ಅಂಬೇಡ್ಕರ್‌ ವಿಚಾರಧಾರೆಗಳು ಎಲ್ಲೆಡೆ ಪಸರಿಸಲಿ: ನಾಗರಾಜಯ್ಯ

KannadaprabhaNewsNetwork |  
Published : Jun 10, 2024, 12:53 AM IST
ಚಿತ್ರ 3 | Kannada Prabha

ಸಾರಾಂಶ

ಮಹಾನಾಯಕ ದಲಿತ ಸೇನೆಯಿಂದ ಆಯೋಜಿಸಿದ್ದ ಅಂಬೇಡ್ಕರ್ ಮತ್ತು ಪ್ರೊ.ಬಿ.ಕೃಷ್ಣಪ್ಪರವರ ಜಯಂತಿ ಆಚರಣೆ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಕವಿ, ಸಂಶೋಧಕ ವಡ್ಡಗೆರೆ ನಾಗರಾಜಯ್ಯ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಲೋಕದ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಂಡು ಹೊರಟ ಬುದ್ಧ ಜನರ ಪ್ರೀತಿ ಬಂಧನಕ್ಕೆ ಒಳಗಾದಂತೆ, ಅಂಬೇಡ್ಕರ್‌ ರವರು ಸಹ ಜನರ ಸಮಸ್ಯೆ ಮೂಲ ಹುಡುಕುತ್ತಾ ಹೊರಟರು. ಅವರ ವಿಚಾರಧಾರೆಗಳ ಮಳೆ ಎಲ್ಲಾ ಕಡೆಯೂ ಸುರಿಯಬೇಕಿದೆ ಎಂದು ಕವಿ, ಸಂಶೋಧಕ ಡಾ. ವಡ್ಡಗೆರೆ ನಾಗರಾಜಯ್ಯ ಅಭಿಪ್ರಾಯಪಟ್ಟರು.

ನಗರದ ರೋಟರಿ ಸಭಾಭವನದಲ್ಲಿ ಭಾನುವಾರ ಮಹಾನಾಯಕ ದಲಿತ ಸೇನೆಯಿಂದ ಆಯೋಜಿಸಿದ್ದ ಅಂಬೇಡ್ಕರ್ ಮತ್ತು ಪ್ರೊ.ಬಿ.ಕೃಷ್ಣಪ್ಪರವರ ಜಯಂತಿ ಆಚರಣೆ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತೀಯ ಸಮಾಜದಲ್ಲಿ ಬುದ್ಧ, ಬಸವಣ್ಣ ಮತ್ತು ಅಂಬೇಡ್ಕರ್‌ವರು ಮಡುಗಟ್ಟಿದ್ದ ಕಂದಾಚಾರ, ಮೂಢನಂಬಿಕೆ ಹಾಗೂ ಅಸಮಾನತೆ ತೊಡೆದು ಹಾಕಲು ಶ್ರಮಿಸಿದರು. ಅಂಬೇಡ್ಕರ್‌ವರು ನಾನು ಮಲಗಿದರೆ ನನ್ನ ಜಗತ್ತನ್ನು ಕಾಯುವವರಾರು ಎಂದು ಸದಾ ತನ್ನ ಜನರ ಹಿತಕ್ಕೆ ಜೀವ ಸವೆಸಿದರು. ಶತಮಾನಗಳಿಂದ ಮೀಸಲಾತಿ ಕಲ್ಪನೆ, ರಾಜಕೀಯ ಪ್ರಾತಿನಿಧ್ಯದ ಅರಿವಿಲ್ಲದೆ ಜೀತಗಾರಿಕೆಯಲ್ಲೇ ಬದುಕಿದ್ದ ಜನರನ್ನು ವಾಸ್ತವದ ಪರಿಧಿಗೆ ತಂದು ಶಿಕ್ಷಣದ ಮಹತ್ವ ತಿಳಿಸಿದರು. ಶಿಕ್ಷಣದಿಂದ ದೂರವಿಟ್ಟು ಜ್ಞಾನದ ಮಹತ್ವ ತಿಳಿಯದಂತ ವ್ಯವಸ್ಥೆ ಸೃಷ್ಟಿಸಿಕೊಂಡಿದ್ದ ಮೇಲ್ವರ್ಗದ ದುರ್ಬುದ್ಧಿಗೆ ಅಂಬೇಡ್ಕರ್ ಕೊನೆ ಹಾಡಿದರು. ಅದೇ ರೀತಿ ಪ್ರೊ.ಕೃಷ್ಣಪ್ಪನವರು ಈ ನಾಡಿನಲ್ಲಿ ಸ್ವಾಭಿಮಾನದ ಹೋರಾಟ ಕಟ್ಟದೇ ಹೋಗಿದ್ದರೆ ಇಂದಿಗೂ ಶೋಷಿತರ ಪರಿಸ್ಥಿತಿ ಬದಲಾಗುತ್ತಲೇ ಇರಲಿಲ್ಲ. ದಲಿತರು ಬಂದರು ದಾರಿಬಿಡಿ ದಲಿತರ ಕೈಗೆ ಅಧಿಕಾರ ಕೊಡಿ ಎಂಬ ಹೋರಾಟದ ಹಣತೆ ಹಚ್ಚಿದ ಕೃಷ್ಣಪ್ಪನವರು ಆ ಹಣತೆ ಬೆಳಕಿಗೆ ನಮ್ಮನ್ನು ತಂದರು ಎಂದರು.

ಕೆಪಿಸಿಸಿ ಮಹಿಳಾ ರಾಜ್ಯ ಪ್ರಧಾನ ಕಾರ್ಯದರ್ಶಿ ಜಯಲಕ್ಷ್ಮಿ ನಾಯಕ ಮಾತನಾಡಿ, ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯ ಮತ್ತು ಮಹಿಳಾ ಹಕ್ಕುಗಳಿಗಾಗಿ ಈ ದೇಶದಲ್ಲಿ ಡಾ.ಅಂಬೇಡ್ಕರ್ ಅವರಷ್ಟು ಬೇರೆ ಯಾರೊಬ್ಬರೂ ಹೋರಾಟ ಮಾಡಲೇ ಇಲ್ಲ. ಸಂವಿಧಾನದಲ್ಲಿ ಮಹಿಳೆಯರಿಗಾಗಿ ಸಾಕಷ್ಟು ಅವಕಾಶ ಮತ್ತು ಸಂರಕ್ಷಣಾ ಹಕ್ಕು ನೀಡಲಾಗಿದ್ದು ಮಹಿಳೆಯರು ಸ್ವಾವಲಂಭಿಗಳಾಗಿ ಬದುಕಲು ಸರ್ಕಾರದ ಯೋಜನೆ ಬಳಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದರು.

ತುಮಕೂರಿನ ಸಾಮಾಜಿಕ ಕಾರ್ಯಕರ್ತ ಕೊಟ್ಟ ಶಂಕರ್ ಮಾತನಾಡಿ, ದಲಿತ ಸಮುದಾಯ ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳದೇ ಹೋದರೆ ಸಮುದಾಯ ಮತ್ತಷ್ಟು ಹಿಂದಕ್ಕೆ ಹೋದಂತಾಗುತ್ತದೆ. ಹಾಗಾಗಿ ರಾಜಕೀಯ ಅಧಿಕಾರ ಹಿಡಿಯುವತ್ತ ಎಲ್ಲರೂ ಗಂಭೀರವಾಗಿ ಚಿಂತಿಸಬೇಕಿದೆ ಎಂದರು.

ಹಿರಿಯ ಪತ್ರಕರ್ತ ಕೋಡಿಹಳ್ಳಿ ಸಂತೋಷ್ ಮಾತನಾಡಿದರು. ಈ ವೇಳೆ ಎಂಡಿಎಸ್ ರಾಜ್ಯಾಧ್ಯಕ್ಷ ಮಂಜುನಾಥ್ ತಾಳಿಕೆರೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಹೊಳೆಯಪ್ಪ ಸಾಕ್ಯ, ಸಂಘಟಕ ಕೆಪಿ ಶ್ರೀನಿವಾಸ್ ಮೂರ್ತಿ, ವೀಣಾ, ಘಾಟ್ ರವಿ, ಶ್ರೀಧರ್, ಕರ್ಣಕುಮಾರ್, ಓಂಕಾರ್ ಮಟ್ಟಿ, ಬಿ. ಸಿದ್ದಪ್ಪ, ಮಹೇಶ್, ಕೃಷ್ಣಮೂರ್ತಿ ಮುಂತಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ