ವಿಭಾಗ ಮಟ್ಟದ ವಿದ್ಯಾರ್ಥಿ ಯುವ ಜನರ ಅಧ್ಯಯನ ಶಿಬಿರದಲ್ಲಿ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ
ಭಾರತದ ಸಂವಿಧಾನವು ಅತ್ಯಂತ ಪವಿತ್ರವಾದುದು. ಡಾ. ಬಿ.ಆರ್. ಅಂಬೇಡ್ಕರ್ ಅವರು ಸಮಾನತೆಯ ಸಂದೇಶವನ್ನು ದೇಶಕ್ಕೆ ನೀಡಿದ್ದಾರೆ. ಮೀಸಲಾತಿಯ ಸೌಲಭ್ಯ ಪಡೆದುಕೊಂಡು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಮುಂದೆ ಬರಬೇಕಾಗಿದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ. ರವಿ ಹೇಳಿದರು.
ತಾಲೂಕಿನ ತಾವರಗೇರಾ ಪಟ್ಟಣದ ಹೊರ ವಲಯದಲ್ಲಿರುವ ಬುದ್ಧ ವಿಹಾರದಲ್ಲಿ ದಲಿತ ಸಂಘರ್ಷ ಸಮಿತಿ (ಸಂಯೋಜಿತ) ರಾಜ್ಯ ಸಮಿತಿ ವತಿಯಿಂದ ಮಾನವ ಬಂಧುತ್ವ ವೇದಿಕೆಯ ಸಹಕಾರದಿಂದ ಹಮ್ಮಿಕೊಂಡಿದ್ದ ಕಲಬುರಗಿ ವಿಭಾಗ ಮಟ್ಟದ ವಿದ್ಯಾರ್ಥಿ ಯುವ ಜನರ ಅಧ್ಯಯನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.ಸಂವಹನದ ಸಮಸ್ಯೆ ನಮ್ಮನ್ನು ಕಾಡುತ್ತಿದೆ. ಸಂವಿಧಾನದ ತಿರುಳು ತಿಳಿದುಕೊಳ್ಳಬೇಕು. ಮಿಸಲಾತಿ ಅನಿವಾರ್ಯವಾಗಿದೆ. ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರಿಗೆ ಸರಿ ಸಮಾನವಾದ ವಿದ್ವಾಂಸ ಇಡೀ ವಿಶ್ವದಲ್ಲಿಯೇ ಯಾರು ಇಲ್ಲ. ಅವರು ವಿಶ್ವದ ಎಲ್ಲ ಸಂವಿಧಾನವನ್ನು ಅಧ್ಯಯನ ಮಾಡಿ ಭಾರತ ಸಂವಿಧಾನ ರಚಿಸಿದ್ದಾರೆ. ಅವರ ಸಾಮಾಜಿಕ ನ್ಯಾಯದ ಕನಸು ನನಸಾಗಬೇಕಾಗಿದೆ ಎಂದರು.ರಾಜ್ಯ ಸಂಸ್ಥಾಪಕ ವಿ. ನಾಗರಾಜ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜದಲ್ಲಿ ಒಳಿತಿಗಾಗಿ ಹೋರಾಡಬೇಕಾಗಿದೆ. ಅರಿವಿನ ಹಸಿವು ನಿಗಿಸುವಲ್ಲಿ ಶ್ರಮಪಡಬೇಕಿದೆ. ವಿದ್ಯಾರ್ಥಿಗಳಾದ ನಿಮ್ಮ ಕೈಯಲ್ಲಿ ಮುಂದಿನ ದಿನಗಳನ್ನು ಕೊಡುತ್ತಿದ್ದೇವೆ ಎಂದರು.
ಸಂವಾದ ಪತ್ರಿಕೆ ಸಂಪಾದಕ ಇಂದೂಧರ ಹೊನ್ನಾಪುರ ಕಾರ್ಯಕ್ರಮ ಉದ್ಘಾಟಿಸಿದರು. ರಾಜ್ಯ ಸಂಯೋಜಕ ಎಚ್.ಎನ್. ಅಣ್ಣಯ್ಯ ಶಿಬಿರದ ಅಧ್ಯಕ್ಷತೆ ವಹಿಸಿದ್ದರು. ಜಾತಿ ಉಗಮ ಮತು ಭಾರತೀಯ ಸಂಸ್ಕೃತಿ ಕುರಿತು ಲೇಖಕ ಲಕ್ಷ್ಮೀಪತಿ ಕೋಲಾರ ವಿಶೇಷ ಉಪನ್ಯಾಸ ನೀಡಿದರು. ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ, ರಮೇಶ ರಾಮಗೊಂಡನಹಳ್ಳಿ, ಈ. ಮುನಿರಾಜು, ಪ್ರಗತಿಪರ ಚಿಂತಕಿ ಸಾವಿತ್ರಿ ಮುಜುಮದಾರ, ಭೀಮಣ್ಣ ಹವಳೆ, ರಾಮಣ್ಣ ಬೇರಗಿ ಸೇರಿದಂತೆ ಪ್ರಗತಿಪರ ಚಿಂತಕರು ಹಾಗೂ ದಲಿತ ಮುಖಂಡರು ಹಾಗೂ ಇತರರು ಪಾಲ್ಗೊಂಡಿದ್ದರು.