ಕನ್ನಡಪ್ರಭ ವಾರ್ತೆ ಹೊಸಕೋಟೆ
ಆಧುನಿಕತೆ ಎಂಬ ಪೆಡಂಭೂತ ಪ್ರತಿಯೊಬ್ಬ ನಾಗರಿಕನನ್ನೂ ಕಾಡುತ್ತಿರುವ ಪರಿಣಾಮ ಕಲೆ ಹಾಗೂ ಕಲಾವಿದರಿಗೆ ಸೂಕ್ತ ಬೆಂಬಲ ಸಿಗುತ್ತಿಲ್ಲ. ಆದ್ದರಿಂದ ಕಲೆ, ಕಲಾವಿದರಿಗೆ ಜೀವ ತುಂಬುವ ಕೆಲಸ ನಿರಂತರವಾಗಿ ಆಗಬೇಕು ಎಂದು ಜನಪದರು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಕಾಟಂನಲ್ಲೂರು ಪಾಪಣ್ಣ ತಿಳಿಸಿದರು.ನಗರದ ಹೊರವಲಯದ ನಿಂಬೆಕಾಯಿಪುರದ ಗೇಟ್ ಬಳಿ ಇರುವ ಜನಪದರು ಸಾಂಸ್ಕೃತಿಕ ವೇದಿಕೆ ಆವರಣದಲ್ಲಿ ಕನ್ನಡ ಕಲಾ ಸಂಘ, ತುಂಗಭದ್ರ ಅಣೆಕಟ್ಟು ವತಿಯಿಂದ ನಡೆದ ನಾ ಸತ್ತಿಲ್ಲ ಹಾಸ್ಯ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜನಪದರು ಸಾಂಸ್ಕೃತಿಕ ವೇದಿಕೆಯನ್ನು ಆಧುನಿಕ ಶೈಲಿಯಲ್ಲಿ ನಿರ್ಮಿಸಿ, ಪ್ರತಿ ತಿಂಗಳ ಎರಡನೇ ಶನಿವಾರದಂದು ರಾಜ್ಯದ ವಿವಿಧ ಭಾಗಗಳಿಂದ ಕಲಾವಿದರನ್ನು ಆಹ್ವಾನಿಸಿ ನಾಟಕ ಪ್ರದರ್ಶನ ಮಾಡಲಾಗುತ್ತಿದೆ. ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಣೆ, ಸಾಮಾಜಿಕ ಜಾಲತಾಣಗಳಲ್ಲಿ ಕಲೆಯನ್ನು ಆಸ್ವಾದಿಸುವುದಕ್ಕಿಂತ, ನೇರವಾಗಿ ಕಲಾವಿದರ ನಟನೆಯನ್ನು ಆಸ್ವಾದಿಸುವ ರೀತಿ ಬೇರೆ ಇರುತ್ತದೆ. ಆದ್ದರಿಂದ ಕಲೆ, ಕಲಾವಿದರಿಗೆ ಸೂಕ್ತ ವೇದಿಕೆ ರಾಜ್ಯದ ಮೂಲೆ ಮೂಲೆಯಲ್ಲಿ ನಿರಂತರವಾಗಿ ಧಕ್ಕಬೇಕು. ಇದರಿಂದ ನಮ್ಮ ಪಾರಂಪರಿಕ ಕಲೆ ಅನಾವರಣ ಜೊತೆಗೆ ಕಲಾವಿದರನ್ನು ಸಹ ಪ್ರೋತ್ಸಾಹಿಸಿದಂತಾಗುತ್ತದೆ ಎಂದರು.ನಾಟಕ ನವಿರಾದ ಹಾಸ್ಯ ಸಂಭಾಷಣೆಗಳೊಂದಿಗೆ ಪ್ರೇಕ್ಷಕರನ್ನು ನಗಿಸುತ್ತಲೇ ಒಂದು ಗಂಭೀರ ವಿಚಾರದ ಬಗ್ಗೆ ಚಿಂತಿಸುವಂತೆ ಮಾಡಿತು. ಸ್ವತಂತ್ರ ಸೇನಾನಿಯಾದ ಸತ್ಯವಂತರಾವ್ ತಾವಿನ್ನೂ ಬದುಕಿರುವುದಾಗಿ ನ್ಯಾಯಾಲಯದಲ್ಲಿ ಮೊಕ್ಕದ್ದಮೆ ಹೂಡುತ್ತಾರೆ. ಸಾಕ್ಷಿ ಕಟ್ಟೆಯಲ್ಲಿ ನಿಂತು ಗೋಗೆರೆದರೂ ಸಾಕ್ಷಿಗಳ ಕೊರತೆಯ ನೆಪವೊಡ್ಡಿ ನ್ಯಾಯಾಲಯ ಮಧ್ಯಂತರ ಆಜ್ಞೆಯಲ್ಲಿ ಅವರು ಬದುಕಿದ್ದಾರೆಂದು ಆದೇಶ ನೀಡಲು ನಿರಾಕರಿಸುತ್ತದೆ. ಇದು ನಾಟಕದ ತಿರುಳು ಆಗಿತ್ತು. ಈ ಸಂದರ್ಭದಲ್ಲಿ ಪ್ರೇಕ್ಷಕರು ನಗೆಗಡಲಲ್ಲಿ ಮುಳುಗುವುದರ ಜೊತೆಗೆ ಕಲಾವಿದರ ಉತ್ತಮ ಅಭಿನಯಕ್ಕೆ ಪ್ರಶಂಶಿಸಿದರು.
ತುಂಗಭದ್ರ ಅಣೆಕಟ್ಟು ಹವ್ಯಾಸ ನಾಟಕ ತಂಡದ ಬೆಳವಣಿಗೆಗೆ ಕಾರಣೀಭೂತರಾದ ಶ್ರೀಯುತ ನರೇಂದ್ರ ಬಾಬು ಅವರನ್ನು ಸನ್ಮಾನಿಸಿ ಅವರ ಕೊಡುಗೆಯನ್ನು ಸ್ಮರಿಸಲಾಯಿತು.ಜನಪದರು ಕಾರ್ಯದರ್ಶಿಗಳಾದ ಸಿದ್ಧೇಶ್ವರ ನನಸುಮನೆ, ಎಂ. ಸುರೇಶ್, ವೆಂಕಟಾಚಲಪತಿ, ಮಮತಾ, ಮಧುಸೂದನ್, ಮುನಿರಾಜು ಬಿದರೆ ಅಗ್ರಹಾರ, ರಾಜಣ್ಣ, ಬಿ.ಜಿ. ಚಂದ್ರಶೇಖರ್, ಕೆ. ಸುರೇಶ್ ಮುಂತಾದವರು ಹಾಜರಿದ್ದರು.