ರಾಮನಗರ: ಓವರ್ ಟೇಕ್ ಮಾಡುವ ಭರದಲ್ಲಿ ಮುಂದೆ ಹೋಗುತ್ತಿದ್ದ ಲಾರಿಗೆ ಒಮ್ನಿ ಕಾರು ಡಿಕ್ಕಿ ಹೊಡೆದ ಪರಿಣಾಮ ಪತಿ–ಪತ್ನಿ ಸೇರಿದಂತೆ ಒಂದೇ ಕುಟುಂಬದ ಮೂವರು ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಹೊರವಲಯದ ಕೆಂಪೇಗೌಡನದೊಡ್ಡಿ ಬಳಿಯ ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದೆ. ಬೆಂಗಳೂರಿನ ಪೀಣ್ಯ 2ನೇ ಹಂತದ ನಿವಾಸಿಗಳಾದ ರಾಜೇಶ್(50), ಅವರ ಪತ್ನಿ ಸುಮಾ (45) ಹಾಗೂ ಅತ್ತೆ ಲಕ್ಕಮ್ಮ (65) ಮೃತರು. ಗಾಯಗೊಂಡಿರುವ ದಂಪತಿ ಪುತ್ರರಾದ ಮೋಹನ್, ರೋಹನ್, ಸಹೋದರ ಸುರೇಶ್ ಹಾಗೂ ಅವರ ಪುತ್ರ ಸೃಜನ್ ಅವರಿಗೆ ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮಹಾಲಯ ಅಮಾವಾಸ್ಯೆ ಹಿನ್ನೆಲೆಯಲ್ಲಿ ಪಿತೃಪಕ್ಷ ಪೂಜೆ ಮಾಡಿಸುವುದಕ್ಕಾಗಿ ಕುಟುಂಬದ ಏಳು ಮಂದಿ ಕಾರಿನಲ್ಲಿ ಶ್ರೀರಂಗಪಟ್ಟಣಕ್ಕೆ ತೆರಳುತ್ತಿದ್ದರು. ಕಾರು ಚಾಲನೆ ಮಾಡುತ್ತಿದ್ದ ರಾಜೇಶ್, ಕೆಂಪೇಗೌಡನದೊಡ್ಡಿ ಬಳಿ ಮುಂದೆ ಹೋಗುತ್ತಿದ್ದ ಲಾರಿಯನ್ನು ಹಿಂದಿಕ್ಕುವ ಭರದಲ್ಲಿ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ರಾಜೇಶ್ ಮತ್ತು ಸುಮಾ ಸ್ಥಳದಲ್ಲೇ ಸಾವನ್ನಪ್ಪಿದರೆ, ಗಂಭೀರವಾಗಿ ಗಾಯಗೊಂಡಿದ್ದ ಲಕ್ಕಮ್ಮ ಅವರು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದರು. ಘಟನೆಯಿಂದಾಗಿ ಹೆದ್ದಾರಿಯಲ್ಲಿ ಕೆಲ ಹೊತ್ತು ಸಂಚಾರ ಅಸ್ತವ್ಯಸ್ತವಾಯಿತು. ಸಾರ್ವಜನಿಕರ ನೆರವಿನಿಂದ ಜಖಂಗೊಂಡಿದ್ದ ಕಾರನ್ನು ರಸ್ತೆ ಪಕ್ಕಕ್ಕೆ ಸರಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.ಈ ಘಟನೆ ಸಂಬಂಧ ರಾಮನಗರ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.