ಅಯೋಧ್ಯೆಯಂತೆ ಅಂಜನಾದ್ರಿ ಅಭಿವೃದ್ಧಿಯಾಗಲಿ

KannadaprabhaNewsNetwork |  
Published : May 02, 2025, 11:47 PM IST
2ುಲು2 | Kannada Prabha

ಸಾರಾಂಶ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಬೇಕೆಂಬುದು ಹಿರಿಯ ಸ್ವಾಮೀಜಿ ವಿಶ್ವೇಶತೀರ್ಥರ ಆಸೆಯಾಗಿತ್ತು. ಅದರ ಜತೆಗೆ ಕರ್ನಾಟಕದ ಭಕ್ತರ ಸಹಕಾರವಿತ್ತು. ಈಗ ಅಭಿವೃದ್ಧಿಯಾಗಿದೆ. ಅದರಂತೆ ಅಂಜನಾದ್ರಿ ಅಭಿವೃದ್ಧಿಯಾಗುವುದರಲ್ಲಿ ಸಂದೇಹವೇ ಇಲ್ಲ.

ಗಂಗಾವತಿ:

ಅಯೋಧ್ಯೆಯ ಶ್ರೀರಾಮಮಂದಿರದ ಅಭಿವೃದ್ಧಿಯಂತೆ ಹನುಮನ ಜನ್ಮ ಸ್ಥಳವಾದ ಅಂಜನಾದ್ರಿ ಅಭಿವೃದ್ಧಿಗೆ ಒತ್ತು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಪೇಜಾವರ ಅಧೋಕ್ಷಜ ಮಠದ ಪೀಠಾಧಿಪತಿ ವಿಶ್ವಪ್ರಸನ್ನ ತೀರ್ಥರು ಹೇಳಿದರು.

ನಗರದ ಸತ್ಯನಾರಾಯಣ ಪೇಟೆಯಲ್ಲಿರುವ ಸತ್ಯನಾರಾಯಣ ದೇವಸ್ಥಾನದ 35ನೇ ವಾರ್ಷಿಕೋತ್ಸವ ಹಾಗೂ ವಿಶ್ವೇಶತೀರ್ಥ ಸಭಾಭವನವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಅಂಜನಾದ್ರಿ ಅಭಿವೃದ್ಧಿಯಾಗಬೇಕು. ಭಕ್ತರಿಗೆ ಎಲ್ಲ ಸೌಲಭ್ಯ ಸಿಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಮನ ಹರಿಸುವಂತೆ ಹೇಳಲಾಗುವುದು ಎಂದರು.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಬೇಕೆಂಬುದು ಹಿರಿಯ ಸ್ವಾಮೀಜಿ ವಿಶ್ವೇಶತೀರ್ಥರ ಆಸೆಯಾಗಿತ್ತು. ಅದರ ಜತೆಗೆ ಕರ್ನಾಟಕದ ಭಕ್ತರ ಸಹಕಾರವಿತ್ತು. ಈಗ ಅಭಿವೃದ್ಧಿಯಾಗಿದೆ. ಅದರಂತೆ ಅಂಜನಾದ್ರಿ ಅಭಿವೃದ್ಧಿಯಾಗುವುದರಲ್ಲಿ ಸಂದೇಹವೇ ಇಲ್ಲ ಎಂದ ಶ್ರೀಗಳು, ಗಂಗಾವತಿ ನಗರದಲ್ಲಿ ವಿದ್ಯಾಪೀಠ ಮತ್ತು ವಿಶ್ವೇಶತೀರ್ಥ ಸಭಾಭವನ ನಿರ್ಮಿಸಲು ಎಲ್ಲರ ಸಹಕಾರ ಕಾರಣವಾಗಿದೆ. ದಿ. ಸತ್ಯನಾರಾಯಣಶ್ರೇಷ್ಠಿ ಅವರ ಕುಟುಂಬ ಹಾಗೂ ಅವರ ಪುತ್ರ ಲಕ್ಷ್ಮೀನಾರಾಯಣ ಕಾರಣವಾಗಿದ್ದಾರೆ ಎಂದರು.

ಮಾಜಿ ಸಚಿವ ಮಲ್ಲಿಕಾರ್ಜುನಾಗಪ್ಪ ಮಾತನಾಡಿ, ಪೇಜಾವರ ಶ್ರೀಗಳು ಹಿಂದೂ ಸಮಾಜವನ್ನು ರಕ್ಷಿಸುತ್ತಿದ್ದಾರೆ. ಇವರ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರ ದೇವರ ವಿಶೇಷ ಪೂಜೆ ನಡೆದಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.

ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಮಾತನಾಡಿ, ಅಯೋಧ್ಯೆಯಂತೆ ಅಂಜನಾದ್ರಿ ಅಭಿವೃದ್ಧಿಯಾಗಬೇಕೆಂದು ಶ್ರೀಗಳು ನಿರ್ಧರಿಸಿದರೆ ಕೆಲವೇ ದಿನಗಳಲ್ಲಿ ಅದು ಕಾರ್ಯಸಾಧುವಾಗಲಿದೆ. ಅಯೋಧ್ಯೆಯಷ್ಟೇ ಅಂಜನಾದ್ರಿಯೂ ಪವಿತ್ರ ಸ್ಥಳವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಿರುವುದರಿಂದ ಅಭಿವೃದ್ಧಿಯಾಗಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ದರೋಜಿ ರಂಗಣ್ಣ ಶ್ರೇಷ್ಠಿ ಮಾತನಾಡಿದರು. ಇದೇ ವೇಳೆ ಭವನ ನಿರ್ಮಾಣಕ್ಕೆ ಸಹಕಾರ ನೀಡಿದ ದಾನಿಗಳನ್ನು ಶ್ರೀಗಳು ಸನ್ಮಾನಿಸಿದರು. ಉದ್ಯಮಿ ಕೆ. ಕಾಳಪ್ಪ, ಲಕ್ಷ್ಮೀನಾರಾಯಣ, ಬಾಲ ಮುರುಳಿಕೃಷ್ಣ, ಡಾ. ಕೆ.ಎನ್. ಮಧುಸೂದನ್, ವಾಗೀಶಚಾರ ಗೋರೆಬಾಳ್, ವೆಂಕಣ್ಣಚಾರ ಕಲ್ಮಂಗಿ, ಪ್ರಹ್ಲಾದ ವೈದ್ಯ, ವಾದಿರಾಜಚಾರ ಕಲ್ಮಂಗಿ, ಶ್ರೀಧರ ಆಚಾರ ರಾಜಪೂರೋಹಿತ, ತಿರುಮಲರಾವ್, ದೇಶಪಾಂಡೆ ಇದ್ದರು. ಶ್ರೀಧರ ಆಚಾರ ಪ್ರಾರ್ಥಿಸಿದರು, ರಾಮಮೂರ್ತಿ ನವಲಿ ಸ್ವಾಗತಿಸಿ, ನಿರೂಪಿಸಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ