ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಮಹಾರಾಷ್ಟ್ರದ ನಾಗಪುರದ ದೀಕ್ಷಾಭೂಮಿಗೆ ತೆರಳುವ ಯಾತ್ರಾರ್ಥಿಗಳ ಬಸ್ ಗೆ ಚಾಲನೆ
ಡಾ.ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಅರಿತುಕೊಳ್ಳುವುದಷ್ಟೇ ಅಲ್ಲದೆ, ಅವುಗಳನ್ನು ಸಮಾಜದ ಇತರ ರಿಗೂ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬರೂ ವಹಿಸಬೇಕು. ದೀಕ್ಷಾಭೂಮಿ ಯಾತ್ರೆಯಿಂದ ಪಡೆದ ಅರಿವನ್ನು ಕನಿಷ್ಠ ಹತ್ತು ಮಂದಿಗೆ ತಿಳಿಸುವ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಬೇಕು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಕರೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಭಾನುವಾರ ಸಮಾಜ ಕಲ್ಯಾಣ ಇಲಾಖೆಯಿಂದ ಮಹಾರಾಷ್ಟ್ರದ ನಾಗಪುರದ ದೀಕ್ಷಾಭೂಮಿ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. 1956ರ ಅ. 14ರಂದು ಡಾ. ಬಿ.ಆರ್. ಅಂಬೇಡ್ಕರ್ ನಾಗಪುರದಲ್ಲಿ ಬೌದ್ಧ ಧರ್ಮದ ದೀಕ್ಷೆ ಸ್ವೀಕರಿಸಿದ್ದು, ಲಕ್ಷಾಂತರ ಅನುಯಾಯಿಗಳು ಅವರೊಂದಿಗೆ ಬೌದ್ಧ ಧರ್ಮಕ್ಕೆ ಸೇರಿದ ಐತಿಹಾಸಿಕ ಘಟನೆಗೆ ದೀಕ್ಷಾಭೂಮಿ ಸಾಕ್ಷಿಯಾಗಿದೆ. ಈ ಸ್ಥಳ ಧಾರ್ಮಿಕ ಪರಿವರ್ತನೆ ಜತೆಗೆ ಸಾಮಾಜಿಕ ಬದಲಾವಣೆ, ಸಮಾನತೆ ಮತ್ತು ಮಾನವ ಘನತೆ ಸಂಕೇತವೂ ಆಗಿದೆ ಎಂದರು.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸುವುದಕ್ಕೆ ಮಾತ್ರ ಸೀಮಿತವಾಗದೆ ಅವರ ತತ್ವಾದರ್ಶವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂಬುದು ಅವರ ಪ್ರಮುಖ ಸಂದೇಶವಾಗಿತ್ತು. ಶಿಕ್ಷಣದ ಮೂಲಕವೇ ಶೋಷಿತ ಸಮುದಾಯಗಳು ತಮ್ಮ ಹಕ್ಕುಗಳ ಬಗ್ಗೆ ಅರಿವು ಪಡೆದು ಸಾಮಾಜಿಕ ಹಾಗೂ ಆರ್ಥಿಕವಾಗಿ ಮುನ್ನಡೆಯಲು ಸಾಧ್ಯ. ಬುದ್ಧ, ಬಸವಣ್ಣ, ಅಂಬೇಡ್ಕರ್, ಕನಕದಾಸ ಮತ್ತು ವಾಲ್ಮೀಕಿ ಅವರ ವಿಚಾರಗಳು ಸಮಾನತೆ ಸಮಾಜ ನಿರ್ಮಾಣಕ್ಕೆ ದಾರಿದೀಪ ಎಂದು ಹೇಳಿದರು.ರಾಜ್ಯ ಸರ್ಕಾರ ಅಂಬೇಡ್ಕರ್ ಚಿಂತನೆಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ದೀಕ್ಷಾಭೂಮಿ ಯಾತ್ರೆ ಆಯೋಜಿಸಿದೆ. ಈ ಬಾರಿ ಚಿಕ್ಕಮಗಳೂರು ಜಿಲ್ಲೆಯಿಂದ 137 ಮಂದಿ ನಾಲ್ಕು ಬಸ್ಗಳಲ್ಲಿ ನಾಗಪುರಕ್ಕೆ ತೆರಳುತ್ತಿದ್ದಾರೆ. ಕಡೂರು ಮತ್ತು ಮೂಡಿಗೆರೆಯಿಂದ ತಲಾ ಒಂದು ಹಾಗೂ ಚಿಕ್ಕಮಗಳೂರಿನಿಂದ ಎರಡು ಬಸ್ಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.ಸಾಮಾಜಿಕ ನ್ಯಾಯದ ಆಶಯ ಅರಿಯಿರಿ:
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ. ಮಂಜೇಗೌಡ ಮಾತನಾಡಿ ಅಂಬೇಡ್ಕರ್ ಹೋರಾಟ ಮತ್ತು ಸಂಘಟನೆ ಮೂಲಕ ಸಮಾಜದ ಎಲ್ಲ ವರ್ಗಗಳಿಗೂ ನ್ಯಾಯ ದೊರಕಿಸಲು ಶ್ರಮಿಸಿದ ಮಹಾನ್ ನಾಯಕರು. ಸಂವಿಧಾನದ ಮೂಲಕ ಸಮಾನ ಹಕ್ಕು ಮತ್ತು ಅವಕಾಶ ಕಲ್ಪಿಸುವಲ್ಲಿ ಅವರ ಕೊಡುಗೆ ಅಪಾರ. ಅವರ ಹೋರಾಟದ ಆಶಯ ಇಂದಿನ ಪೀಳಿಗೆ ಅರ್ಥಮಾಡಿಕೊಂಡು ಸಮಾನತೆ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಾಲತಿ, ತಾಲೂಕು ಮಟ್ಟದ ಅಧಿಕಾರಿ ರೇವಣ್ಣ, ದಲಿತಪರ ಸಂಘಟನೆಗಳ ಮುಖಂಡರಾದ ಅಣ್ಣಯ್ಯ, ರಾಮಚಂದ್ರ, ಪರಮೇಶ್ವರ, ನಗರಸಭಾ ಸದಸ್ಯ ಅರುಣ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಮುಖಂಡರು ಹಾಗೂ ಯಾತ್ರಾರ್ಥಿಗಳು ಉಪಸ್ಥಿತರಿದ್ದರು.