಪ್ರಾತ್ಯಕ್ಷಿಕೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಶಂಕ್ರಮ್ಮ, ಮಂಜುಳಾ, ಗ್ರಾಮಸ್ಥರಾದ ಉಮಾಕಾಂತಮ್ಮ, ಕಲಾವತಿ, ಶಿಲ್ಪಾ, ದೀಪಾ, ಸವಿತಾ, ಕವಿತಾ, ಮರಿಯಮ್ಮ, ನಿರ್ಮಲ, ರಾಜೇಶ್ವರಿ, ಕುಸುಮಾ, ಜಯಾ, ಮಹಾಲಕ್ಷ್ಮಿ, ವಿನುತಾ ಮುಂತಾದವರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.