ಸಿದ್ದಾಪುರ: ತಾಲೂಕಿನ ವಡಗೇರಿಯ ಚೌಡೇಶ್ವರಿ, ನಾಗಯಕ್ಷೇಶ್ವರಿ ದೇವರ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ವೀರ ಬರ್ಬರಿಕ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಯಕ್ಷಗಾನ ಪ್ರದರ್ಶನದ ಪೂರ್ವದಲ್ಲಿ ನಡೆದ ಯುವ ಕಲಾವಿದ ಚಂದ್ರಹಾಸ ಗೌಡ ಹೊಸಪಟ್ಟಣ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ವರ್ತಕ ಅನಂತ ಶಾನಭಾಗ ಅವರು, ನಿರಂತರವಾಗಿ ಯಕ್ಷಗಾನ ಕಲಾವಿದರು ಯಕ್ಷಗಾನ ಪ್ರದರ್ಶನ ನೀಡುವುದಕ್ಕಾಗಿ ಊರಿಂದ ಊರಿಗೆ ಹೋಗಬೇಕಾಗಿದೆ. ಆದರೆ ಅವರು ಆರೋಗ್ಯದ ಕುರಿತು ಗಮನ ನೀಡುವುದಿಲ್ಲ. ಪ್ರತಿಯೊಬ್ಬ ಕಲಾವಿದರು ಕಲೆಯ ಪ್ರದರ್ಶನಕ್ಕೆ ಎಷ್ಟು ಗಮನ ನೀಡುತ್ತಾರೋ ಅದಕ್ಕೂ ಹೆಚ್ಚು ಕಲಾವಿದರು ಆರೋಗ್ಯದ ಕುರಿತು ಲಕ್ಷ್ಯ ವಹಿಸಬೇಕು ಎಂದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಚಂದ್ರಹಾಸ ಗೌಡ ಹೊಸಪಟ್ಟಣ ಅವರು, ಕಲಾಭಿಮಾನಿಗಳ ಪ್ರೋತ್ಸಾಹ ಇದ್ದರೆ ಯಾವ ಸನ್ಮಾನವೂ ಮುಖ್ಯ ಅಲ್ಲ. ಕಲೆ, ಕಲಾವಿದರು ಬೆಳೆಯಬೇಕಾದರೆ ಪೋಷಕರು, ಸಂಘಟಕರು ಹಾಗೂ ಕಲಾಭಿಮಾನಿಗಳು ಮುಖ್ಯ ಎಂದರು.ಉದ್ಯಮಿ ಎಂ.ಟಿ. ಗೌಡ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ರಮೇಶ ಹಾರ್ಸಿಮನೆ ಮಾತನಾಡಿದರು. ಹಿರಿಯರಾದ ಈರಾ ಗೌಡ, ನಾರಾಯಣ ಗೌಡ, ಭಾಸ್ಕರ ಗೌಡ ದಂಪತಿ ಉಪಸ್ಥಿತರಿದ್ದರು.
ನಾಟಿ ವೈದ್ಯ ಕೆ.ಟಿ. ಗೌಡ ಕಾನ್ಮನೆ ಪ್ರಾಸ್ತಾವಿಕ ಮಾತನಾಡಿದರು. ಮೈತ್ರಿ ಗೌಡ ಸನ್ಮಾನ ಪತ್ರ ವಾಚಿಸಿದರು. ಭಾಗ್ಯ ಗೌಡ ಸ್ವಾಗತಿಸಿದರು. ಅಮೀತ್ ಭಟ್ಟ ವಂದಿಸಿದರು. ನಂತರ ವೀರಬರ್ಬರಿಕ ಯಕ್ಷಗಾನ ಬಯಲಾಟ ಭಾಸ್ಕರ ಗೌಡ ವಡಗೇರಿ ಅವರ ಪ್ರಾಯೋಜಕತ್ವದಲ್ಲಿ ಪ್ರದರ್ಶನಗೊಂಡಿತು. ಹಿಮ್ಮೇಳದಲ್ಲಿ ಪರಮೇಶ್ವರ ನಾಯ್ಕ ಬ್ರಹ್ಮಾವರ, ಎನ್.ಜಿ. ಹೆಗಡೆ ಯಲ್ಲಾಪುರ, ಗಣೇಶ ಗಾಂವಕರ್ ಸಹಕರಿಸಿದರು. ಮುಮ್ಮೇಳದಲ್ಲಿ ನಾಗರಾಜ ಭಂಡಾರಿ, ಚಂದ್ರಹಾಸ ಗೌಡ ಹೊಸಪಟ್ಟಣ, ಸನ್ಮಯ ಭಟ್ಟ, ಸದಾಶಿವ ಮಲವಳ್ಳಿ, ವೆಂಕಟೇಶ ಬಗರಿಮಕ್ಕಿ, ಸತೀಶ ಶೆಟ್ಟಿ ಹಟ್ಟಿಅಂಗಡಿ, ಮೈತ್ರಿ ಗೌಡ ಸಂಪೇಸರ, ನಂದನ ನಾಯ್ಕ ಅರಶಿನಗೋಡ, ಜನಾರ್ದನ ಕಂಚಿಮನೆ, ಪ್ರಥ್ವಿ ಹೊಸಗದ್ದೆ, ಪೂರ್ಣಚಂದ್ರ, ನಿಶಾ ಅವರು ವಿವಿಧ ಪಾತ್ರ ನಿರ್ವಹಿಸಿದರು.