ಧಾರವಾಡ:
ಮಹಿಳೆಯರಿಗೆ ಸಮಾನ ಮತ್ತು ಸುರಕ್ಷಿತ ಸಮಾಜ ನಿರ್ಮಿಸುವುದು ಪುರುಷ ಪ್ರಧಾನ ಸಮಾಜದ್ದಾಗಿದೆ ಎಂದು ಮಿಲಾನ್ ಸಂಸ್ಥೆಯ ಸಹಾಯಕ ಅಧಿಕಾರಿ ನಾಗವೇಣಿ ಪಟ್ಟಣಶೆಟ್ಟಿ ಹೇಳಿದರು.ಇಲ್ಲಿಯ ಜ್ಞಾನವಿಕಾಸ ತರಬೇತಿ ಸಂಸ್ಥೆಯ ಆವರಣದಲ್ಲಿ ವಿದ್ಯಾರ್ಥಿನಿಯರಿಗೆ ತರಬೇತಿ ಕೈಪಿಡಿ ಹಾಗೂ ಲೇಖನಿ ಸಾಮಗ್ರಿ ವಿತರಿಸಿದ ಅವರು, ಮಹಿಳೆಯರ, ಮಕ್ಕಳ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಮಾಜದಲ್ಲಿ ಇರುವ ಸಂಸ್ಥೆಗಳು ಕಾರ್ಯ ಮಾಡಬೇಕು. ಈ ಮೂಲಕ ಸಮಾಜದ ಬದಲಾವಣೆಗೆ ನಾಂದಿ ಹಾಡಬೇಕು ಎಂದರು.
ಮಿಲಾನ್ ಸಂಸ್ಥೆಯು ನಡೆಸುವ ಗರ್ಲ್ ಐಕಾನ್ ಕಾರ್ಯಕ್ರಮಕ್ಕೆ ಧಾರವಾಡ, ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಯ 120 ಹೆಣ್ಣುಮಕ್ಕಳನ್ನು 2023-24ನೇ ಸಾಲಿನ ಗರ್ಲ್ ಐಕಾನ್ ಫೆಲೊಶಿಪ್’ ಕಾರ‍್ಯಕ್ರಮಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಎಲ್ಲರಿಗೂ ಸಂಸ್ಥೆಯು ವಿತರಿಸಿದ ಮೊಬೈಲ್ ಮೂಲಕ ಕಳೆದ ಮೂರು ತಿಂಗಳಿನಿಂದ ವಾರಕ್ಕೊಮ್ಮೆಯಂತೆ ನಿರಂತರವಾಗಿ ವ್ಯಕ್ತಿತ್ವ ವಿಕಸನ ತರಬೇತಿ ನೀಡಲಾಗಿದೆ. ಎಲ್ಲರಿಗೂ ಆತ್ಮವಿಶ್ವಾಸ-ಆತ್ಮಾವಲೋಕನದ ಅಗತ್ಯತೆ, ಸಹಾನುಭೂತಿ, ಪರಿಣಾಮಕಾರಿ ಸಂವಹನ ಎಂದರೇನು? ಕನಸುಗಳು ಬದುಕಿಗೆ ಎಷ್ಟು ಮುಖ್ಯ? ಮತ್ತು ಅವುಗಳನ್ನು ಗುರಿಗಳಾಗಿ ಬದಲಾಯಿಸುವುದು ಹೇಗೆ? ನಿರ್ಧಾರ ತೆಗೆದುಕೊಳ್ಳುವಾಗ ಯಾವೆಲ್ಲ ವಿಷಯಗಳು ಗಮನದಲ್ಲಿರಬೇಕು? ಸಮಸ್ಯೆ ಪರಿಹಾರ ಮಾಡುವಾಗ ಅನುಸರಿಸಬೇಕಾದ ಹಂತಗಳು ಯಾವುವು? ಹೀಗೆ ಅನೇಕ ವಿಷಯಗಳ ಕುರಿತು ಮನವರಿಕೆ ಮಾಡಲಾಗಿದೆ. ತರಬೇತಿ ಪಡೆದ ಗರ್ಲ್ ಐಕಾನ್‌ಗಳು ತಮ್ಮ ಸುತ್ತಮುತ್ತಲಿನ 20 ಸಮಾನ ವಯಸ್ಸಿನ ಹೆಣ್ಣುಮಕ್ಕಳ ತಂಡ ಕಟ್ಟುವ ಮೂಲಕ, ತಾವು ಪಡೆದ ಜ್ಞಾನವನ್ನು ಅವರಿಗೆ ಹಂಚುವುದಲ್ಲದೆ ತಮ್ಮ ಸುತ್ತಮುತ್ತಲಿನ ಸಮಸ್ಯೆಗಳಿಗೆ ತಂಡವಾಗಿ ಪರಿಹಾರ ಕಂಡುಕೊಳ್ಳುವರು ಎಂದು ತಿಳಿಸಿದರು.ಕಾರ್ಯಕ್ರಮ ಸಂಯೋಜಕ ಸಿಮ್ರಿನ್, ತರಬೇತುದಾರರಾದ ವಿದ್ಯಾ ಶಿವರಾಮ್, ಸರಿತಾ ಹಬೀಬ್, ಈಶ್ವರಿ ಜುತ್ಲಾರ್, ಪಾರ್ವತಿ ಹಡಪದ, ಶ್ರದ್ಧಾ ಆಲೂರ್ ಮತ್ತಿತರರು ಇದ್ದಾರೆ.