ಬೀಚಿ ಸಂಸ್ಮರಣ ಗ್ರಂಥ ಆಕರ ಗ್ರಂಥವಾಗಲಿ: ರಾಜಶೇಖರಗೌಡ

KannadaprabhaNewsNetwork | Updated : Oct 15 2023, 12:46 AM IST

ಸಾರಾಂಶ

ನರೇಗಲ್ಲ ಹಿರೇಮಠದಲ್ಲಿ ಬೀಚಿ ಬಳಗದ ಪಾಕ್ಷಿಕ ಸಭೆ ನಡೆಯಿತು.
ನರೇಗಲ್ಲ:ಸ್ಥಳೀಯ ಬೀಚಿ ಬಳಗದ ದಶಮಾನೋತ್ಸವದ ನಿಮಿತ್ತ ಹೊರತರಲು ಇಚ್ಛಿಸಿರುವ ಸಂಸ್ಮರಣ ಗ್ರಂಥ ಒಂದು ಆಕರ ಗ್ರಂಥವಾಗಿರಲಿ. ಇದರಿಂದ ಬೀಚಿ ಸಾಹಿತ್ಯನ್ನು ಇನ್ನಷ್ಟು ಹೆಚ್ಚಿಗೆ ಓದುವ ಪ್ರೇರಣೆ ಎಲ್ಲರಿಗೂ ದೊರಕುವಂತಾಗಲಿ ಎಂದು ನ್ಯಾಯವಾದಿ ರಾಜಶೇಖರಗೌಡ ಪಾಟೀಲ ಹೇಳಿದರು. ಅವರು ಸ್ಥಳೀಯ ಹಿರೇಮಠದ ಸಭಾಭವನದಲ್ಲಿ ನಡೆದ ಬೀಚಿ ಬಳಗದ ಪಾಕ್ಷಿಕ ಸಭೆಯಲ್ಲಿ ಮಾತನಾಡಿ, ಬೀಚಿ ಕನ್ನಡ ನಾಡು ಕಂಡ ಅಪರೂಪದ ಹಾಸ್ಯ ಸಾಹಿತಿ. ಅವರ ಪುಸ್ತಕಗಳನ್ನು ಓದುತ್ತಿದ್ದರೆ ಹಾಸ್ಯದ ಮೂಲಕವೇ ಜೀವನ ದರ್ಶನವಾಗುತ್ತದೆ. ನರೇಗಲ್ಲ ಬೀಚಿ ಬಳಗ ಪ್ರಾರಂಭವಾಗಿ ಹತ್ತು ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ದಶಮಾನೋತ್ಸವ ಆಚರಣೆ ಸ್ತುತ್ಯಾರ್ಹ. ಈ ಸಂದರ್ಭದಲ್ಲಿ ಬರುವ ಸ್ಮರಣ ಸಂಚಿಕೆ ಜಾಹೀರಾತುಗಳಿಂದ ತುಂಬಿ ಸುಮ್ಮನೆ ಏನೋ ಒಂದು ಗ್ರಂಥವಾಗುವುದರ ಬದಲಿಗೆ ಸಾಹಿತ್ಯದ ಹೂರಣ ತುಂಬಿ ಅದೊಂದು ಆಕರ ಗ್ರಂಥವಾಗಿರಲಿ ಎಂಬುದು ನಮ್ಮ ಆಶಯ ಎಂದರು. ನಿವೃತ್ತ ಪ್ರಾ.ಡಿ.ಎ. ಅರವಟಗಿಮಠ ಮಾತನಾಡಿ, ಬೀಚಿ ಬಳಗದ ಪದಾಧಿಕಾರಿಗಳ, ಸದಸ್ಯರ ಆಸೆಯೂ ಅದೇ ಆಗಿದೆ. ಇದನ್ನೊಂದು ಆಕರ ಗ್ರಂಥವನ್ನಾಗಿಸಿ, ಈ ಮೂಲಕ ಸಾರ್ವಜನಿಕರಲ್ಲಿ ಓದುವ ಹವ್ಯಾಸವನ್ನು ಬೆಳೆಸುವ ಗುರಿಯನ್ನು ಬೀಚಿ ಬಳಗ ಇಟ್ಟುಕೊಂಡಿದೆ ಎಂದರು. ನಿವೃತ್ತ ಶಿಕ್ಷಕ ಎಂ.ಎಸ್. ದಢೇಸೂರಮಠ ಮಾತನಾಡಿ, ದಶಮಾನೋತ್ಸವದ ನಿಮಿತ್ತ ಬಳಗವು ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಂಡಿದೆ. ಈ ಅಭಿಯಾನಕ್ಕೆ ನರೇಗಲ್ಲ ಮತ್ತು ಜಕ್ಕಲಿ ಗ್ರಾಮಸ್ಥರು ತೋರಿಸುತ್ತಿರುವ ಅಭಿಮಾನ ನಮ್ಮನ್ನು ಮೂಕವಿಸ್ಮಿತಗೊಳಿಸಿದೆ. ಇದೇ ರೀತಿ ಅಭಿಯಾನವನ್ನು ಮುಂದುವರೆಸಿ ಸದಸ್ಯತ್ವವನ್ನು ಹೆಚ್ಚು ಮಾಡೋಣ ಎಂದರು. ಈ ವೇಳೆ ಖಜಾಂಚಿ ಶಿವಯೋಗಿ ಜಕ್ಕಲಿ ಈವರೆಗೆ ಸದಸ್ಯರಾದವರ ಸಂಖ್ಯೆ ಮತ್ತು ಆಯವ್ಯಯಗಳ ವಿವರವನ್ನು ನೀಡಿದರು. ಉಪನ್ಯಾಸಕ ಡಾ. ಕಲ್ಲಯ್ಯ ಹಿರೇಮಠ ಈವರೆಗೆ ಸ್ಮರಣ ಸಂಚಿಕೆಗೆ ಬಂದ ಲೇಖನಗಳು ಮತ್ತು ಕವನಗಳ ಬಗೆಗಿನ ವಿವರಣೆ ನೀಡಿದರು. ಇನ್ನೂ ಲೇಖನ, ಕವನ ಕಳಿಸುವವರು ಅ. ೨೦ರೊಳಗೆ ಕಳಿಸಬೇಕೆಂದು ಸಂಪಾದಕ ಹಿರೇಮಠ ತಿಳಿಸಿದರು. ನಿಕಟಪೂರ್ವ ಅಧ್ಯಕ್ಷ ಸುರೇಶ ಹಳ್ಳಿಕೇರಿ, ನಿವೃತ್ತ ಮುಖ್ಯಶಿಕ್ಷಕ ಅರುಣ.ಬಿ.ಕುಲಕರ್ಣಿ ಮಾತನಾಡಿದರು. ಬಳಗದ ಅಧ್ಯಕ್ಷ ಕೆ.ಎಸ್. ಕಳಕಣ್ಣವರ ಅಧ್ಯಕ್ಷತೆ ವಹಿಸಿದ್ದರು. ಬಿ.ಟಿ. ತಾಳಿ, ಆರ್.ಎ. ಪಾಟೀಲ, ಚಂದ್ರಾಮ ಗ್ರಾಮಪುರೋಹಿತ, ಬಿ.ಎ. ಕಲಾಲಬಂಡಿ, ಬಿ.ಬಿ. ಕುರಿ, ಶರಣಪ್ಪ ಕಡೆತೋಟದ, ಗುರುಪಾದಪ್ಪ ಬೆಲ್ಲದ, ಈಶ್ವರಪ್ಪ ಇಳಕಲ್ಲ, ಕಾಶಪ್ಪ ಸಂಗನಾಳ, ಎಸ್.ಎಂ. ಸಂಗನಾಳ, ಡಾ. ಎಲ್.ಎಸ್. ಗೌರಿ, ಆರ್.ಎಸ್. ಮಠದ, ಸಂಘಟನಾ ಕಾರ್ಯದರ್ಶಿ ಸಿ.ಕೆ. ಕೇಸರಿ, ಭಾರತಿ ಶಿರಸಿ, ಶಿಕ್ಷಕ ಮಹಾದೇವಪ್ಪ ಬೇವಿನಕಟ್ಟಿ, ರೇಣುಕಮ್ಮ ನಾಯ್ಕರ, ಉಪಾಧ್ಯಕ್ಷ ಆರ್.ಎಸ್. ನರೇಗಲ್ಲ, ಜೆ.ಎ. ಪಾಟೀಲ, ಸಂಗಮೇಶ ಮೆಣಸಿಗಿ ಇದ್ದರು. ಕಾರ್ಯದರ್ಶಿ ಎಚ್.ವಿ. ಈಟಿ ನಿರೂಪಿಸಿದರು. ಸಂಚಾಲಕ ಈಶ್ವರ ಬೆಟಗೇರಿ ಸ್ವಾಗತಿಸಿದರು. ಉಪಾಧ್ಯಕ್ಷೆ ನಿರ್ಮಲಾ ಹಿರೇಮಠ ವಂದಿಸಿದರು.

Share this article